ಭಂಡಾರ ಆಸ್ಪತ್ರೆ ಅಗ್ನಿ ಅವಘಡ; ಸಂತ್ರಸ್ಥರಿಗೆ ಮಹಾರಾಷ್ಟ್ರ ಸರ್ಕಾರದಿಂದ 5 ಲಕ್ಷ ರೂ ಪರಿಹಾರ
ಮುಂಬೈ: ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಜನರಲ್ ಆಸ್ಪತ್ರೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ 10 ಮಕ್ಕಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ 5 ಲಕ್ಷ ರೂ ಪರಿಹಾರ ಘೋಷಣೆ ಮಾಡಿದೆ.
ಈ ಕುರಿತು ಮಾತನಾಡಿದ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ಟೊಪೆ ಅವರು, ಭಂಡಾರ ಆಸ್ಪತ್ರೆಯಲ್ಲಿ ನಡೆದ ಅಗ್ನಿ ಅವಘಡದಲ್ಲಿ 10ಮಕ್ಕಳು ಸಾವನ್ನಪ್ಪಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖೆ ವತಿಯಿಂದ ತನಿಖೆಗೆ ಆದೇಶಿಸಲಾಗಿದೆ. ಅಂತೆಯೇ ದುರಂತದಲ್ಲಿ ಗಾಯಗೊಂಡ ಮಕ್ಕಳು ಮತ್ತು ಇತರರ ಚಿಕಿತ್ಸೆಗೆ ಕ್ರಮ ಕೈಗೊಳ್ಳಲಾಗಿದೆ. ಅಂತೆಯೇ ದುರಂತದಲ್ಲಿ ಸಾವನ್ನಪ್ಪಿದ ಮಕ್ಕಳ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ ಪರಿಹಾರ ನೀಡುವುದಾಗಿ ಹೇಳಿದರು.
ಮಹಾರಾಷ್ಟ್ರದ ಭಂಡಾರ ಜಿಲ್ಲೆಯ ಜನರಲ್ ಆಸ್ಪತ್ರೆಯಲ್ಲಿ ಈ ಘಟನೆ ಸಂಭವಿಸಿದ್ದು, ರಾತ್ರಿ 2 ಗಂಟೆ ಸುಮಾರಿಗೆ ನವಜಾತ ಶಿಶುಗಳಿದ್ದ ತೀವ್ರ ನಿಗಾಘಟಕದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ವಾರ್ಡ್ ವ್ಯಾಪಿಸಿದ್ದು, ವಾರ್ಡ್ ನಲ್ಲಿದ್ದ 10 ಮಕ್ಕಳು ಸಾವನ್ನಪ್ಪಿವೆ. ಬೆಂಕಿ ಗೋಚರವಾಗುತ್ತಿದ್ದಂತೆಯೇ ಸಿಬ್ಬಂದಿಗಳು ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾದರು. ಅಲ್ಲದೆ ಶಿಶುಗಳನ್ನು ಬೇರೆಡೆ ರವಾನೆ ಮಾಡುವ ಕಾರ್ಯ ಮಾಡಿದರಾದರೂ, ಅಷ್ಟುಹೊತ್ತಿಗಾಗಲೇ ಬೆಂಕಿ ಕ್ಷಣಮಾತ್ರದಲ್ಲಿ ಇಡೀ ವಾರ್ಡ್ ಅನ್ನು ವ್ಯಾಪಿಸಿತು. ಪರಿಣಾಮ 10 ಮಕ್ಕಳು ಸಾವನ್ನಪ್ಪಿದ್ದರು. ಸಿಬ್ಬಂದಿಗಳ ಹರಸಾಹಸದಿಂದಾಗಿ 7 ಮಕ್ಕಳನ್ನು ರಕ್ಷಿಸಲಾಗಿದೆ.