ದೆಹಲಿ ಐಇಡಿ ಸ್ಫೋಟ ಪ್ರಕರಣ: ಸಿಸಿಟಿವಿ ದೃಶ್ಯದಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಪತ್ತೆ, ತನಿಖೆಗೆ ವಿಶೇಷ ತಂಡ ರಚನೆ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿರುವ ಇಸ್ರೇಲ್ ರಾಯಭಾರಿ ಕಚೇರಿ ಬಳಿ ಐಇಡಿ ಸ್ಫೋಟಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಸ್ಥಳದಲ್ಲಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದು, ದೃಶ್ಯದಲ್ಲಿ ಕೆಲ ವ್ಯಕ್ತಿಗಳು ಅನುಮಾನಾಸ್ಪದವಾಗಿ ಓಡಾಟ ನಡೆಸಿರುವುದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ದೃಶ್ಯದಲ್ಲಿ ಜನವರಿ 29 ರಂದು ಆಟೋದಲ್ಲಿ ಬಂದಿರುವ ವ್ಯಕ್ತಿಯೊಬ್ಬ ಇಬ್ಬರು ವ್ಯಕ್ತಿಗಳನ್ನು ಸ್ಥಳಕ್ಕೆ ಡ್ರಾಪ್ ಮಾಡಿದ್ದು, ಈ ಇಬ್ಬರು ವ್ಯಕ್ತಿಗಳು ಸ್ಫೋಟಗೊಂಡ ಸ್ಥಳಕ್ಕೆ ತೆರಳಿರುವುದು ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ.

ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ ಬಳಿಕ ತನಿಖೆಯನ್ನು ಚುರುಕುಗೊಳಿಸಿರುವ ದೆಹಲಿ ಪೊಲೀಸರು ಇದೀಗ ಆಟೋ ಚಾಲಕನನ್ನು ಸಂಪರ್ಕಿಸಿದ್ದು, ಅನುಮಾನಾಸ್ಪದ ವ್ಯಕ್ತಿಗಳ ರೇಖಾಚಿತ್ರವನ್ನು ಬಿಡಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.

ಪ್ರಕರಣ ದಾಖಲಿಸಿಕೊಂಡಿರುವ ದೆಹಲಿ ಪೊಲೀಸರು ತನಿಖೆಗೆ ಇದೀಗ ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ. ಘಟನಾ ಸ್ಥಳಕ್ಕೆ ದೆಹಲಿ ಪೊಲೀಸ್ ಮುಖ್ಯಸ್ಥ ಎಸ್ಎನ್ ಶ್ರೀವಾತ್ಸವ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ತನಿಖೆ ಪ್ರಗತಿಯಲ್ಲಿದ್ದು ಈ ಹಂತದಲ್ಲಿ ಮಾತನಾಡುವುದು ಸರಿಯಲ್ಲ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆಗ ವಿಶೇಷ ತಂಡವನ್ನು ರಚನೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ದೆಹಲಿಯ ಇಸ್ರೇಲ್ ರಾಯಭಾರಿ ಕಚೇರಿ ಬಳಿ ನಿನ್ನೆ ಸಂಜೆ ಐಇಡಿ ಸ್ಫೋಟ ಸಂಭವಿಸಿತ್ತು. ಕಡಿಮೆ ತೀವ್ರತೆಯ ಸ್ಫೋಟ ಸಂಭವಿಸಿದ್ದರಿಂದಾಗಿ ಘಟನೆಯಲ್ಲಿ ಯಾವುದೇ ಸಾವು-ನೋವುಗಳಾಗಿಲ್ಲ.

ಅತೀ ಹೆಚ್ಚು ಭದ್ರತೆಯನ್ನು ಹೊಂದಿರುವ ಪ್ರದೇಶದಲ್ಲಿ ಸ್ಫೋಟ ಸಂಭವಿಸಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಹೀಗಾಗಿ ದೇಶದ ಎಲ್ಲಾ ವಿಮಾನ ನಿಲ್ದಾಣಗಳು, ಪ್ರಮುಖ ಕಟ್ಟಡಗಳು ಹಾಗೂ ಸರ್ಕಾರಿ ಕಚೇರಿಗಳಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಲಾಗಿದೆ ಎಂದು ತಿಳಿದುಬಂದಿದೆ.

ಇಸ್ರೇಲ್ ರಾಯಭಾರಿ ಕಚೇರಿಯಿಂದ ಕೇವಲ 2 ಕಿಮೀ ದೂರದಲ್ಲಿಯೇ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿದಂತೆ ಹಲವು ಅಧಿಕಾರಿಗಳು ಭಾಗವಹಿಸಿದ್ದರು. ವಿವಿಐಪಿಗಳಿದ್ದ ಈ ಪ್ರದೇಶದಲ್ಲಿ ಬಿಗಿ ಭದ್ರತೆಯ ನಡುವೆಯೂ ಬಾಂಬ್ ಸ್ಫೋಟ ಸಂಭವಿಸಿರುವುದು ಆತಂಕ ಸೃಷ್ಟಿ ಮಾಡಿದೆ.

ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಕೆಲ ವಾಹನಗಳು ಜಖಂಗೊಂಡಿದ್ದು, ಕಾರುಗಳ ಗಾಜುಗಳು ಚೂರಾಗಿವೆ ಎಂದು ವರದಿಗಳು ತಿಳಿಸಿವೆ.

ದೆಹಲಿಯಲ್ಲಿ ಸ್ಫೋಟ ಸಂಭವಿಸಿದ ಹಿನ್ನೆಲೆಯಲ್ಲಿ ಉತ್ತರ ಭಾರತದ ಪ್ರಸಿದ್ಧ ಆಚರಣೆ ಮಹಾಕುಂಭಮೇಳಕ್ಕೆ ಭದ್ರತೆಯನ್ನು ಹೆಚ್ಚಿಸಲಾಗುತ್ತಿದೆ. ಹರಿದ್ವಾರದಲ್ಲಿ ಈಗಾಗಲೇ ಹೈಅಲರ್ಟ್ ಘೋಷಣೆ ಮಾಡಲಾಗಿದೆ. ಇನ್ನು ಅಯೋಧ್ಯೆ ಸೇರಿದಂತೆ ಉತ್ತರಪ್ರದೇಶದ ಹಲವೆಡೆ ಬಿಗಿ ಭದ್ರತೆಯನ್ನು ನಿಯೋಜಿಸಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *