JDS: ಕುಮಾರಸ್ವಾಮಿ ಬೇಡಿಕೆ ಈಡೇರಿಸಲು ಮುಂದಾದ ಸಿಎಂ ಯಡಿಯೂರಪ್ಪ..!

ಬೆಂಗಳೂರು: ಹಾಸನ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ತಡೆಹಿಡಿದಿರುವ ಸರ್ಕಾರದ ನಡೆಯನ್ನು ವಿರೋಧಿಸಿ ಬರುವ ಸೋಮವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಹೆಚ್‌.ಕೆ. ಕುಮಾರಸ್ವಾಮಿ ಪತ್ರ ಬರೆದ ಬೆನ್ನಲ್ಲೇ ಅನುದಾನವನ್ನು ಹಂತ ಹಂತವಾಗಿ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಈ ಕುರಿತು ಎಚ್‌.ಕೆ. ಕುಮಾರಸ್ವಾಮಿ(H.K.Kumaraswamy) ಅವರಿಗೆ ಪತ್ರ ಬರೆದಿರುವ ಮುಖ್ಯಮಂತ್ರಿಗಳು, ಮೈತ್ರಿ ಸರ್ಕಾರದ ಅವಧಿಯಲ್ಲಿ ಹಾಸನ ಜಿಲ್ಲೆಗೆ ಅನುಮೋದನೆಗೊಂಡಿದ್ದ ಅಭಿವೃದ್ಧಿ ಕಾಮಗಾರಿಗಳಿಗೆ ಅಗತ್ಯ ಅನುದಾನವನ್ನು ಹಂತಹಂತವಾಗಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ಉದ್ದೇಶಿತ ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ.

ಕೋವಿಡ್‌-19 ನಿಂದಾಗಿ ದೇಶದ ಎಲ್ಲಾ ರಾಜ್ಯಗಳ ಆರ್ಥಿಕತೆಯ ಮೇಲೆ ಪರಿಣಾಮ ಬೀರಿದೆ. ಕೊರೋನಾ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಘೋಷಿಸಿದ ಲಾಕ್‌ಡೌನ್‌ನಿಂದಾಗಿ ಜನರ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗಿದೆ. ಜನರ ಆರ್ಥಿಕತೆ ಸುಧಾರಣೆಗಾಗಿ ರಾಜ್ಯವು ದೇಶದಲ್ಲಿಯೇ ಮಾದರಿಯಾಗಿ ಪರಿಹಾರ ಪ್ಯಾಕೇಜ್‌ ನೀಡಿದೆ. ರಾಜ್ಯದ ಆರ್ಥಿಕತೆಯ ಸಂಕಷ್ಟದ ನಡುವೆಯೂ ಯಾವುದೇ ಸರ್ಕಾರಿ ಯೋಜನೆಗಳನ್ನು ತಡೆಹಿಡಿಯದೆ ಅನುಷ್ಠಾನ ಮಾಡಲಾಗುತ್ತಿದೆ. ಪ್ರಸ್ತುತ ರಾಜ್ಯದ ಆರ್ಥಿಕ ಪರಿಸ್ಥಿತಿ ಸುಧಾರಣೆ ಹಂತದಲ್ಲಿದೆ. ತಾವು ಪ್ರಸ್ತಾಪಿಸಿರುವ ಕಾಮಗಾರಿಗಳಿಗೆ ಹಂತಹಂತವಾಗಿ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸಿಎಂಗೆ ಪತ್ರ: ಇದಕ್ಕೂ ಮುನ್ನ ಪ್ರತಿಭಟನೆ ನಡೆಸುವ ಕುರಿತು ಪತ್ರ ಬರೆದಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ, ಕಳೆದ ಒಂದೂವರೆ ವರ್ಷದಿಂದ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ರಾಜಕೀಯ ಹಗೆತನ ಮತ್ತು ವೈಯಕ್ತಿಕ ದ್ವೇಷದಿಂದ ಮೈತ್ರಿ ಸರ್ಕಾರದ ಅವಧಿಯಲ್ಲಿ ಅನುಮೋದನೆ ನೀಡಲಾಗಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ತಡೆ ನೀಡಿದೆ. ಇಂತಹ ಸರ್ಕಾರದ ಕ್ರಮದಿಂದಾಗಿ ಹಾಸನ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬಿದ್ದಿವೆ. ಸರ್ಕಾರ ಈ ಕ್ರಮವನ್ನು ವಿರೋಧಿಸಿ ಹಾಸನ ಜಿಲ್ಲೆಯ ಪಕ್ಷದ ಶಾಸಕರು ಗೃಹಕಚೇರಿ ಕೃಷ್ಣಾ ಮುಂದೆ ಸೋಮವಾರ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದ್ದರು.

ಸನ ನಗರದಲ್ಲಿ ಗ್ರೀನ್‌ ಫೀಲ್ಡ್‌ ಏರ್‌ಪೋರ್ಟ್‌ ಸ್ಥಾಪಿಸುವ ಕಾಮಗಾರಿಯನ್ನು ತಡೆಹಿಡಿಯಲಾಗಿದೆ. ಚಿಕ್ಕಮಗಳೂರು-ಬೇಲೂರು, ಬೇಲೂರು-ಆಲೂರು-ಹಾಸನ ಹೊಸ ರೈಲು ಮಾರ್ಗದ ಯೋಜನೆಯನ್ನು ವಿಳಂಬಗೊಳಿಸಲಾಗುತ್ತಿದೆ. ನೂತನವಾಗಿ ಬಂಧೀಖಾನೆಯನ್ನು ಸ್ಥಾಪಿಸುವ ಕಾಮಗಾರಿಗೆ ತಡೆ ನೀಡಲಾಗಿದೆ. ಗಂಧದಕೋಟೆ ಸರ್ಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನ ಆವರಣದಲ್ಲಿ 500 ಸಂಖ್ಯಾಬಲದ ಬಾಲಕಿಯರ ವಸತಿನಿಲಯಗಳನ್ನು ಸ್ಥಾಪಿಸುವ ಕಾಮಗಾರಿಗಳಿಗೆ ತಡೆಹಿಡಿಯಲಾಗಿದೆ. ಹೀಗೆ ಹಲವು ಕಾಮಗಾರಿಗಳಿಗೆ ತಡೆಹಿಡಿಯಲಾಗಿದ್ದು, ತಕ್ಷಣ ನೀಡಿರುವ ತಡೆಯನ್ನು ತೆರವುಗೊಳಿಸಬೇಕು. ಅಲ್ಲದೇ, ಹಾಸನ ಜಿಲ್ಲೆ ಸೋಮನಹಳ್ಳಿಕಾವಲು ತೋಟಗಾರಿಕೆ ಕ್ಷೇತ್ರದಲ್ಲಿ ಹೊಸದಾಗಿ ತೋಟಗಾರಿಕೆ ಮಹಾವಿದ್ಯಾಲಯವನ್ನು ಸ್ಥಾಪಿಸಲು ಸರ್ಕಾರದ ಆದೇಶವಾಗಿ ಸಚಿವ ಸಂಪುಟದಲ್ಲಿಯೂ ಅನುಮೋದನೆ ದೊರೆತಿದೆ. ತೋಟಗಾರಿಕೆ ಮಹಾವಿದ್ಯಾಲಯವನ್ನು ಪ್ರಾರಂಭಿಸಲು ತುರ್ತಾಗಿ ಆಡಳಿತಾತ್ಮಕ ಅನುಮೋದನೆ ನೀಡಿ ಪ್ರಾರಂಭಿಸಬೇಕು ಎಂದು ಪತ್ರದಲ್ಲಿ ಒತ್ತಾಯ ಮಾಡಿದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *