ಬಜೆಟ್ ಅಧಿವೇಶನ ಹಿನ್ನೆಲೆ: ಇಂದು ಸರ್ವ ಪಕ್ಷ ನಾಯಕರ ಸಭೆ ಕರೆದ ಪ್ರಧಾನಿ ಮೋದಿ
ನವದೆಹಲಿ (ಜ. 30): ಕೊರೋನಾ ಕಾರಣದಿಂದ ಅನಿಶ್ಚಿತಗೊಂಡಿದ್ದ ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ದಿನಾಂಕ ನಿಗದಿಗೊಂಡಿದ್ದು, ಅಧಿವೇಶನದ ಹಿನ್ನೆಲೆಯಲ್ಲಿ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ವ ಪಕ್ಷ ನಾಯಕರ ಸಭೆ ಕರೆದಿದ್ದಾರೆ. ಫೆಬ್ರವರಿ 1ಕ್ಕೆ ಬಹು ನಿರೀಕ್ಷಿತ ಕೇಂದ್ರದ ಬಜೆಟ್ ಮಂಡನೆ ಆಗಲಿದೆ. ಇದಕ್ಕೂ ಎರಡು ದಿನ ಮೊದಲು ಅಂದರೆ ಇಂದು ಬೆಳಿಗ್ಗೆ 11ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸರ್ವ ಪಕ್ಷ ನಾಯಕರ ಸಭೆ ನಡೆಯಲಿದೆ. ಇದಾದ ಬಳಿಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಎನ್ ಡಿಎ ಮೈತ್ರಿ ಕೂಟದ ನಾಯಕರ ಸಭೆಯನ್ನೂ ನಡೆಸಲಿದ್ದಾರೆ.
ಎರಡೂ ಸಭೆಗಳಲ್ಲಿ ಕೊರೋನಾ ಕಾರಣಕ್ಕೆ ಜಂಟಿ ಅಧಿವೇಶನ ಮತ್ತು ಬಜೆಟ್ ಅಧಿವೇಶನವನ್ನು ಒಟ್ಟಾಗಿ ನಡೆಸುತ್ತಿರುವ ಬಗ್ಗೆ, ಕಡಿಮೆ ದಿನಗಳ ಕಾಲ ನಡೆಸುತ್ತಿರುವ ಬಗ್ಗೆ, ಶಿಫ್ಟ್ ನಲ್ಲಿ ನಡೆಸುತ್ತಿರುವ ಬಗ್ಗೆ, ಅಂದರೆ ದಿನದಲ್ಲೂ ಕಡಿಮೆ ಅವಧಿ ಅಧಿವೇಶನ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡಿ ಸರ್ಕಾರಕ್ಕೆ ಸಹಕಾರ ನೀಡುವಂತೆ ಪ್ರಧಾನಿ ಮೋದಿ ಮನವಿ ಮಾಡಲಿದ್ದಾರೆ.
ಪ್ರತಿಪಕ್ಷಗಳು, ವಿಶೇಷವಾಗಿ ಕಾಂಗ್ರೆಸ್ ವಿವಾದಾತ್ಮಕ ಕೃಷಿ ಕಾನೂನುಗಳ ಬಗ್ಗೆ, ರೈತರ ಪ್ರತಿಭಟನೆ ಬಗ್ಗೆ, ಕೊರೋನಾ ಬಗ್ಗೆ, ಭಾರತ ಮತ್ತು ಚೀನಾ ಗಡಿಯಲ್ಲಿ ನಿರ್ಮಾಣವಾಗಿರುವ ಉದ್ವಿಗ್ನತೆ ಬಗ್ಗೆ, ಪುಲ್ವಾಮಾ ದಾಳಿಯ ಮಾಹಿತಿಗಳು ಸೋರಿಕೆಯಾದ ಬಗ್ಗೆ, ದೇಶದಲ್ಲಿ ಹಿಂದೆಂದೂ ಕಂಡರಿಯದ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗಿರುವ ಬಗ್ಗೆ, ನಿರುದ್ಯೋಗ ಸಮಸ್ಯೆ ಬಗ್ಗೆ ಮತ್ತು ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಗಳ ಬೆಲೆ ಏರಿಕೆ ಆಗಿರುವ ಬಗ್ಗೆ ಚರ್ಚಿಸಲು ಪ್ರಯತ್ನಿಸಲಿದೆ. ಈ ಹಿನ್ನೆಲೆಯಲ್ಲಿ ಇತರೆ ಪಕ್ಷಗಳನ್ನು ಮೊದಲೇ ವಿಶ್ವಾಸಕ್ಕೆ ತೆಗೆದುಕೊಳ್ಳಲು ಸರ್ವ ಪಕ್ಷ ಸಭೆ ಕರೆಯಲಾಗಿದೆ ಎಂದು ಹೇಳಲಾಗುತ್ತಿದೆ.
ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಜನವರಿ 29ರಿಂದ ಏಪ್ರಿಲ್ 8ರವರೆಗೆ ಬಜೆಟ್ ಅಧಿವೇಶನ ನಡೆಸುವಂತೆ ಶಿಫಾರಸು ಮಾಡಿತ್ತು. ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಶಿಫಾರಸಿನ ಮೇರೆಗೆ ಜನವರಿ 29 ರಿಂದ ಫೆಬ್ರವರಿ 15ರವರೆಗೆ ಮೊದಲ ಹಂತದ ಅಧಿವೇಶನ ನಡೆಸಲಾಗುವುದು. ಮಾರ್ಚ್ 8 ರಿಂದ ಏಪ್ರಿಲ್ 8ರವರೆಗೆ ಎರಡನೇ ಹಂತದ ಅಧಿವೇಶನ ನಡೆಸಲಾಗುವುದು. ಸಂಸತ್ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಂಸತ್ ಸದಸ್ಯರು RT-PCR ಟೆಸ್ಟ್ ಮಾಡಿಸುವುದನ್ನು ಕಡ್ಡಾಯಗೊಳಿಸಲಾಗಿದೆ.
ದೇಶದಲ್ಲಿ ಇನ್ನು ಕೂಡ ಕೊರೋನಾ ವೈರಸ್ ಹರಡುವಿಕೆ ಕಡಿಮೆ ಆಗಿಲ್ಲದ ಕಾರಣ ಬಜೆಟ್ ಅಧಿವೇಶನವನ್ನೂ ಮಳೆಗಾಲದ ಅಧಿವೇಶನದಂತೆ ಶಿಫ್ಟ್ ನಲ್ಲಿ ನಡೆಸಲು ನಿರ್ಧರಿಸಲಾಗಿದೆ. ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ರಾಜ್ಯಸಭೆಯ ಕಲಾಪಗಳು ನಡೆಯಲಿವೆ. 2 ಗಂಟೆಗಳ ಬಿಡುವಿನಲ್ಲಿ ಕಲಾಪ ನಡೆಯುವ ಸ್ಥಳವನ್ನು ಸ್ಯಾನಿಟೈಸ್ ಮಾಡಿ ಮತ್ತೆ ಸಂಜೆ 4ರಿಂದ ರಾತ್ರಿ 9 ಗಂಟೆವರೆಗೆ ಲೋಕಸಭೆಯ ಕಲಾಪ ನಡೆಸಲಾಗುವುದು.
ಸಮಯಾವಕಾಶ ಕಡಿಮೆ ಇರುವುದರಿಂದ ಕಲಾಪದಲ್ಲಿ ಶೂನ್ಯ ವೇಳೆ ಮತ್ತು ಪ್ರಶ್ನೋತ್ತರಕ್ಕೆ ಅವಕಾಶ ನೀಡಲಾಗುತ್ತದೆಯೇ ಎಂಬ ಪ್ರಶ್ನೆ ಉದ್ಭವಿಸಿತ್ತು. ಈ ಬಗ್ಗೆ ಸ್ಪಷ್ಟೀಕರಣ ನೀಡಿದ ಓಂ ಬಿರ್ಲ, ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಶೂನ್ಯ ವೇಳೆ ಮತ್ತು ಪ್ರಶ್ನೋತ್ತರಗಳು ಇರಲಿವೆ.
ಈ ನಡುವೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಶುಕ್ರವಾರ ಲೋಕಸಭೆ ಮತ್ತು ರಾಜ್ಯಸಭೆ ಉಭಯ ಸದನಗಳನ್ನು ಉದ್ದೇಶಿಸಿ ಮಾಡಿದ್ದ ಭಾಷಣವನ್ನು ಪ್ರತಿಪಕ್ಷಗಳು ಬಹಿಷ್ಕರಿಸಿದ್ದವು. ಸರ್ವ ಪಕ್ಷಗಳ ನಾಯಕರ ಸಭೆಗೂ ಕೆಲ ಪ್ರತಿ ಪಕ್ಷಗಳು ಬಹಿಷ್ಕಾರ ಮಾಡುವ ಸಾಧ್ಯತೆ ಇದೆ.