ಹೀರೋಗಳಾಗಿ ನಿವೃತ್ತಿ ಹೊಂದಿ, ಗುಲಾಮರಂತೆ ವರ್ತಿಸಬೇಡಿ; ಅಧಿಕಾರಿಗಳಿಗೆ ಬೆವರಿಳಿಸಿದ ಸಂಸದ ಎಸ್​. ಮುನಿಸ್ವಾಮಿ

ಕೋಲಾರ(ಜ.09): ಕೋಲಾರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೆಡಿಪಿ ಸಭೆಯಲ್ಲಿ,  ಅಧಿಕಾರಿಗಳ ಕಾರ್ಯವೈಖರಿ ವಿರುದ್ದ ಸಂಸದ ಎಸ್ ಮುನಿಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸಭೆಯಲ್ಲಿ ಉಸ್ತುವಾರಿ ಸಚಿವ ನಾಗೇಶ್,  ಎಮ್ ಎಲ್ ಸಿ ಗೋವಿಂದರಾಜು, ಸಿಇಒ ನಾಗರಾಜ್ ರವರ ಸಮ್ಮುಖದಲ್ಲಿ ಅಧಿಕಾರಿಗಳನ್ನ ಸಖತ್ತಾಗಿಯೇ ಕ್ಲಾಸ್ ತೆಗೆದುಕೊಂಡರು.  ಮೊದಲು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಾಲಾಜಿಯವರನ್ನು ತರಾಟೆಗೆ ತೆಗೆದುಕೊಂಡ ಮುನಿಸ್ವಾಮಿ, ಆಹಾರ ಗುತ್ತಿಗೆ ನೀಡುವ ವಿಚಾರದಲ್ಲಿ ಏರುಪೇರು ನಡೆದಿದ್ದು , ಕಡಿಮೆ ಬೆಲೆಗೆ ಹರಾಜು ಕರೆದಿರುವ ಗುತ್ತಿಗೆದಾರರಿಗೆ ಅಧಿಕಾರಿಗಳು ಸಹಕಾರ ನೀಡಿರುವ ದೂರು ಕೇಳಿಬಂದಿದೆ. ಇದಕ್ಕೆ ಸ್ಪಷ್ಟನೆ ನೀಡುವಂತೆ ತಿಳಿಸಿದರೆ, ಈ ವೇಳೆ ಉತ್ತರಿಸಲು ಮುಂದಾದ ಅಧಿಕಾರಿ ಬಾಲಾಜಿ,  ಸರ್ ತುಂಬಾ ಒಳ್ಳೆ ಪ್ರಶ್ನೆ ಕೇಳಿದಿರಿ ಎಂದಿದ್ದಾರೆ. ಆಗ ಸಿಟ್ಟಾದ ಸಂಸದರು, ಹೌದು ಒಳ್ಳೆ ಪ್ರಶ್ನೆ ಆಗಿದ್ದಕೆ ಕೇಳಿರುವುದು,  ನನ್ನನ್ನು ನುಗ್ಗೆ ಮರಕ್ಕೆ ಹತ್ತಿಸಬೇಡ ಎಂದು ಮಾತಿನ ಸಮರ ಆರಂಭಿಸಿದರು.

ಬಳಿಕ  ಸಹಕಾರ ಇಲಾಖೆಯ ಹಿರಿಯ ಅಧಿಕಾರಿ ನೀಲಪ್ಪನವರ್ ವಿರುದ್ದ ಗುಡುಗಿದ ಮುನಿಸ್ವಾಮಿ, ಜಿಲ್ಲೆಯಲ್ಲಿ ನಡೆಯುತ್ತಿರುವ ಸಾಲ ವಿತರಣೆ ಹಾಗು ಸಹಕಾರ ಸಂಘದ ಸದಸ್ಯರ ಸದಸ್ಯತ್ವದ ಮುಂದುವರೆಸುವುದು ಹಾಗೂ ಸಹಕಾರ ಸಂಘದ ಚುನಾವಣೆಗೆ ಮತ ಚಲಾವಣೆ ಹಕ್ಕು ನೀಡುವ ವೇಳೆ   ಹಾಲಿ ಸದಸ್ಯರ ಹೆಸರನ್ನ ಕೈ ಬಿಟ್ಟಿರುವುದಕ್ಕೆ ಕೆಂಡಕಾರಿದರು.  ಸಂಘದ ಸದಸ್ಯ ಸಹಕಾರ ಸಂಘದ ಕಚೇರಿಯಲ್ಲಿ ಸಭೆಗಳಿಗೆ ಹಾಜರಾಗಿಲ್ಲ ಎಂದು ಗೈರು ಹಾಜರಿ ತೋರಿಸಿ, ಸುಮಾರು ಸದಸ್ಯರ ಸದಸ್ಯತ್ವ ರದ್ದು ಮಾಡಲಾಗಿದೆ. ಹಾಗಾಗಿ ನೊಂದವರು ನ್ಯಾಯಾಲಯ ಮೆಟ್ಟಿಲೇರಿ ಮತ್ತೆ ಮತ ಚಲಾವಣೆ ಹಕ್ಕು ಪಡೆದುಕೊಂಡಿದ್ದಾರೆ.

ಅಧಿಕಾರಿಗಳು ಪರಿಶೀಲನೆ ಮಾಡಿದ್ದದ್ದನ್ನ ನ್ಯಾಯಾಲಯ ಹೇಗೆ ಗಮನಸಿತು ಹೇಳಿ ಎಂದು ಏರು ದನಿಯಲ್ಲಿ ಪ್ರಶ್ನಿಸಿ,  ಯಾರೋ ಕೆಲ ವ್ಯಕ್ತಿಗಳು ಹೇಳಿದರೆಂದು ಮಾಡಿದ್ದಾಗಿ ಮುನಿಸ್ವಾಮಿ ಅಧಿಕಾರಿಯ ವಿರುದ್ದ ವಾಗ್ದಾಳಿ ನಡೆಸಿದರು. ಹೀಗಾಗಿ ನೀವು  ಯಾರದ್ದೊ ಗುಲಾಮರಾಗಿ ಇರಬೇಡಿ, ಹೀರೋ ತರ ನಿವೃತ್ತಿ ಹೊಂದಿ ಮನೆಗೆ ಹೋಗಿ,  ವಿಲನ್ ಆಗಬೇಡಿ, ನಿಮ್ಮಷ್ಟಕ್ಕೆ ಬಂದವರಿಗೆ ಮಾತ್ರ ಸಾಲ ಕೊಡುತ್ತೀರಾ. ಸಹಕಾರ ಸಂಘದ ಸದಸ್ಯರ ಮತಗಳನ್ನ ಅನೂರ್ಜಿತ ಮಾಡಿದ್ದೀರಾ. ಸಹಕಾರ ಸಂಘದಲ್ಲಿ ಹಸ್ತಲಾಘವ ಚಿಹ್ನೆಯಿದೆ. ಅದು ಸಹಕಾರದ ಸಂಕೇತ. ಆದರೆ ಕೋಲಾರದಲ್ಲಿ ಕೆಲವರ ಜೊತೆಗೆ ಮಾತ್ರ ಸ್ನೇಹ ಎಂಬ  ರೀತಿಯಲ್ಲಿದೆ. ನೀವು ಹೀಗೆ ಮಾಡಿದಲ್ಲಿ ಜೈಲಿನಲ್ಲಿ ಕಂಬಿ ಎಣಿಸುತ್ತೀರಾ ಎಂದು ಎಚ್ಚರಿಕೆ ನೀಡಿದರು.

ವಿಸ್ಟ್ರಾನ್ ಕಂಪನಿ ಧಾಂಧಲೆ ಕುರಿತು ಕೈಗಾರಿಕಾ ಇಲಾಖೆಯ ಅಧಿಕಾರಿಗೆ ಬೆವರಿಳಿಸಿದ ಸಂಸದ

ಕೆಡಿಪಿ ಸಭೆಯಲ್ಲಿ ಮಧ್ಯಾಹ್ನ ಊಟದ ವಿರಾಮ ನಂತರ  ಸಭೆಯಲ್ಲೂ ಅಧಿಕಾರಿಗಳ ವಿರುದ್ದ ಮುನಿಸ್ವಾಮಿ ವಾಗ್ದಾಳಿ ನಡೆಸಿದರು, ಕೋಲಾರದ ವಿಸ್ಟ್ರಾನ್ ಕಂಪನಿಯಲ್ಲಿ ನಡೆದ ಧಾಂಧಲೆ  ವಿಚಾರವಾಗಿ,  ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕ ರವಿಚಂದ್ರರನ್ನ ತರಾಟೆಗೆ ತೆಗೆದುಕೊಂಡ ಸಂಸದರು ಅಧಿಕಾರಿಯ ಬೆವರಿಳಿಸಿದರು, ಸಭೆಯಲ್ಲಿ ಏಕವಚನದಲ್ಲೇ ವಾಗ್ದಾಳಿ ನಡೆಸಿ,  ನೀನು ಮಾಡಿರೋದು ಚಿಲ್ಲರೆ ಕೆಲಸ, ನೀನೂ ಚಿಲ್ಲರೇನೆ ಬಿಡು ಎಂದರು.

ಕೈಗಾರಿಕಾ ಪ್ರದೇಶದಲ್ಲಿ ಯಾವ ಕಂಪನಿಯಲ್ಲಿ ಯಾವ ಸಮಸ್ಯೆಯಿದೆ, ಎಷ್ಟು ಸಲ ಸಭೆ ನಡೆಸಿದ್ದೀಯಾ, ಕಾರ್ಮಿಕರ ಸಂಬಳದ ಸಮಸ್ಯೆ ಯಾಕೆ ನಿಮ್ಮ ಗಮನಕ್ಕೆ ಬಂದಿಲ್ಲ ಎಂದು ಗುಡುಗಿದಾಗ. ಉತ್ತರಿಸಿದ ಅಧಿಕಾರಿ ರವಿಚಂದ್ರ ವಿಸ್ಟ್ರಾನ್ ಕಂಪನಿಯಲ್ಲಿ ಸಂಬಳದ ಸಮಸ್ಯೆ ಯಾರೊಬ್ಬರ ಗಮನಕ್ಕೂ ಬಂದಿಲ್ಲ ಎಂದರು.ಇನ್ನು ಸಭೆಯಲ್ಲಿ ಕೈಗಾರಿಕೆಗಳ  ಸಿ ಎಸ್ ಆರ್ ಅನುದಾನ ಬಳಕೆಯ ಮಾಹಿತಿಯನ್ನ ಕೇಳಿದ ಸಂಸದರಿಗೆ ಮಾಹಿತಿಯೆ ಇಲ್ಲವೆಂದರು. ಆಗ ಸಂಸದರು ಗರಂ ಆದರು. ಕೈ  ಅಲ್ಲಾಡಿಸಿಕೊಂಡು ಬಂದಿದಿಯಾ,  ಬೇಕಾಗಿರೋ ಮಾಹಿತಿನ ಆಫಿಸ್ ನಲ್ಲೇ ಬಿಟ್ಟು ಬಂದಾ.  ನಾಚಿಕೆ ಆಗಬೇಕು ನಿಮಗೆ  ಎಂದರು, ವಿಸ್ಟ್ರಾನ್ ಕಂಪನಿಯಲ್ಲಿ ನಡೆದ  ಗದ್ದಲದಿಂದ ಪ್ರಪಂಚದಲ್ಲಿ ಕೋಲಾರಕ್ಕೆ ಕಪ್ಪು ಚುಕ್ಕೆ ಬಂದಿದೆ ಎಂದು ಅಧಿಕಾರಿ ರವಿಚಂದ್ರ ವಿರುದ್ದ ಕಿಡಿಕಾರಿದರು.

ಒಟ್ಟಿನಲ್ಲಿ  ಕೋಲಾರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ಬೆವರಿಳಿಸಿದ ಸಂಸದ ಮುನಿಸ್ವಾಮಿ, ಕೆಲ ಇಲಾಖೆಗಳ ಅಧಿಕಾರಿಗಳ ಜೊತೆಗೆ ಪ್ರತ್ಯೇಕ ಸಭೆಯನ್ನು ನಡೆಸಿ ಮತ್ತಷ್ಟು  ಯೋಜನೆಯ ಜಾರಿಯ ಕುರಿತು ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *