ಲಸಿಕೆ ಹಾಕಿಸಿಕೊಂಡು ಅರ್ಧ ಗಂಟೆ ವಿಶ್ರಾಂತಿ ಪಡೆಯಿರಿ: ಕೋವಿಡ್-19 ಲಸಿಕೆ ಹಾಕಿಸಿಕೊಂಡವರು ಏನು ಮಾಡಬೇಕು?

ನವದೆಹಲಿ: ಭಾರತದಲ್ಲಿ ಶನಿವಾರ ಕೋವಿಡ್-19 ತುರ್ತು ಲಸಿಕಾ ಅಭಿಯಾನ ಆರಂಭವಾಗುತ್ತಿದ್ದು, ಆರಂಭದಲ್ಲಿ ಆರೋಗ್ಯ ವಲಯದಲ್ಲಿ ಕಾರ್ಯನಿರ್ವಹಿಸುವವರಿಗೆ ಲಸಿಕೆ ಹಾಕಲಾಗುತ್ತದೆ. ಇಂದು ಲಸಿಕೆ ಹಾಕಿಸಿಕೊಂಡವರು ಅರ್ಥ ಗಂಟೆಯವರೆಗೆ ವಿಶ್ರಾಂತಿ ಪಡೆಯುವಂತೆ ಆರೋಗ್ಯ ಸಚಿವಾಲಯ ಸೂಚಿಸಿದೆ.

ಇಂದು ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಕಾಯುವಿಕೆ, ಲಸಿಕೆ ಹಾಕಿಸಿಕೊಳ್ಳುವಿಕೆ ಮತ್ತು ನಿಗಾವಹಿಸುವ ಹೀಗೆ ಮೂರು ಮುಖ್ಯ ಪ್ರಕ್ರಿಯೆಗಳು ನಡೆಯುತ್ತವೆ.

ಒಬ್ಬರು ಲಸಿಕೆ ಹಾಕಿಸಿಕೊಂಡ ಮೇಲೆ ಕೇಂದ್ರದಿಂದ ತಕ್ಷಣವೇ ಹೊರಹೋಗಬಾರದೆಂದು ಸೂಚಿಸಲಾಗಿದೆ. ಲಸಿಕೆಯ ಪರಿಣಾಮ ಯಾವ ರೀತಿ ದೇಹದಲ್ಲಿ ಪ್ರತಿಕ್ರಿಯಿಸುತ್ತದೆ ಎಂದು ನೋಡಿಕೊಂಡು ಹೋಗುವಂತೆ ಆರೋಗ್ಯ ಸಚಿವಾಲಯ ಸೂಚಿಸಿದೆ. ಲಸಿಕಾ ಕೇಂದ್ರದಲ್ಲಿ ಎಂದಿನಂತೆ ಮಾಸ್ಕ್ ಹಾಕುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಪಾಲಿಸುವಂತೆ ಸೂಚಿಸಲಾಗಿದೆ.

ಶನಿವಾರ ದೇಶಾದ್ಯಂತ ಮೊದಲ ಹಂತದ ಕೋವಿಡ್-19 ಲಸಿಕೆ ಅಭಿಯಾನಕ್ಕೆ ಇನ್ನು ಕೆಲವೇ ಹೊತ್ತಿನಲ್ಲಿ ಚಾಲನೆ ಸಿಗಲಿದ್ದು ಆರಂಭದಲ್ಲಿ ವೈದ್ಯರು, ದಾದಿಯರು, ನೈರ್ಮಲ್ಯ ಕೆಲಸದಲ್ಲಿ ತೊಡಗಿರುವ ಕಾರ್ಮಿಕರು, ಗ್ರೂಪ್ ಡಿ ನೌಕರರಿಗೆ ಲಸಿಕೆ ನೀಡಲಾಗುತ್ತದೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಗೆ ಬಂದಿದ್ದು, ಅವರ ಸಮ್ಮುಖದಲ್ಲಿ ಲಸಿಕೆ ಕಾರ್ಯಕ್ರಮ ಆರಂಭವಾಗಲಿದೆ. ದೆಹಲಿಯಲ್ಲಿ ಆರೋಗ್ಯ ಸಚಿವ ಡಾ ಹರ್ಷವರ್ಧಿನ್ ಏಮ್ಸ್ ಆಸ್ಪತ್ರೆಯ ಲಸಿಕಾ ಕೇಂದ್ರಕ್ಕೆ ಆಗಮಿಸಿದರು.

ದೆಹಲಿಯಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಮ್ಮುಖದಲ್ಲಿ ಸರ್ಕಾರದ ಎಲ್ ಎನ್ ಜೆ ಪಿ ಆಸ್ಪತ್ರೆಯಲ್ಲಿ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *