ಸಂಕ್ರಾಂತಿ ನಂತರ ಉಳಿದ ಡಿಗ್ರಿ ಕ್ಲಾಸ್ ಗಳ ಆರಂಭಕ್ಕೆ ಚಿಂತನೆ..! ಮತ್ತೊಂದು ಸಭೆಯ ಬಳಿಕ ಅಂತಿಮ ದಿನಾಂಕ ಪ್ರಕಟ..!
ರಾಜ್ಯದಲ್ಲಿ ಜನವರಿ 1 ರಿಂದ ಎಸ್ ಎಸ್ ಎಲ್ ಸಿ ಹಾಗೂ ದ್ವಿತೀಯ ಪಿಯು ತರಗತಿಗಳು ಆರಂಭವಾಗಿದೆ. ಇದ್ರ ಬೆನ್ನಲ್ಲೇ ಉಳಿದ ಮೊದಲ ಹಾಗೂ ದ್ವಿತೀಯ ವರ್ಷದ ಪದವಿ ತರಗತಿಗಳ ಪುನಾರಂಭಕ್ಕೆ ಉನ್ನತ ಶಿಕ್ಷಣ ಮುಂದಾಗಿದೆ. ರಾಜ್ಯದಲ್ಲಿ ಮೊದಲಿಗೆ ನವೆಂಬರ್ 17 ರಿಂದ ಅಂತಿಮ ವರ್ಷದ ಪದವಿ ತರಗತಿಗಳಲ್ಲನ್ನ ಆರಂಭಿಸಲಾಗಿತ್ತು. ಇದು ಯಶಸ್ವಿಯಾದ ಬೆನ್ನಲ್ಲೇ, 10 ಮತ್ತು 12ನೇ ತರಗತಿ ಪುನಾರಂಭ ಮಾಡಲಾಯ್ತು. ಈಗ ಸಂಕ್ರಾಂತಿ ನಂತರ ಬಾಕಿ ಉಳಿದಿರುವ ಮೊದಲ ಹಾಗೂ ದ್ವಿತೀಯ ವರ್ಷದ ಪದವಿ, ಸ್ನಾತಕೋತ್ತರ, ಡಿಪ್ಲೊಮೋ, ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಆಫ್ಲೈನ್ ತರಗತಿ ಆರಂಭಿಸುವ ಕುರಿತು ಶೀಘ್ರವೇ ದಿನಾಂಕ ಪ್ರಕಟಿಸಲು ಉನ್ನತ ಶಿಕ್ಷಣ ಇಲಾಖೆ ಸಜ್ಜಾಗಿದೆ.
ರಾಜ್ಯದ ಎಲ್ಲಾ ಎಲ್ಲ ವಿವಿಗಳ ಕುಲಪತಿಗಳ ಜತೆ ಡಿಸಿಎಂ ಅಶ್ವಥ್ ನಾರಾಯಣ್ ಸಮಾಲೋಚನೆ ನಡೆಸಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಕುಲಪತಿಗಳು ನೇರ ತರಗತಿಗಳನ್ನು ಆರಂಭಿಸುವಂತೆ ಸರಕಾರಕ್ಕೆ ಸಲಹೆ ನೀಡಿದ್ದಾರೆ. ಹೀಗಾಗಿ ಅದಕ್ಕೆ ಸಂಬಂಧಿಸಿದ ವರದಿಯನ್ನು ಕೂಡಲೇ ಕಳಿಸುವಂತೆ ಕೋರಲಾಗಿದೆ. 2021-22ರ ಶೈಕ್ಷಣಿಕ ವರ್ಷವನ್ನು ಯಾವಾಗಿನಿಂದ ಆರಂಭಿಸಬೇಕು ಎಂಬ ಬಗ್ಗೆ ಮಹತ್ವದ ಚರ್ಚೆ ನಡೆಯಿತು. ಯುಜಿಸಿ ನಿಯಮದಂತೆ ಮಾರ್ಚ್ನಲ್ಲಿ ಪರೀಕ್ಷೆ ಮುಗಿಯಬೇಕಾಗುತ್ತದೆ. ಆದರೆ, ಇನ್ನು ಹಲವಾರು ವಿವಿಗಳ ವ್ಯಾಪ್ತಿಯಲ್ಲಿ ಪಾಠಗಳು ಮುಗಿಯದ ಕಾರಣ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಪರೀಕ್ಷೆ ನಡೆಸುವ ಬಗ್ಗೆ ಚಿಂತಿಸಲಾಗುತ್ತಿದೆ.
ಆರೋಗ್ಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗ ಮತ್ತು ಸಾರಿಗೆ ಇಲಾಖೆ ಸೇರಿದಂತೆ ಹಲವು ಇಲಾಖೆಗಳೊಂದಿಗೆ ನಾಳೆ ಮತ್ತೊಂದು ಸುತ್ತಿನ ಸಭೆ ನಡೆಯಲಿದೆ. ಪದವಿ ತರಗತಿಗಳ ಅಥಿತಿ ಉಪನ್ಯಾಸಕರ ನೇಮಕಕ್ಕೆ ಆರ್ಥಿಕ ಇಲಾಖೆ ತಡೆ ಹಿಡಿದ ಕಾರಣ ನೇಮಕಾತಿ ಪ್ರಕ್ರಿಯೆ ಹಿಂದೆ ಉಳಿದಿತ್ತು. ಇದೀಗ ನಾಳೆ ಅಂತಿಮ ತೀರ್ಮಾನದ ಬಳಿಕ ಅಥಿತಿ ಉಪನ್ಯಾಸಕರ ನೇಮಕ ಬಗ್ಗೆಯೂ ಸ್ಪಷ್ಟ ಚಿತ್ರಣ ಸಿಗಲಿದೆ ಅಂತ ಕಾಲೇಜು ಶಿಕ್ಷಣ ಇಲಾಖೆಯ ಆಯುಕ್ತ ಪ್ರದೀಪ್ ಕುಮಾರ್ ತಿಳಿಸಿದ್ರು.
ಒಟ್ನಲ್ಲಿ ಸಂಕ್ರಾಂತಿ ನಂತರ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡು ಉಳಿದ ಡಿಗ್ರಿ ತರಗತಿಗಳ ಆರಂಭಕ್ಕೆ ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. ಆದ್ರೆ, ನಾಳೆಯ ಸಭೆಯ ಬಳಿಕ ದಿನಾಂಕ ಪ್ರಕಟಗೊಳ್ಳುವ ಸಾಧ್ಯತೆ ಇದೆ.