ಗಗನಕ್ಕೇರಿದ್ದ ತರಕಾರಿ ಬೆಲೆ ದಿಢೀರ್ ಕುಸಿತ: ಗ್ರಾಹಕರಿಗೆ ಸಂತಸ, ರೈತರಿಗೆ ಆತಂಕ!
ಆದರ್ಶ ಕೋಡಿ ದೊಡ್ಡಬಳ್ಳಾಪುರ
ಕೊರೊನಾ ಹೊಡೆತದಿಂದಾಗಿ ಸುಧಾರಿಸಿಕೊಳ್ಳುವ ಹೊತ್ತಿಗೆ ರೈತರಿಗೆ ಇದೀಗ ತರಕಾರಿಗಳ ಬೆಲೆ ಇಳಿಕೆಯ ಬಿಸಿ ತಟ್ಟುತ್ತಿದೆ. ಕಳೆದ 15 ದಿನಗಳ ಹಿಂದೆ ಇದ್ದ ತರಕಾರಿ ಬೆಲೆ ಇದೀಗ ದಿಢೀರ್ ಕುಸಿತ ಕಂಡಿದೆ. ಜಿಲ್ಲೆಯಾದ್ಯಂತ ಸಮೃದ್ಧ ತರಕಾರಿ ಬೆಳೆಯಾಗಿದ್ದು, ಇತರೆ ಕಡೆಯಿಂದ ಬಂದ ತರಕಾರಿಗಳಿಂದಾಗಿ ಸ್ಥಳೀಯ ತರಕಾರಿಗೆ ಬೆಲೆ ಕುಸಿದಿದೆ.
ಖಾಸಗಿ ಕಂಪನಿಗಳ ತಲೆ ಬಿಸಿ
ಇತ್ತೀಚಿನ ದಿನಗಳಲ್ಲಿ ರೈತರು ಹೆಚ್ಚಾಗಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಖಾಸಗಿ ಕಂಪನಿಗಳ ಮೊರೆ ಹೋಗುತ್ತಿದ್ದಾರೆ. ತರಕಾರಿಗಳನ್ನು ಖರೀದಿಸಿ, ಮಾರಾಟ ಮಾಡುವ ಆನ್‌ಲೈನ್ ಹಾಗೂ ಇತರೆ ಕಂಪನಿಗಳು ಗುಣಮಟ್ಟದ ತರಕಾರಿಗಳನ್ನು ಮಾತ್ರ ಖರೀದಿಸುವುದರಿಂದ ಉಳಿದ ತರಕಾರಿಗಳನ್ನು ರೈತರು ಮಾರುಕಟ್ಟೆಗೆ ತರುತ್ತಾರೆ. ಇದರಿಂದಾಗಿ ತರಕಾರಿ ಪೂರೈಕೆ ಜಾಸ್ತಿಯಾಗಿ ಮಾರುಕಟ್ಟೆಗೆ ಬರುವ ಗುಣಮಟ್ಟದ ತರಕಾರಿಗಳು ಸಹ ಬೆಲೆ ಕಳೆದುಕೊಳ್ಳುತ್ತಿವೆ. ಇದರಿಂದಾಗಿ ನೇರ ಮಾರುಕಟ್ಟೆಯನ್ನೇ ನಂಬಿಕೊಂಡಿರುವ ರೈತರಿಗೆ ಸಂಕಷ್ಟ ಎದುರಾಗಿದೆ.
ಇತರೆ ಜಿಲ್ಲೆಗಳಿಂದ ಪೈಪೋಟಿ
ಜಿಲ್ಲೆಯಲ್ಲಿ ಬೆಳೆದ ತರಕಾರಿಗಳೊಂದಿಗೆ ಇತರೆ ಜಿಲ್ಲೆಗಳಾದ ಬೆಂಗಳೂರು, ಚಿಕ್ಕಬಳ್ಳಾಪುರ ಸೇರಿ ಇತರೆ ಜಿಲ್ಲೆಯ ತರಕಾರಿಗಳು ಮಾರುಕಟ್ಟೆಗಾಗಿ ಪೈಪೋಟಿಗೆ ಇಳಿದಿವೆ. ಇದರಿಂದಾಗಿ ಮಾರುಕಟ್ಟೆಗೆ ಯಥೇಚ್ಛವಾಗಿ ತರಕಾರಿಗಳು ಬರುತ್ತಿದೆ. ಇದರಿಂದ ಸ್ಥಳೀಯ ತರಕಾರಿ ಬೆಲೆ ಭಾರಿ ಇಳಿಕೆ ಕಂಡಿದೆ.
ಸಭೆ ಸಮಾರಂಭಗಳಿಲ್ಲ
ಮದುವೆ, ಗೃಹ ಪ್ರವೇಶ, ಜಾತ್ರೆಯಂತಹ ಕಾರ್ಯಕ್ರಮಗಳು ನಡೆದರೆ ತರಕಾರಿಗಳಿಗೆ ಬೇಡಿಕೆ ತಂದುಕೊಡುತ್ತದೆ. ಆದರೆ ಈಗ ಜಾತ್ರಾ ಕಾರ್ಯಕ್ರಮಗಳು ಸರಳವಾಗಿ ನಡೆಯುತ್ತಿದೆ. ಅದರೊಂದಿಗೆ ಮದುವೆಯಂತಹ ಕಾರ್ಯಕ್ರಮಗಳಿಲ್ಲದೆ ತರಕಾರಿ ದರ ಕುಸಿತಕ್ಕೆ ಕಾರಣವಾಗಿದೆ. ಮಕರ ಸಂಕ್ರಾಂತಿ ಸಂದರ್ಭದಲ್ಲಿ ಬೆಲೆ ಏರಿಕೆಯಾಗುವ ನಿರೀಕ್ಷೆಯಲ್ಲಿದ್ದ ರೈತರಿಗೆ ಬೆಲೆ ಇಳಿಕೆ ನಿರಾಸೆ ಮೂಡಿಸಿದೆ.
ಹೂ ಬೆಳೆಗಾರರಿಗೂ ಸಂಕಷ್ಟ
ಜಿಲ್ಲೆಯಲ್ಲಿನ ಅಕಾಲಿಕ ಮಳೆ ರಾಗಿ, ಜೋಳ ಒಕ್ಕಣೆಗೆ ತೊಂದರೆ ಮಾಡಿದ್ದಲ್ಲದೆ, ಸಂಕ್ರಾಂತಿಗೆ ಸಿದ್ಧವಾಗಿರುವ ಹೂಗಳಿಗೂ ಹಾನಿ ಉಂಟಾಗಿದೆ. ಇದೀಗ ಬಿಸಿಲಿನ ಅಭಾವದಿಂದ ಹೂ ಇಳುವರಿ ಕಡಿಮೆಯಾಗುವ ಸಂಭವಿದೆ. ಹೂವಿನ ದರದಲ್ಲೂ ಸ್ವಲ್ಪ ಮಟ್ಟಿಗೆ ಇಳಿಕೆ ಕಂಡಿದ್ದು, ರೈತರಿಗೆ ಆಂತಕ ಮೂಡಿಸಿದೆ.