ಸಂಪುಟ ಸರ್ಕಸ್: ಮಂತ್ರಿ ಗಿರಿ ಸಿಗದಿದ್ದಕ್ಕಾಗಿ ಎಂ.ಪಿ ರೇಣುಕಾಚಾರ್ಯ ಅಸಮಾಧಾನ!
ಬೆಂಗಳೂರು: ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿರುವ ಹೊನ್ನಾಳ್ಳಿ ಶಾಸಕ ಎಂಪಿ ರೇಣುಕಾಚಾರ್ಯ ಪರೋಕ್ಷವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಸಚಿವ ಸ್ಥಾನಕ್ಕಾಗಿ ನಾನು ಲಾಬಿ ಮಾಡಿಲ್ಲ, ಆದರೆ ಲಾಬಿ ಮಾಡದೆ ಇದ್ದದ್ದೂ ತಪ್ಪು ಎಂದು ಭಾವುಕರಾಗಿದ್ದಾರೆ.
ಬೆಂಗಳೂರಿನಲ್ಲಿ ಬುಧವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಂದರ್ಭ ಬಂದಾಗ ಎಲ್ಲಕ್ಕೂ ಉತ್ತರ ಕೊಡುತ್ತೇನೆ ಎಂದರು. ನಾನು ಸಾಮಾನ್ಯ ವ್ಯಕ್ತಿ, ನನಗೆ ಸಾಮರ್ಥ್ಯ ಇಲ್ಲ, ಅಸಮರ್ಥ ನಾನು, ಸಚಿರಾಗಲೂ ಅರ್ಹತೆ ಬೇಕಲ್ಲ ಅದು ನನ್ನಲ್ಲಿ ಇಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.
ಜೀವನದಲ್ಲಿ ನಾನೂ ಲಾಬಿ ಮಾಡಬೇಕಿತ್ತು, ಆದರೆ ನಾನು ಲಾಬಿ ಮಾಡದೆ ಇದ್ದದ್ದು ತಪ್ಪು ಎಂದ ಅವರು ಪ್ರಾದೇಶಿಕರವಾಗಿ ನಮಗೆ ಅನ್ಯಾಯವಾಗಿದೆ, ಆದರೂ ಬಿಎಸ್ವೈ ನನ್ನ ತಂದೆ ಸಮಾನ, ಪಕ್ಷ ನಮ್ಮನ್ನು ಬೆಳೆಸಿದೆ ನನ್ನ ಕ್ಷೇತ್ರದ ಜನರು ಬೆಳೆಸಿದ್ದಾರೆ ಎಂದರು.
ಅರುಣ್ ಸಿಂಗ್ ಭೇಟಿಯಾಗಲು ವಿಮಾನ ನಿಲ್ದಾಣದಲ್ಲಿ ರೇಣುಕಾಚಾರ್ಯ
ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಲಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಲು ಶಾಸಕ ಎಂಪಿ ರೇಣುಕಾಚಾರ್ಯ ವಿಮಾನ ನಿಲ್ದಾಣಕ್ಕೆ ತೆರಳಿದ್ದಾರೆ. ಅರುಣ್ ಸಿಂಗ್ ಅವರನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದೇನೆ ಎಂದು ಹೇಳಿದ್ದರೂ ಸಚಿವ ಸ್ಥಾನಕ್ಕಾಗಿ ಉನ್ನತ ಮಟ್ಟದಲ್ಲೇ ಲಾಬಿ ನಡೆಸುವ ಪ್ರಯತ್ನವನ್ನು ಎಂಪಿ ರೇಣುಕಾಚಾರ್ಯ ನಡೆಸುತ್ತಿದ್ದಾರೆ ಎನ್ನಲಾಗುತ್ತಿದೆ.