ಅನುಭವ ಮಂಟಪ ಬಸವತತ್ವ ಸಾರಬೇಕು ವಿನಃ ಸನಾತನ ಚಿಂತನೆಗಳನ್ನಲ್ಲ; ಸಿದ್ದರಾಮಯ್ಯ
ಬೆಂಗಳೂರು (ಜ. 8): ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಚಾಲನೆ ನೀಡಿದ್ದೆವು. ಅದಕ್ಕೆ ಈಗ ಯಡಿಯೂರಪ್ಪ ಶಿಲಾನ್ಯಾಸ ಮಾಡಿದ್ದಾರೆ. ಸನಾತನ ಧರ್ಮದ ಮರುಸೃಷ್ಟಿ ಎನ್ನುತ್ತಾರೆ. ಆದರೆ ಬಸವಣ್ಣ ಹೋರಾಡಿದ್ದೇ ಸನಾತನ ಧರ್ಮದ ವಿರುದ್ಧ ಎಂದು ವಿಪಕ್ಷ ಸಿದ್ದರಾಮಯ್ಯ ತಿಳಿಸಿದರು. ಕಾಂಗ್ರೆಸ್ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಅನುಭವ ಮಂಟಪ ಬಸವ ತತ್ವವನ್ನು ಸಾರುವಂತಿರಬೇಕೇ ಹೊರತು, ಬಸವಣ್ಣನವರೇ ವಿರೋಧಿಸಿದ ಸನಾತನ ಚಿಂತನೆಗಳನ್ನಲ್ಲ. ಯಡಿಯೂರಪ್ಪ ಅವರು ಆರ್.ಎಸ್.ಎಸ್ ನವರ ಮುಲಾಜಿಗೆ ಒಳಗಾಗಿ ಅನುಭವ ಮಂಟಪ ಸ್ಥಾಪನೆ ಮೂಲಕ ಸನಾತನ ಪ್ರಗತಿಪರ ಚಿಂತನೆಯ ಮರುಸೃಷ್ಟಿ ಮಾಡುತ್ತೇವೆ ಅಂತ ಹೇಳುತ್ತಿದ್ದಾರೆ. ನಾವು ಗಾಂಧಿ, ಲೊಹಿಯಾ ಹಿಂದುತ್ವದವರು. ಬಿಜೆಪಿಯವರು ಸಾರ್ವಕರ್ ಪ್ರತಿಪಾದಕರು. ಇದು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾದುದು ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು
ಪಕ್ಷ ಕಷ್ಟದಲ್ಲಿದೆ. ಧೃತಿಗೆಡಬೇಡಿ; ಕಾರ್ಯಕರ್ತರಿಗೆ ಕರೆ
ಪಕ್ಷ ಇಂದು ಸಂಕಷ್ಟದಲ್ಲಿದೆ, ಆದರೆ ಇದು ತಾತ್ಕಾಲಿಕ. ಪಕ್ಷ ಹಿಂದೆಯೂ ಸಂಕಷ್ಟ ಎದುರಿಸಿತ್ತು. ಕಷ್ಟ,ಸುಖ ರಾಜಕೀಯ ಪಕ್ಷಗಳಿಗೆ ಸ್ವಾಭಾವಿಕ. ಅದು ಹಗಲು, ರಾತ್ರಿಯಿದ್ದಂತೆ. 1977ರಲ್ಲಿಯೂ ಪಕ್ಷ ಸೋಲು ಕಂಡಿತ್ತು. ಕೇವಲ ಮೂರು ವರ್ಷಗಳಲ್ಲಿ ಗೆದ್ದು ಬೀಗಿತ್ತು. ಆಗ ಮತ್ತೆ ಇಂದಿರಾ ಗಾಂಧಿ ಪ್ರಧಾನಿ ಹುದ್ದೆಗೇರಿದ್ದರು. 2004ರಲ್ಲಿಯೂ ಸೋನಿಯಾ ಗಾಂಧಿ ಅಧ್ಯಕ್ಷರಾಗಿದ್ದಾಗ ಕಾಂಗ್ರೆಸ್ ಬಗ್ಗೆ ಹೀನಾಯ ಟೀಕೆ ಮಾಡಿದರೂ, ಆದರೆ, 2004ರಲ್ಲಿ ಸೋನಿಯಾ ಗಾಂಧಿ ನಾಯಕತ್ವದಲ್ಲಿ ಮತ್ತೆ ಪಕ್ಷ ಗೆದ್ದಿತು. 10 ವರ್ಷಗಳ ಬಳಿಕ ಮತ್ತೆ ಅಧಿಕಾರಕ್ಕೆ ಬಂದೆವು. ಮತ್ತೆ ಈಗ ಪಕ್ಷಕ್ಕೆ ಕಷ್ಟಬಂದಿದೆ. ಇದರಿಂದ ಕಾರ್ಯಕರ್ತರು ಧೃತಿಗೆಡಬಾರದು. ಕಾಂಗ್ರೆಸ್ ಪಕ್ಷದಷ್ಟು ಹೋರಾಡಿದ ಪಕ್ಷ ಇಲ್ಲ ಎಂದರು.
ಈ ವರ್ಷ ಗ್ರಾಮ ಮಟ್ಟದಿಂದ ರಾಜ್ಯಮಟ್ಟದವರೆಗೆ ಪಕ್ಷ ಸಂಘಟನೆಗೆ ಒತ್ತುಕೊಡಬೇಕು. ಮಹಾತ್ಮ ಗಾಂಧಿಯವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವೇನಾದರೂ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸದಿದ್ದರೆ ದೇಶ ಇಂದಿಗೂ ಬ್ರಿಟಿಷರ ಗುಲಾಮಗಿರಿಯಲ್ಲೇ ಇರಬೇಕಿತ್ತು. ಇದು ಕಾಂಗ್ರೆಸ್ ಬೆಳೆದು ಬಂದ ಹಾದಿ. ಆದರೆ ನಮ್ಮಂತೆ ಬಿಜೆಪಿಯವರು ಸ್ವಾತಂತ್ರ್ಯ ಹೋರಾಟಗಾರರಲ್ಲ, ಅವರೇನಿದ್ದರೂ ಸ್ವಾತಂತ್ರ್ಯದ ಫಲಾನುಭವಿಗಳು ಮಾತ್ರ ಎಂದು ಟೀಕಿಸಿದರು.
ಬಿಜೆಪಿ ಸಾಧನೆ ಶೂನ್ಯ
ದೇಶಕ್ಕೆ ಮೋದಿಯವರ ಕೊಡುಗೆ ಏನು ಇಲ್ಲ. ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟಕೊಂಡು ಆಡಳಿತ ನಡೆಸುವುದನ್ನು ಬಿಟ್ಟರೆ ಯಾವುದೇ ಸಮಸ್ಯೆಗಳಿಗೆ ಮೋದಿ ಸರ್ಕಾರದಿಂದ ಪರಿಹಾರ ಸಿಕ್ಕಿಲ್ಲ. ಯಡಿಯೂರಪ್ಪ ಅವರು ಸಿಎಂ ಆದ ಬಳಿಕ ರಾಜ್ಯದಲ್ಲಿ ಯಾವುದೇ ಹೊಸ ಕಾರ್ಯಕ್ರಮ ಘೋಷಣೆ ಮಾಡಿಲ್ಲ. ಕಳೆದ ಒಂದೂವರೆ ವರ್ಷದಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ. ಇದನ್ನು ಹೊರತುಪಡಿಸಿದರೆ ಯಾವುದೇ ಸಾಧನೆ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು
ಡಿ ನೋಟಿಫಿಕೇಷನ್ ಪ್ರಕರಣದಲ್ಲಿ ನ್ಯಾಯಾಲಯಸಿಎಂ ಯಡಿಯೂರಪ್ಪ ಗೆ ಛೀಮಾರಿ ಹಾಕಿ 25 ಸಾವಿರ ದಂಡ ವಿಧಿಸಿದೆ. ಅವರಿಗೆ ಮರ್ಯಾದೆ ಇದ್ದರೆ ಕೂಡಲೇ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಬೇಕು. ಇಂಥ ಲಜ್ಜೆಗೆಟ್ಟ ಸರ್ಕಾರ ರಾಜ್ಯದ ಇತಿಹಾಸದಲ್ಲಿ ಎಂದೂ ಬಂದಿರಲಿಲ್ಲ. ಈಗ ನಾವು ಸುಮ್ಮನೆ ಕೂರುವ ಕಾಲವಲ್ಲ. ಹೋರಾಟ, ಸಂಘಟನೆ ನಮ್ಮ ಗುರಿಯಾಗಬೇಕು. ನಾವು ಹೋರಾಟ ಮಾಡಬೇಕಿರುವುದು ಮೋದಿ, ಯಡಿಯೂರಪ್ಪ ವಿರುದ್ಧ ಅಲ್ಲ. ಆರ್ ಎಸ್ ಎಸ್ ನ ಕೋಮುವಾದದ ವಿರುದ್ಧ. ಕಾಂಗ್ರೆಸ್ ಸಾಂಪ್ರದಾಯಿಕ ಮತಗಳು ವಿಭಜನೆ ಆಗಿದೆ. ಅದನ್ನು ವಾಪಸ್ ತರುವ ಪ್ರಯತ್ನ ಆಗಬೇಕು ಎಂದು ಕರೆ ನೀಡಿದರು.