ಕೆಲ ತಿಂಗಳಲ್ಲಿ 30 ಕೋಟಿ ಜನರಿಗೆ ಕೋವಿಡ್-19 ಲಸಿಕೆ ನೀಡಿಕೆ: ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಜನವರಿ 16ರಿಂದ ಮೊದಲ ಹಂತದ ಕೋವಿಡ್-19 ಲಸಿಕೆ ನೀಡಿಕೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಇಂದು ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಾಗೂ ರಾಜ್ಯಗಳು ಸೂಕ್ತ ಸಮನ್ವಯದೊಂದಿಗೆ ಕೋವಿಡ್-19 ವಿರುದ್ಧ ಹೋರಾಟ ನಡೆಸುವ ಮೂಲಕ ಅನನ್ಯ ಒಕ್ಕೂಟ ವ್ಯವಸ್ಥೆಯನ್ನು ಪ್ರದರ್ಶಿಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಲಸಿಕೆ ಕುರಿತಂತೆ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿದ ಪ್ರಧಾನಿ, ಮುಂದಿನ ಕೆಲ ತಿಂಗಳಲ್ಲಿ 30 ಕೋಟಿ ಜನರಿಗೆ ಕೋವಿಡ್-19 ಲಸಿಕೆ ನೀಡಲಾಗುವುದು ಎಂದರು. ತ್ವರಿತವಾಗಿ ತೀರ್ಮಾನಗಳನ್ನು ತೆಗೆದುಕೊಳ್ಳುವ ಮೂಲಕ ಎಲ್ಲರೂ ಒಟ್ಟಾಗಿ ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ಯಶಸ್ವಿಯಾಗಿರುವುದು ತಮಗೆ ಸಂತಸವನ್ನುಂಟು ಮಾಡಿದೆ ಎಂದರು.
ಮೇಡ್ ಇನ್ ಇಂಡಿಯಾ ಲಸಿಕೆಯನ್ನು ನೀಡಲು ಅನುಮತಿ ಸಿಕ್ಕಿದ್ದು, ಮೊದಲ ಹಂತದಲ್ಲಿ 30 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ. ಮೊದಲ ಹಂತದಲ್ಲಿ 3 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲಾಗುವುದು, ಎರಡನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರು ಹಾಗೂ ಆರೋಗ್ಯ ಸಮಸ್ಯೆ ಇರುವ 50 ವರ್ಷದ ಒಳಗಿನವರು ಲಸಿಕೆ ಪಡೆಯಲಿದ್ದಾರೆ ಎಂದು ಪ್ರಧಾನಿ ಮೋದಿ ವಿವರಿಸಿದರು.
ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ವೇಳೆ ರಾಜ್ಯ ಸರ್ಕಾರಗಳು ಲಸಿಕೆಗೆ ಯಾವುದೇ ರೀತಿಯಲ್ಲೂ ಹಣ ವ್ಯಯ ಮಾಡುವ ಅಗತ್ಯವಿಲ್ಲ ಎಂದಿರುವ ಪ್ರಧಾನಿ ಮೋದಿ, ಲಸಿಕೆಯ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದ್ದಾರೆ.