ಲಸಿಕೆ ಪಡೆದ ನಂತರ ಯಾವುದೇ ರೀತಿಯ ಅಡ್ಡಪರಿಣಾಮ ಘಟನೆಗಳು ವರದಿಯಾಗಿಲ್ಲ- ಕೇಂದ್ರ ಸರ್ಕಾರ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ ಐತಿಹಾಸಿಕ ಮತ್ತು ವಿಶ್ವದ ಬೃಹತ್ ಕೋವಿಡ್ -19 ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ದೇಶಾದ್ಯಂತ ಕನಿಷ್ಠ 1,65,714 ಆರೋಗ್ಯ ಸಿಬ್ಬಂದಿಗಳು ಕೋವಿಡ್-19 ಲಸಿಕೆ ಪಡೆದುಕೊಂಡಿದ್ದಾರೆ.
ದೇಶಾದ್ಯಂತ ಒಟ್ಟಾರೇ 16,755 ವ್ಯಾಕ್ಸಿ ನೇಟರ್ ಗಳು ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದು, ಲಸಿಕೆ ಪಡೆದ ನಂತರ ಯಾವುದೇ ರೀತಿಯ ಅಡ್ಡಪರಿಣಾಮ ಘಟನೆಗಳು ವರದಿಯಾಗಿಲ್ಲ.
ಕೋವಿಡ್ -19 ಲಸಿಕೆ ವಿತರಣೆ ಮೊದಲ ದಿನ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಲಸಿಕೆ ಪಡೆದ ನಂತರ ಯಾರೂ ಕೂಡಾ ಆಸ್ಪತ್ರೆಗೆ ದಾಖಲಾದ ಬಗ್ಗೆ ವರದಿಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಗ್ನಾನಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಕೋವಿಶೀಲ್ಡ್ ಲಸಿಕೆಯನ್ನು ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಪೂರೈಸಲಾಗಿತ್ತು. ಭಾರತ್ ಬಯೋಟೆಕ್ ತಯಾರಿಸಿರುವ ಕೋವಾಕ್ಸಿನ್ ಲಸಿಕೆಯನ್ನು 12 ರಾಜ್ಯಗಳಿಗೆ ಸರಬರಾಜು ಮಾಡಲಾಗಿತ್ತು. ಒಟ್ಟು 3 ಸಾವಿರದ 351 ಅಧಿವೇಶನದಲ್ಲಿ ಎರಡು ಲಸಿಕೆಗಳನ್ನು ದೇಶಾದ್ಯಂತ ನೀಡಲಾಯಿತು ಎಂದು ಅವರು ತಿಳಿಸಿದರು.
ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದ ಕೋವಿಡ್-19 ಮೊದಲ ಹಂತದಲ್ಲಿ ಅಂದಾಜು 3 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.