ಭೋಪಾಲ್: ಕೋವ್ಯಾಕ್ಸಿನ್ ಲಸಿಕೆ ಪಡೆದಿದ್ದ ವ್ಯಕ್ತಿ ಸಾವು, ವಿಷದಿಂದ ಸಾವು ಎಂದು ವೈದ್ಯರ ಶಂಕೆ!
ಭೋಪಾಲ್: ಕೊವ್ಯಾಕ್ಸಿನ್ ಲಸಿಕೆ ಮೂರನೇ ಹಂತದ ಪ್ರಯೋಗದಲ್ಲಿ ಭಾಗವಹಿಸಿದ್ದ ಭೋಪಾಲ್‌ನ ಸ್ವಯಂಸೇವಕ 9 ದಿನಗಳ ಬಳಿಕ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಡಿಸೆಂಬರ್ 12ರಂದು ಭೋಪಾಲ್‌ನ ಪೀಪಲ್ಸ್ ಕಾಲೇಜು ಮತ್ತು ವೈದ್ಯಕೀಯ ವಿಜ್ಞಾನಗಳು ಮತ್ತು ಸಂಶೋಧನಾ ಕೇಂದ್ರದಲ್ಲಿ ಕೊವ್ಯಾಕ್ಸಿನ್ ಮೊದಲ ಡೋಸ್ ಪಡೆದಿದ್ದ ಸ್ವಯಂ ಸೇವಕ, 42 ವರ್ಷದ ದಿನಗೂಲಿ ನೌಕರ ದೀಪಕ್ ಮರಾವಿ, ಡಿಸೆಂಬರ್ 21ರಂದು ಮೃತಪಟ್ಟಿದ್ದರು. ಈ ಬಗ್ಗೆ ಅವರ ಮಗ ಮೆಡಿಕಲ್ ಸೆಂಟರ್‌ಗೆ ಮಾಹಿತಿ ನೀಡಿದ್ದು, ಪ್ರಕರಣ ಶನಿವಾರ ಬೆಳಕಿಗೆ ಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಖಾಸಗಿ ಸಂಸ್ಥೆಯ ಪೀಪಲ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಉಪಕುಲಪತಿ ಡಾ.ರಾಜೇಶ್ ಕಪೂರ್, ಡಿಸೆಂಬರ್ 12 ರಂದು ನಡೆದ ಕೊವಾಕ್ಸಿನ್ ವಿಚಾರಣೆಯಲ್ಲಿ ಮೃತ ದೀಪಕ್ ಮರಾವಿ ಭಾಗವಹಿಸಿದ್ದರು. ಡಿಸೆಂಬರ್ 21ರಂದು ಅವರು ಮೃತಪಟ್ಟಿದ್ದಾರೆ.
ವಿಷದಿಂದ ಸಾವು
ಶವಪರೀಕ್ಷೆ ನಡೆಸಿದ ವೈದ್ಯರು ಮರಾವಿ ವಿಷ ಸೇವಿಸಿ ಸಾವನ್ನಪ್ಪಿದ್ದಾರೆ ಎಂದು ಶಂಕಿಸಿದ್ದಾರೆ. ಈ ಬಗ್ಗೆ ಮಧ್ಯಪ್ರದೇಶದ ಮೆಡಿಕೋ ಕಾನೂನು ಸಂಸ್ಥೆಯ ನಿರ್ದೇಶಕ ಡಾ.ಅಶೋಕ್ ಶರ್ಮಾ ಮಾಹಿತಿ ನೀಡಿದ್ದು, ದೀಪಕ್ ಮರಾವಿ ಮೃತದೇಹದಲ್ಲಿ ವಿಷದ ಅಂಶ ಪತ್ತೆಯಾಗಿದೆ. ಆದಾಗ್ಯೂ, ಅವರ ಒಳಾಂಗಗಳ ಪರೀಕ್ಷೆಯಿಂದ ಸಾವಿಗೆ ನಿಖರವಾದ ಕಾರಣ ತಿಳಿದುಬರುತ್ತದೆ ಎಂದು ಹೇಳಿದ್ದಾರೆ.