ಬೆಂಗಳೂರಿನಲ್ಲಿ ಟ್ರ್ಯಾಕ್ಟರ್ ಪರೇಡ್ ತಡೆದರೆ ಪರಿಸ್ಥಿತಿ ವಿಕೋಪಕ್ಕೆ ತಿರುಗಲಿದೆ: ಕರ್ನಾಟಕ ರಾಜ್ಯ ರೈತ ಸಂಘ ಎಚ್ಚರಿಕೆ
ಮೈಸೂರು: ಗಣರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿ ನಡೆಯುವ ಟ್ರ್ಯಾಕ್ಟರ್ ರ್ಯಾಲಿ ತಡೆದಿದ್ದೇ ಆದರೆ, ಪರಿಸ್ಥಿತಿ ವಿಕೋಪಕ್ಕೆ ತಿರುಗಲಿದೆ ಎಂದು ಸರ್ಕಾರಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಎಚ್ಚರಿಕೆ ನೀಡಿದೆ.
ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ಗಣರಾಜ್ಯೋತ್ಸವ ದಿನವಾದ ಮಂಗಳವಾರ ರೈತರು ದೆಹಲಿಯಲ್ಲಿ ಹಮ್ಮಿಕೊಂಡಿರುವ ರೈತ ಪೆರೇಡ್ ಬೆಂಬಲಿಸಿ ರಾಜಧಾನಿ ಬೆಂಗಳೂರಿನಲ್ಲಿ 10 ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್, ಟ್ರಕ್ಗಳೊಂದಿಗೆ ರೈತರ ಬೃಹತ್ ಪರೇಡ್ ಹಮ್ಮಿಕೊಳ್ಳಲಾಗಿದೆ.
ರ್ಯಾಲಿ ಕುರಿತು ಪ್ರತಿಕ್ರಿಯೆ ನೀಡಿರುವ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರು, ರೈತರು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ಪರೇಡ್ ಬೆಂಗಳೂರು ಪ್ರವೇಶ ಮಾಡದಂತೆ ಪೊಲೀಸರು ತಡೆದಿದ್ದೇ ಆದರೆ, ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಎಂದು ಎಚ್ಚರಿಸಿದ್ದಾರೆ.
ಗಣರಾಜ್ಯೋತ್ಸವ ದಿನದಂದು ಬೆಂಗಳೂರಿನಲ್ಲಿ ನಡೆಯುವ ರೈತರ ಪರೇಡ್ ನಲ್ಲಿ ಭಾಗವಹಿಸಲು ರಾಜ್ಯದ ನಾಲ್ಕು ಭಾಗಗಳಿಂದ ರೈತರು ತಮ್ಮ ವಾಹನಗಳೊಂದಿಗೆ ಆಗಮಿಸಲಿದ್ದಾರೆ. ಸರ್ಕಾರ ಪೊಲೀಸರನ್ನು ಬಳಸಿಕೊಂಡು ಗಣರಾಜ್ಯೋತ್ಸವದ ರೈತರ ಪರೇಡ್ ವಿಫಲಗೊಳಿಸಲು ಹುನ್ನಾರ ನಡೆಸಿದೆ. ಶಾಂತಿಯುತವಾಗಿ ನಡೆಯುವ ರೈತ ಪರೇಡ್’ಗೆ ಪೊಲೀಸರು ಅವಕಾಶ ಮಾಡಿಕೊಡಬೇಕೆಂದು ಹೇಳಿದರು.
ಒಂದು ವೇಲೆ ರೈತ ಹೋರಾಟ ವಿಫಲಗೊಳಿಸಲು ರೈತರು ತಮ್ಮ ವಾಹನದೊಂದಿಗೆ ಬೆಂಗಳೂರು ಪ್ರವೇಶ ಮಾಡದಂತೆ ಪೊಲೀಸರು ತಡೆದಿದ್ದೇ ಆದರೆ, ರೈತರು ರಾಜ್ಯದ ಎಲ್ಲಾ ರಸ್ತೆಗಳನ್ನು ಬಂದ್ ಮಾಡುತ್ತಾರೆಂದು ಎಚ್ಚರಿಸಿದ್ದಾರೆ.
ನಮ್ಮ ಹೋರಾಟ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧವಲ್ಲ. ಅವರು ತೆಗೆದುಕೊಂಡಿರುವ ರೈತ ವಿರೋಧಿ ಮತ್ತು ಕಾರ್ಮಿಕ ವಿರೋಧಿ ಕಾಯ್ದಗಳ ವಿರುದ್ಧವಾಗಿದ್ದು, ಕೇಂದ್ರ ಸರ್ಕಾರ ರೈತ ವಿರೋಧಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕೆಂದು ಆಗ್ರಹಿಸಿದ್ದಾರೆ.