ವಿಶ್ವದ ಆದರ್ಶ ವ್ಯಕ್ತಿ ವಿವೇಕಾನಂದರು

ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಶಕ್ತಿಪೂರ್ಣವಾದ ಪ್ರೇರಕ ನುಡಿಗಳು ಯುವಕರ ಮನಸ್ಸಿನಲ್ಲಿ ಆತ್ಮವಿಶ್ವಾಸ, ಸ್ಫೂರ್ತಿ, ಧೈರ್ಯ ಹಾಗೂ ಸಾಹಸಗಳನ್ನು ಬಿತ್ತಿ ಜೀವನದಲ್ಲಿ ಬರುವ ಸಮಸ್ಯೆಗಳನ್ನು ಎದುರಿಸಿ ಮುನ್ನುಗ್ಗುವಂತೆ ಮಾಡಬಲ್ಲವು. ಯಾವಾಗಲೂ ನೈತಿಕ ಪಥದಲ್ಲಿ ಮುನ್ನಡೆಯಲು, ಜೀವನದಲ್ಲಿ ಅನಿಶ್ಚಿತ ಹಾಗೂ ಸಂದಿಗ್ಧ ಪರಿಸ್ಥಿತಿಗಳನ್ನು ಎದುರಿಸಲು ಅವರ ನುಡಿಗಳು ಮಾರ್ಗದರ್ಶನ ಮಾಡಬಲ್ಲವು.

 

ಹಿಂದೂ ಧರ್ಮದ ಶ್ರೇಯೋಭಿವೃದ್ಧಿ ಹಾಗೂ ಮನುಕುಲದ ಉದ್ಧಾರಕ್ಕಾಗಿ ಜನ್ಮತಾಳಿದ ವಿಶ್ವ ಆದರ್ಶ ವ್ಯಕ್ತಿಯೆಂದರೆ ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರು; ಅವರೇ ಜಗತ್ ಮಾನ್ಯರು. ವಿವೇಕಾನಂದರ ಪೂರ್ವದ ಹೆಸರು ನರೇಂದ್ರನಾಥ ದತ್ತ. ಇವರು 1863, ಜನವರಿ 12ರಂದು ಕೋಲ್ಕತ್ತಾದಲ್ಲಿ ಜನಿಸಿದರು. ತಂದೆ ವಿಶ್ವನಾಥ ದತ್ತ. ತಾಯಿ ಭುವನೇಶ್ವರಿ ದೇವಿ. ಶ್ರೀ ರಾಮಕೃಷ್ಣ ಪರಮಹಂಸರ ಶಿಷ್ಯರಾದ ಮೇಲೆ ವಿವೇಕಾನಂದ ಎಂಬ ಹೆಸರನ್ನು ಪಡೆದರು.

 

ತಂದೆ ಕೋಲ್ಕತ್ತಾ ಹೈಕೋರ್ಟ್‍ನಲ್ಲಿ ಹೆಸರಾಂತ ವಕೀಲರಾಗಿದ್ದು, ಆಂಗ್ಲ, ಬಂಗಾಳಿ, ಪಾರ್ಸಿ ಭಾಷೆಗಳಲ್ಲಿ ಮಹಾ ಪಂಡಿತರಾಗಿದ್ದರು. ತಾಯಿ ಭುವನೇಶ್ವರಿ ದೈವಭಕ್ತೆ. ಪ್ರತಿ ದಿನವೂ ಮನೆಯಲ್ಲಿ ರಾಮಾಯಣ, ಮಹಾಭಾರತ ಪಾರಾಯಣ ಮಾಡುತ್ತಿದ್ದರು.ಮಗ ನರೇಂದ್ರನಿಗೆ ಒಳ್ಳೆಯ ವಿಚಾರಗಳನ್ನು ಯಾವಾಗಲೂ ಹೇಳುತ್ತಿದ್ದರು. ಒಮ್ಮೆ ಕೊಠಡಿಯಲ್ಲಿ ಕೆಲವು ಬಾಲಕರು ಧ್ಯಾನ ಮಾಡಲೆಂದು ಕುಳಿತರು. ಅಲ್ಲಿ ನಾಗರಹಾವು ಕಾಣಿಸಿಕೊಂಡಿತು. ಧ್ಯಾನಾಸಕ್ತರಾಗಿದ್ದ ಹುಡುಗರೆಲ್ಲ ಕಿರುಚಾಡುತ್ತ ಹೊರಗೋಡಿದರು. ಆದರೆ, ಬಾಲಕ ನರೇಂದ್ರ ಮಾತ್ರ ಧ್ಯಾನದಲ್ಲಿ ತಲ್ಲೀನನಾಗಿದ್ದನು.

ನರೇಂದ್ರನ ಕೈ ನೋಡಿದ ಒಬ್ಬ, ಈತನು ಸನ್ಯಾಸಿಯಾಗುತ್ತಾನೆಂದು ಭವಿಷ್ಯ ನುಡಿದರು. ನರೇಂದ್ರ ಇದರಿಂದ ಹರ್ಷಿತನಾದ. ಆಟದಲ್ಲಿ ಮಗ್ನನಾಗಿರಬೇಕಾಗಿದ್ದ ವಯಸ್ಸಿನಲ್ಲೇ ಅವನ ಒಲವು ಸನ್ಯಾಸದತ್ತ ಹರಿಯಿತು. ಐದನೆ ವಯಸ್ಸಿಗೇ ಅಕ್ಷರಾಭ್ಯಾಸ ಆರಂಭವಾಯಿತು. ಏಳನೆ ವಯಸ್ಸಿಗೆ ಪ್ರಾಥಮಿಕ ಶಿಕ್ಷಣಕ್ಕಾಗಿ ಮೆಟ್ರೋ ಪಾಲಿಟಿನ್ ವಿದ್ಯಾಲಯಕ್ಕೆ ಸೇರಿಸಲಾಯಿತು.

ನಂತರ ಎಂಟ್ರೆನ್ಸ್ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತಿರ್ಣರಾಗಿ 1879ರಲ್ಲಿ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದರು. ಅಲ್ಲಿ ಬ್ರಹ್ಮ ಸಮಾಜದ ಕೇಶವಚಂದ್ರ ಸೇನರ ಪ್ರಭಾವ ವಿಶೇಷವಾಗಿದ್ದು, ದೇವರಿರುವನೇ ಎಂಬ ನರೇಂದ್ರರ ಮನಸ್ಸಿನಲ್ಲಿದ್ದ ಪ್ರಶ್ನೆಗೆ ಅಲ್ಲಿ ಸಮಾಧಾನಕರ ಉತ್ತರ ಕೊಡುವವರು ಯಾರೂ ಇರಲಿಲ್ಲ.  ಹಾಗಾಗಿ ದಕ್ಷಿಣೇಶ್ವರದಲ್ಲಿದ್ದ ರಾಮಕೃಷ್ಣ ಪರಮಹಂಸರಲ್ಲಿ ತಮ್ಮ ಸಂದೇಹ ಪರಿಹರಿಸಿಕೊಳ್ಳಲು ಮುಂದಾದರು ಮತ್ತು ಅವರ ಅಚ್ಚುಮೆಚ್ಚಿನ ಶಿಷ್ಯರಾದರು. ಶಿಷ್ಯ ನರೇಂದ್ರನಿಗೆ ಗುರು ಪರಮಹಂಸರು ಉಪದೇಶಗಳನ್ನಿತ್ತರು. 15 ಮಾರ್ಚ್ 1886ರಲ್ಲಿ ರಾಮಕೃಷ್ಣರು ವಿಧಿವಶರಾದರು. ಅವರ ತರುವಾಯ ಶಿಷ್ಯರು ಸನ್ಯಾಸ ಸ್ವೀಕರಿಸಬೇಕು ಎಂದಾಗ ನರೇಂದ್ರರೊಬ್ಬರೇ ಸನ್ಯಾಸ ಸ್ವೀಕರಿಸಿ ಸ್ವಾಮಿ ವಿವೇಕನಾಂದರೆಂದು ಪ್ರಸಿದ್ಧಿ ಪಡೆದರು.

ತಮ್ಮ ಸಹ ಸನ್ಯಾಸಿಗಳೊಡಗೂಡಿ ರಾಮಕೃಷ್ಣ ಮಠ ಸ್ಥಾಪಿಸಿ ಕನ್ಯಾಕುಮಾರಿವರೆಗೂ ಸಂಚಾರ ಮುಂದುವರೆಸಿದರು. ಸಮುದ್ರವನ್ನು ಈಜಿಕೊಂಡು ಹೋಗಿ ಕನ್ಯಾಕುಮಾರಿ ಬಂಡೆಯೊಂದರ ಮೇಲೆ ಕುಳಿತು ತಾಯ್ನಾಡಿನ ದುರ್ದೆಸೆ ಬಗೆಗೆ ಚಿಂತಿಸಿದರು. ಮುಂದೆ ಆ ಬಂಡೆಗೆ ವಿವೇಕಾನಂದ ಬಂಡೆ ಎಂದು ಹೆಸರು ಬಂತು. ಏಳಿ ಎದ್ದೇಳಿ ಕಾರ್ಯನಿರತರಾಗಿರಿ ಎಂದು ನಾಡಿನ ಯುವ ಜನತೆಗೆ ಕರೆಕೊಟ್ಟರು.

ರಾಷ್ಟ್ರಾಭಿಮಾನಿಗಳಾಗಿ ಭಾರತ ದೇಶವನ್ನು ಜಗತ್ತಿನಲ್ಲೇ ಶ್ರೇಷ್ಠ ನಾಡನ್ನಾಗಿ ಕಟ್ಟಬೇಕಾದ ಹೊಣೆಗಾರಿಕೆ ನಿಮ್ಮ ಮೇಲಿದೆ. ಇದಕ್ಕಾಗಿ ನೀವು ಪಣತೊಟ್ಟು ಕಾರ್ಯೋನ್ಮುಖರಾಗಿ ಎಂದು ಯುವಕರಲ್ಲಿ ರಾಷ್ಟ್ರಾಭಿಮಾನ ಮೂಡಿಸಿದರು.

ಸ್ವಾಮಿ ವಿವೇಕಾನಂದರು 31 ಮೇ 1893ರಂದು ಅಮೇರಿಕಾಕ್ಕೆ ಪ್ರಯಾಣ ಮಾಡಿದರು. ಚಿಕಾಗೋದಲ್ಲಿ ನಡೆದ ಬೃಹತ್ ವಿಶ್ವ ಧರ್ಮ ಸಮ್ಮೇಳನದಲ್ಲಿ ತಮ್ಮ ಗುರುದೇವರನ್ನು ಸ್ಮರಿಸಿ ಭಾರತದ ಭವ್ಯಪರಂಪರೆಯ ಇತಿಹಾಸವನ್ನು ಬಿತ್ತರಿಸಿದರು. ಒಂದೇ ದಿನದಲ್ಲಿ ವಿವೇಕಾನಂದರು ಜಗತ್ಪ್ರಸಿದ್ಧ ವ್ಯಕ್ತಿಯಾದರು. ಸಮ್ಮೇಳನದ ಆರಂಭದಲ್ಲಿ ಅವರು ನುಡಿದ ನನ್ನ ಪ್ರೀತಿಯ ಸಹೋದರ -ಸಹೋದರಿಯರೇ ಎಂಬ ಕರೆ ಎಲ್ಲರನ್ನೂ ಆಕರ್ಷಿಸಿತು. ಅನೇಕ ವಿದೇಶಿಯರೂ ಅವರ ಶಿಷ್ಯರಾದರು. ತಮ್ಮ ಶಿಷ್ಯರ ನೆರವಿನಿಂದ ಅಲ್ಲಿ ವೇದಾಂತ ಸಂಘವನ್ನು ಸ್ಥಾಪಿಸಿದರು.

ಅಮೆರಿಕ, ಇಂಗ್ಲೆಂಡ್‍ಗಳಲ್ಲಿ ಸುಮಾರು ನಾಲ್ಕು ವರ್ಷಗಳ ಕಾಲ ಸಂಚರಿಸಿ ಭಾರತದ ಸನಾತನ ಧರ್ಮ ಪತಾಕೆ ಎತ್ತಿ ಹಿಡಿದರು. ಕೆಲವು ಕಡೆ ರಾಮಕೃಷ್ಣ ಮಠಗಳನ್ನು ಸ್ಥಾಪಿಸಿದ್ದಲ್ಲದೆ ಗುರುವಿನ ಸಂದೇಶವನ್ನು ಹರಡಲು ಅನುಕೂಲವಾಗುವಂತೆ ಕೆಲವರಿಗೆ ತರಬೇತಿ ನೀಡಿದರು.

15 ಜನವರಿ 1897ಕ್ಕೆ ಭಾರತಕ್ಕೆ ಹಿಂದಿರುಗಿ ದಾಗ ಅವರಿಗೆ ಭವ್ಯ ಸ್ವಾಗತ ದೊರಕಿತು. ಅಲ್ಲಲ್ಲಿ ರಾಮಕೃಷ್ಣ ಸಂಘಗಳನ್ನು ಸ್ಥಾಪಿಸಿದರು. ಸ್ತ್ರೀ ವಿದ್ಯಾಭ್ಯಾಸ, ಆತ್ಮಸ್ಥೈರ್ಯ ಬೆಳೆಸಿಕೊಳ್ಳುವುದರ ಜತೆಗೆ ಪರದೇಶಗಳೊಡನೆ ಸಂಪರ್ಕ ಬೆಳೆಸುವುದು, ಸಹಕಾರ ಮನೋಭಾವ ಇರಿಸಿಕೊಳ್ಳುವುದು, ರಾಷ್ಟ್ರದ ಆರ್ಥಿಕ ಸಂಪತ್ತು ಹೆಚ್ಚಿಸಿಕೊಳ್ಳುವುದರತ್ತ ಗಮನ ನೀಡಬೇಕೆಂದು ವಿವೇಕಾನಂದರು ಜನತೆಗೆ ಕರೆ ಕೊಟ್ಟರು.

ಯುವ ಜನತೆ ತಮ್ಮಲ್ಲಿ ತಾವು ನಂಬಿಕೆ, ಆತ್ಮವಿಶ್ವಾಸ ಹೊಂದಬೇಕು, ಹಸನ್ಮುಖಿಗಳಾಗಿರಬೇಕು, ಕೀಳರಿಮೆ ಹೊಂದುವುದು ಶೋಭೆಯಲ್ಲ ಎಂದು ಸಾರಿದ ವಿವೇಕಾನಂದರು ಮಹಾ ತತ್ವಜ್ಞಾನಿ, ಭಗವದ್ಭಕ್ತ, ಧ್ಯಾನಸಿದ್ಧ ಕರ್ಮಯೋಗಿ ಹಾಗೂ ರಾಷ್ಟ್ರಭಕ್ತ ಎಂಬುದು ಅಕ್ಷರಶಃ ಸತ್ಯ. ಇವರು ಜುಲೈ 4, 1902ರಲ್ಲಿ ಧ್ಯಾನ ಮಗ್ನರಾಗಿದ್ದಾಗಲೇ ದೈವಾಧೀನರಾಗಿದ್ದು ಅವರ ಭಗವದ್ಭಕ್ತಿಗೆ ಸಾಕ್ಷಿಯಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *