ನನಗೆ ಕೋವಿಡ್-19 ಲಸಿಕೆ ತೆಗೆದುಕೊಳ್ಳಲು ಹೇಳಿದಾಗ ಖಂಡಿತಾ ಹಾಕಿಸಿಕೊಳ್ಳುತ್ತೇನೆ: ಸಿಎಂ ಯಡಿಯೂರಪ್ಪ
ಬೆಂಗಳೂರು: ಯಾವುದೇ ಸಂದೇಹ, ಭಯವಿಲ್ಲದೆ ಕೋವಿಡ್-19 ಲಸಿಕೆಯನ್ನು ತೆಗೆದುಕೊಳ್ಳಬಹುದು ಎಂದು ಆರೋಗ್ಯ ವಲಯ ಕಾರ್ಯಕರ್ತರು, ನೌಕರರನ್ನು ಒತ್ತಾಯಿಸಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ತಮಗೆ ವೈದ್ಯರು ಯಾವಾಗ ಲಸಿಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡುತ್ತಾರೋ ಆಗ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ನಿನ್ನೆ ಮಾಧ್ಯಮ ಪ್ರತಿನಿಧಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಆರಂಭದ ಹಂತದಲ್ಲಿ 243 ಕೇಂದ್ರಗಳನ್ನು ಕೋವಿಡ್-19 ಲಸಿಕೆ ನೀಡಲು ಗುರುತಿಸಲಾಗಿದ್ದು ಪ್ರತಿ ಕೇಂದ್ರದಲ್ಲಿ 100 ಜನರಿಗೆ ದಿನಕ್ಕೆ ಲಸಿಕೆ ನೀಡಲಾಗುತ್ತದೆ ಎಂದರು.
ಹಂತಹಂತವಾಗಿ ಲಸಿಕೆ ನೀಡುವ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ. ಹಿರಿಯ ವೈದ್ಯರಾದ ಡಾ ಸುದರ್ಶನ್ ಬಲ್ಲಾಳ್ ಸೇರಿದಂತೆ ಹಲವು ಹಿರಿಯ ವೈದ್ಯರುಗಳೇ ಲಸಿಕೆ ಪಡೆದಿದ್ದಾರೆ. ಲಸಿಕೆಯ ಸುರಕ್ಷತೆ ಬಗ್ಗೆ ಯಾವುದೇ ಸಂದೇಹ ಬೇಡ. ಲಸಿಕೆಗಳನ್ನು ಸಂಗ್ರಹಿಸಿಡಲು ಕರ್ನಾಟಕದಲ್ಲಿ ಸಾಕಷ್ಟು ಶೀತ ಸಂಗ್ರಹ ವ್ಯವಸ್ಥೆಯಿದೆ ಎಂದು ಹೇಳಿದರು.
ನಿನ್ನೆ ಕೋವಿಡ್-19 ಲಸಿಕೆ ನೀಡುವ ಮೊದಲ ದಿನ 43 ಸಾವಿರದ 015 ಮುಂಚೂಣಿ ಕಾರ್ಯಕರ್ತರನ್ನು ಅಭಿಯಾನದಡಿ ದಾಖಲಿಸಲಾಗಿತ್ತು. ಇಷ್ಟು ದೊಡ್ಡ ಪ್ರಮಾಣದಲ್ಲಿ ಮೊದಲ ದಿನವೇ ಲಸಿಕೆ ಹಾಕಿಸಿದ ಕೆಲವು ರಾಜ್ಯಗಳಲ್ಲಿ ಕರ್ನಾಟಕವೂ ಒಂದು ಎಂದರು.