ಶಿಕ್ಷಣ ಸಚಿವರ ಮನೆ ಮುಂದೆ ಕಸ ಗುಡಿಸಿ ಪೋಷಕರಿಂದ ಪ್ರತಿಭಟನೆಗೆ ಯತ್ನ
ಬೆಂಗಳೂರು(ಜ. 12): ಶಾಲೆಗಳಿಗೆ ಶುಲ್ಕ ಪಾವತಿಸುವ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೆ ವಿದ್ಯಾರ್ಥಿಗಳ ಪೋಷಕರನ್ನ ಗೊಂದಲಕ್ಕೆ ಸಿಲುಕಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ವಿರುದ್ಧ ಪೋಷಕರು ವಿನೂತನ ರೀತಿಯಲ್ಲಿ ಇಂದು ಪ್ರತಿಭಟನೆ ನಡೆಸಿದರು. ಬಸವೇಶ್ವರನಗರದಲ್ಲಿರುವ ಸಚಿವರ ಮನೆಯ ಮುಂದೆ ಪೋಷಕರು ಕಸ ಗುಡಿಸಿ ತಮ್ಮ ಪ್ರತಿಭಟನೆ ವ್ಯಕ್ತಪಡಿಸಲು ಮುಂದಾದ ಘಟನೆ ಇಂದು ನಡೆಯಿತು.
ಪ್ರತಿಭಟನೆ ನಡೆಸಲು ಅನುಮತಿ ಇಲ್ಲದ್ದರಿಂದ ಸಚಿವ ಮನೆ ಮುಂದೆ ಕಸ ಗುಡಿಸುವ ಪೋಷಕರ ಪ್ರಯತ್ನ ವಿಫಲವಾಯಿತು. ಪ್ರತಿಭಟನೆಯ ವಿಚಾರ ಮೊದಲೇ ತಿಳಿದಿದ್ದರಿಂದ ಪೊಲೀಸರು ಸಚಿವ ಸುರೇಶ್ ಮನೆ ಬಳಿ ಬಿಗಿಭದ್ರತೆ ಒದಗಿಸಿದ್ದರು. ಪ್ರತಿಭಟನೆಗೆ ಅನುಮತಿ ಪಡೆದಿಲ್ಲ ಎಂದು ಪೊಲೀಸರು ತಿಳಿಸಿದರೂ ಪೋಷಕರು ಕಸ ಗುಡಿಸಲು ಪ್ರಯತ್ನಿಸಿದಾಗ 10ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಯಿತು. ಈ ವೇಳೆ ಒಂದಿಬ್ಬರು ಪೋಷಕರನ್ನು ಎಳೆದಾಡಿದ ಘಟನೆಯೂ ಆಯಿತು.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಶಾಲೆ ಆರಂಭದ ನಂತರ ಖಾಸಗಿ ಶಾಲೆಗಳ ಒಕ್ಕೂಟ ಮತ್ತು ಪೋಷಕರು ಎರಡೂ ಕಡೆಯಿಂದ ಪ್ರತಿಭಟನೆ ಎದುರಿಸುತ್ತಿದ್ದಾರೆ. ತಮ್ಮ 13 ಬೇಡಿಕೆಗಳನ್ನ ಈಡೇರಿಸದಿದ್ದರೆ ಬೃಹತ್ ಹೋರಾಟ ನಡೆಸುವುದಾಗಿ ಖಾಸಗಿ ಶಾಲೆಗಳ ಒಕ್ಕೂಟವೊಂದು ಎಚ್ಚರಿಕೆ ನೀಡಿದೆ. ಕೊರೋನಾ ಸಂಕಷ್ಟ ಕಾಲದಲ್ಲಿ ಶಾಲೆಗಳು ಮನಬಂದಂತೆ ಶುಲ್ಕ ವಸೂಲಿ ಮಾಡುತ್ತಿವೆ. ಸಚಿವರು ಮಧ್ಯ ಪ್ರವೇಶಿಸಿ ಶಾಲೆಗಳಿಗೆ ನಿರ್ದಿಷ್ಟ ಶುಲ್ಕ ನಿಗದಿ ಮಾಡಿ ಆದೇಶ ಹೊರಡಿಸಬೇಕು ಎಂಬುದು ಪೋಷಕರ ಒತ್ತಾಯ. ಆದರೆ, ಸಚಿವರು ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಪೋಷಕರ ಸಂಘ ಕೂಡ ಸುರೇಶ್ ಕುಮಾರ್ ವಿರುದ್ಧ ಅಸಮಾಧಾನಗೊಂಡಿದೆ.