ನಿನ್ನೆ ರಾಜ್ಯದಲ್ಲಿ 42,425 ಮಂದಿಗೆ ಲಸಿಕೆ: 9 ಮಂದಿಯಲ್ಲಿ ಅಡ್ಡ ಪರಿಣಾಮ
ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಕೋವಿಡ್ ಲಸಿಕೆ ಅಭಿಯಾನ ಶೇ.52ಕರಷ್ಟು ಯಶಸ್ಸು ಕಂಡಿದೆ. 84,519 ಮಂದಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಿದ್ದರೂ ನಿನ್ನೆ 42,425 ಮಂದಿಗೆ ಲಸಿಕೆ ನೀಡಲು ಸಾಧ್ಯವಾಗಿದೆ.
ಶುಕ್ರವಾರ ಇಬ್ಬರಲ್ಲಿ ಲಸಿಕೆಯ ಗಂಭೀರ ಅಡ್ಡ ಪರಿಣಾಮ ಕಾಣಿಸಿಕೊಂಡಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ತನ್ನ ದೈನಂದಿನ ವರದಿಯಲ್ಲಿ ಹೇಳಿದೆ. ಈ ಮೂಲಕ ಲಸಿಕೆಯ ಗಂಭೀರ ಅಡ್ಡ ಪರಿಣಾಮಕ್ಕೆ ಒಳಗಾದವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಲಸಿಕೆಯ ಅಡ್ಡ ಪರಿಣಾಮಕ್ಕೆ ಒಳಗಾಗಿರುವ ದಾವಣಗೆರೆಯ 35 ವರ್ಷದ ಮಹಿಳೆಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುತ್ತಿದ್ದಾರೆ. ಉಳಿದ ಆರು ಮಂದಿ ಚೇತರಿಸಿಕೊಂಡಿದ್ದಾರೆ.
ಲಸಿಕೆ ಪಡೆದಿದ್ದ ಇಬ್ಬರು ಮೃತರಾಗಿದ್ದು, ಸಾವಿಗೆ ಲಸಿಕೆ ಕಾರಣವಲ್ಲ ಎಂದು ಪರೀಕ್ಷೆಗಳಿಂದ ದೃಢಪಟ್ಟಿದೆ. ಇನ್ನು ಲಸಿಕೆ ಅಭಿಯಾನ ಪ್ರಾರಂಭವಾದ ವಾರದೊಳಗೆ ಒಟ್ಟು 1.77 ಲಕ್ಷ ಮಂದಿಗೆ ಲಸಿಕೆ ನೀಡಲಾಗಿದೆ. ಶೇ.56 ಗುರಿ ಸಾಧನೆ ಮಾಡಿದೆ. ಲಸಿಕೆ ಅಭಿಯಾನದಲ್ಲಿ ರಾಜ್ಯ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. ಚಿತ್ರದುರ್ಗದಲ್ಲಿ ಶೇ.75 ಗರಿಷ್ಠ, ಕೊಪ್ಪಳ ಕನಿಷ್ಠ ಶೇ.20 ಗುರಿ ತಲುಪಲಾಗಿದೆ.
1,36,882 ಮಂದಿಗೆ ಕೋವಿಶೀಲ್ಡ್, 1,774 ಮಂದಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಈ ಪೈಕಿ ಶೇ.2 ರಿಂದ 3.5 ಜನರಿಗೆ ಸ್ವಲ್ಪ ಅಡ್ಡಪರಿಣಾಮ ಉಂಟಾಗಿದೆ. 8,47,908 ಮಂದಿ ಲಸಿಕೆ ಪಡೆಯಲು ಹೆಸರು ನೋಂದಾಯಿಸಿಕೊಂಡಿದ್ದರು. ಇದರಲ್ಲಿ 3,27,201 ಸರ್ಕಾರಿ ಆರೋಗ್ಯ ಸಿಬ್ಬಂದಿ, 4,45,389 ಖಾಸಗಿ ಆರೋಗ್ಯ ಸಿಬ್ಬಂದಿ ಇದ್ದಾರೆ. ಒಟ್ಟು 7,72,591 ಆರೋಗ್ಯ ಸಿಬ್ಬಂದಿ ಇದ್ದಾರೆ. ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದವರು 75,318 ಮಂದಿ ಇದ್ದಾರೆ. ಕೋವ್ಯಾಕ್ಸಿನ್ ನ 1,46,240 ಡೋಸ್ ಇಂದು ಬರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.