Farmers Protest: ದೆಹಲಿ ರೈತ ಹೋರಾಟಕ್ಕೆ ಭಾರೀ ಬೆಂಬಲ; ಜ.26 ರಂದು ಬೆಂಗಳೂರಲ್ಲೂ ನಡೆಯಲಿದೆ ಟ್ರ್ಯಾಕ್ಟರ್ ಪೆರೇಡ್
ಬೆಂಗಳೂರು: ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಗಳನ್ನು ವಿರೋಧಿಸಿ ರೈತರು ಕಳೆದ 60 ದಿನಗಳಿಂದ ದೆಹಲಿ ಹೊರವಲಯದಲ್ಲಿ ಹೋರಾಟ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ನಡುವೆ ನಡೆದ 9 ಸುತ್ತಿನ ಮಾತುಕತೆಗಳು ವಿಫಲವಾದ ಬೆನ್ನಿಗೆ ರೈತರು ಇದೀಗ ಹೋರಾಟದ ತೀವ್ರತೆಯನ್ನು ಹೆಚ್ಚಿಸಲು ಮುಂದಾಗಿದ್ದಾರೆ. ಪರಿಣಾಮ ಜ.26 ರಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿ ನಡೆಸಲು ಉದ್ದೇಶಿಸಲಾಗಿದೆ. ಈ ರ್ಯಾಲಿಯಲ್ಲಿ ಸಾವಿರಾರು ಟ್ರ್ಯಾಕ್ಟರ್‌ಗಳು ಭಾಗವಹಿಸಲಿವೆ ಎನ್ನಲಾಗುತ್ತಿದೆ. ಈ ನಡುವೆ ದೆಹಲಿ ರೈತ ಹೋರಾಟಕ್ಕೆ ರಾಜ್ಯದಲ್ಲೂ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಈಗಾಗಲೇ ಸಂಯುಕ್ತ ಹೋರಾಟ , ಕರ್ನಾಟಕ ವೇದಿಕೆ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘ ದೆಹಲಿ ರೈತ ಹೋರಾಟಕ್ಕೆ ಬೆಂಬಲ ಘೋಷಿಸಿದ್ದು, ಜ. 26ರಂದು ಬೆಂಗಳೂರಿನಲ್ಲೂ ಬೃಹತ್ ಟ್ರ್ಯಾಕ್ಟರ್ ಪರೇಡ್ ಮತ್ತು ರೈತ ಸಮಾವೇಶ ನಡೆಯಲಿದೆ.
“ಸಂಯುಕ್ತ ಹೋರಾಟ – ಕರ್ನಾಟಕ ವೇದಿಕೆ ಆಯೋಜಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕದ ನಾಲ್ಕೂ ದಿಕ್ಕುಗಳು ರೈತರು ತಮ್ಮ ಟ್ರ್ಯಾಕ್ಟರ್‌ಗಳೊಂದಿಗೆ ಆಗಮಿಸಲಿದ್ದಾರೆ” ಎಂದು ಹೋರಾಟದ ಮುಖಂಡ ಹಾಗೂ ರೈತ ಸಂಘದ ಹಿರಿಯ ನಾಯಕರಾದ ಬಡಗಲಪುರ ನಾಗೇಂದ್ರರವರು ತಿಳಿಸಿದ್ದಾರೆ.
ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸಹ ಮಾತನಾಡಿದ್ದು, “ನೂತನ ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿಯೂ ಪ್ರತಿಭಟನೆ ನಡೆಯಲಿದೆ. ಸಾವಿರಾರು ರೈತರು ಈ ರ್ಯಾಲಿಯಲ್ಲಿ ಭಾಗಿಯಾಗಲಿದ್ದು, ತುಮಕೂರು ನೈಸ್ ರಸ್ತೆಯ ಜಂಕ್ಷನ್ ನಿಂದ ರ್ಯಾಲಿ ಆರಂಭವಾಗಲಿದೆ” ಎಂದು ಮಾಹಿತಿ ನೀಡಿದ್ದಾರೆ.
ಇದು ರೈತ, ಕಾರ್ಮಿಕರ ಹೋರಾಟ. ರಾಜ್ಯದ ಮುಂಬೈ ಕರ್ನಾಟಕ, ಹೈದರಾಬಾದ್ ಕರ್ನಾಟಕ, ಮಡಿಕೇರಿ-ಮೈಸೂರು ಭಾಗಗಳಿಂದ ರೈತರು, ಕಾರ್ಮಿಕರು ಹಾಗೂ ಈ ಹೋರಾಟದ ಬೆಂಬಲಿಗರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸುಮಾರು 25,000 ಮಂದಿ ಹೊರ ಜಿಲ್ಲೆಗಳಿಂದ ಆಗಮಿಸುತ್ತಿದ್ದಾರೆ. ಹತ್ತಿರದ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಟ್ರ್ಯಾಕ್ಟರ್‌ಗಳು ಆಗಮಿಸುತ್ತಿವೆ. ದ್ವಿಚಕ್ರವಾಹನಗಳು, ಅಲ್ಲದೆ ಇತರೆ ವಾಹನಗಳು ಆಗಮಿಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಮಡಿಕೇರಿಯ ಕುಟ್ಟಾದಿಂದ ಜ. 25ರಂದು ಟ್ರ್ಯಾಕ್ಟರ್ ರ್ಯಾಲಿ ಹೊರಡುತ್ತಿದೆ. ಪೊನ್ನಂಪೇಟೆ, ಬಿ ಮಂಗಲ, ಗೋಣಿಕೊಪ್ಪ, ತಿಥಿಮಥಿ, ಹುಣಸೂರು ಮೂಲಕ ಮೈಸೂರಿಗೆ ಆಗಮಿಸುತ್ತಿದೆ. ಅಲ್ಲಿಂದ ಪಾಂಡವಪುರ, ಮಂಡ್ಯ ಮಾರ್ಗವಾಗಿ ಬರುವ ಈ ರ್ಯಾಲಿ, ಬಿಡದಿ ಸೇರುವುದು.
ಬೆಳಗಾವಿ, ಹುಬ್ಬಳಿಕಡೆಯಿಂದ ಬರುವ ವಾಹನಗಳು ಚಿತ್ರದುರ್ಗದಲ್ಲಿ ತಂಗಲಿವೆ. ರಾಯಚೂರು, ಬಳ್ಳಾರಿ ಕಡೆಯಿಂದ ಬರುವ ವಾಹನಗಳು ತುಮಕೂರಿನ ಮಠದಲ್ಲಿ ತಂಗಲಿವೆ. ಚಿಕ್ಕಬಳ್ಳಾಪುರ, ಕೋಲಾರ ಕಡೆಯಿಂದಲೂ ವಾಹನಗಳು ಆಗಮಿಸುತ್ತಿವೆ ಎಂದು ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಗಣರಾಜ್ಯೋತ್ಸವದಂದು ನಗರದ ಎಲ್ಲ ದಿಕ್ಕುಗಳಿಂದ ಬರುವ ವಾಹನಗಳು 11 ಗಂಟೆ ಹೊತ್ತಿಗೆ ಬೆಂಗಳೂರು ನಗರದ ಹೊರ ವಲಯದಲ್ಲಿ ನೆರೆಯಲಿದ್ದು, 12ಗಂಟೆಗೆ ಸರಿಯಾಗಿ ನಗರವನ್ನು ಪ್ರವೇಶಿಸುತ್ತವೆ. ಜ. 26ರಂದು ಬೆಳಗ್ಗೆ ಸ್ವಾತಂತ್ರ್ಯ ಉದ್ಯಾನದಲ್ಲಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್ ದೊರೆಸ್ವಾಮಿಗಳು ಧ್ವಜಾರೋಹಣ ಮಾಡಿ, ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹಿಸಲಾಗುವುದು ಎಂದು ಬಡಗಲಪುರ ನಾಗೇಂದ್ರರವರು ಮಾಹಿತಿ ನೀಡಿದ್ದಾರೆ.