83 ತೇಜಸ್ ಲಘು ಯುದ್ಧ ವಿಮಾನ ಖರೀದಿಗೆ ಕೇಂದ್ರದಿಂದ ಒಪ್ಪಿಗೆ
83 ತೇಜಸ್ ಲಘು ಯುದ್ಧ ವಿಮಾನಗಳನ್ನು ಖರೀದಿಸಲು ಪ್ರಧಾನಿ ಮೋದಿ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಭಾರತೀಯ ವಾಯುಪಡೆಗಾಗಿ ಸ್ವದೇಶಿ ನಿರ್ಮಿತ 83 ತೇಜಸ್ ಎಂಕೆ 1ಎ ಲಘು ಯುದ್ಧ ವಿಮಾನ ಖರೀದಿಸುವ 48 ಸಾವಿರ ಕೋಟಿ ರೂಪಾಯಿ ಒಪ್ಪಂದಕ್ಕೆ ಕೇಂದ್ರ ಸಚಿವ ಸಂಪುಟದ ಭದ್ರತೆಯ ಬಗೆಯ ಸಮಿತಿಯು ಬುಧವಾರ ಒಪ್ಪಿಗೆ ನೀಡಿದೆ. 48 ಸಾವಿರ ಕೋಟಿ ರೂ. ವೆಚ್ಚದ ಡೀಲ್ ಇದಾಗಿದ್ದು, ಸ್ವದೇಶಿ ಸೇನಾ ವಿಮಾನ ವಲಯದಲ್ಲೇ ಇಷ್ಟು ದೊಡ್ಡ ಪ್ರಮಾಣದ ಖರೀದಿ ನಡೆಯುತ್ತಿರುವುದು ಇದೇ ಮೊದಲು ಎಂದು ಹೇಳಲಾಗಿದೆ.
ಸರಕಾರವು 73 ಎಲ್‌ಸಿಎ ತೇಜಸ್ ಎಂಕೆ-1ಎ ಯುದ್ಧ ವಿಮಾನ ಮತ್ತು 10 ಎಲ್‌ಸಿಎ ತೇಜಸ್ ಎಂಕೆ-1 ತರಬೇತಿ ವಿಮಾನಗಳನ್ನು ಖರೀದಿಸಲಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ(ಸಿಸಿಎಸ್) ಈ ಖರೀದಿ ಪ್ರಸ್ತಾವಕ್ಕೆ ಒಪ್ಪಿಗೆಯ ಮುದ್ರೆಯೊತ್ತಿದೆ.
ಮುಂದಿನ ದಿನಗಳಲ್ಲಿ ಎಲ್‌ಸಿಎ ತೇಜಸ್ ವಿಮಾನವು ವಾಯುಪಡೆಯ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಲಿದೆ. ಈವರೆಗೆ ದೇಶದಲ್ಲಿ ಎಲ್ಲೂ ಬಳಸದಂತಹ ಹೊಸ ಹೊಸ ತಂತ್ರಜ್ಞಾನಗಳನ್ನು ಈ ವಿಮಾನದಲ್ಲಿ ಅಳವಡಿಸಲಾಗಿದೆ. ಇದರಲ್ಲಿ ಶೇ.50ರಷ್ಟು ಸ್ವದೇಶಿ ಪರಿಕರಗಳಿದ್ದು, ಮುಂದಿನ ದಿನಗಳಲ್ಲಿ ಈ ಪ್ರಮಾಣ ಶೇ.60ಕ್ಕೇರಲಿದೆ ಎಂದು ಸರಕಾರ ತಿಳಿಸಿದೆ.
ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯುವ ಏರೋ ಇಂಡಿಯಾ ಶೋ ವೇಳೆ ವಾಯುಪಡೆಯು ಎಚ್‌ಎಎಲ್‌ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆಯಿದೆ. 2026ರ ವೇಳೆಗೆ ಎಚ್‌ಎಎಲ್ ಈ ವಿಮಾನಗಳನ್ನು ಹಸ್ತಾಂತರ ಮಾಡುವ ನಿರೀಕ್ಷೆಯಿದೆ.