ಬೆಂಗಳೂರು: ಮತ್ತೆ ಕಾಣಿಸಿಕೊಂಡ ಚಿರತೆ, ನಿವಾಸಿಗಳ ತೀವ್ರಗೊಂಡ ಆತಂಕ
ಬೆಂಗಳೂರು: ಕಳೆದ ಹಲವು ದಿನಗಳ ಹಿಂದೆ ಕಾಣಿಸಿಕೊಂಡು ನಿವಾಸಿಗಳ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಶುಕ್ರವಾರ ಮತ್ತೆ ಕಾಣಿಸಿಕೊಳ್ಳುವ ಮೂಲಕ ನಿವಾಸಿಗಳ ಆತಂಕ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ಬೆಂಗಳೂರಿನ ಬೇಗೂರಿನ ಪ್ರೆಸ್ಟೀಜ್ ಸಾಂಗ್ ಆಫ್ ಸೌತ್ ಅಪಾರ್ಟ್‌ಮೆಂಟ್ ಸುತ್ತಮುತ್ತಲಿನ ಕಡೆಗಳಲ್ಲಿ ಚಿರತೆ ಬೀಡು ಬಿಟ್ಟಿದೆ ಎಂಬ ಸುದ್ದಿ ಕಳೆದ ಹಲವು ದಿನಗಳಿಂದ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಇದಕ್ಕೆ ಇಂಬು ನೀಡುವಂತೆ ಆಪಾರ್ಟ್ ಮೆಂಟ್ ನ ಸಿಸಿಟಿವಿಯಲ್ಲೂ ಚಿರತೆ ಕಾಣಿಸಿಕೊಂಡಿತ್ತು. ಚಿರತೆ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ತೀವ್ರಗೊಳಿಸಿತ್ತು. ಆದರೆ ಚಿರತೆ ನಾಪತ್ತೆಯಾಗಿತ್ತು. ಇದೀಗ ಮತ್ತೆ ಶುಕ್ರವಾರ ಚಿರತೆ ಆಪಾರ್ಟ್ ಮೆಂಟ್ ಬಳಿ ಮತ್ತೆ ಚಿರತೆ ಪ್ರತ್ಯಕ್ಷವಾಗಿದ್ದು, ಇದೀಗ ಚಿರತೆ ಸೆರೆ ಅರಣ್ಯ ಇಲಾಖೆಗೆ ದೊಡ್ಡ ತಲೆನೋವಾಗಿದೆ.
ಈಗಾಗಲೇ ಅರಣ್ಯ ಇಲಾಖೆ ಹಲವು ಬೋನ್ ಗಳನ್ನು ಇರಿಸಲಾಗಿದೆಯಾದರೂ ಶುಕ್ರವಾರ ಮತ್ತೆ ಚಿರತೆ ಪ್ರತ್ಯಕ್ಷವಾದ ಬಳಿಕ ಮತ್ತೆ ಮೂರು ಬೋನ್ ಗಳನ್ನು ಅನ್ನು ಘಟನಾ ಸ್ಥಳದಲ್ಲಿ ಇರಿಸಲಾಗಿದೆ.
ಇನ್ನು ಚಿರತೆ ಹಾವಳಿ ಹಿನ್ನಲೆಯಲ್ಲಿ ಆರಣ್ಯ ಇಲಾಖೆ ಮೇಲೆ ಚಿರತೆ ಸೆರೆ ಹಿಡಿಯುವಂತೆ ಒತ್ತಡ ಹೆಚ್ಚಾಗಿದ್ದು, ಈ ಬಗ್ಗೆ ಮಾಹಿತಿ ನೀಡಿರುವ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಅಜಯ್ ಮಿಶ್ರಾ ಅವರು, ಚಿರತೆಯನ್ನು ಸೆರೆಹಿಡಿದು ಅನುಕೂಲಕರ ಆವಾಸಸ್ಥಾನದಲ್ಲಿ ಬಿಡಲು ಆದೇಶ ಹೊರಡಿಸಲಾಗಿದೆ. ಚಿರತೆ ಶುಕ್ರವಾರ ಮುಂಜಾನೆ 1.30 ರ ಸುಮಾರಿಗೆ ಸಿಸಿಟಿವಿ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿತ್ತು. ಚಿರತೆಯನ್ನು ಯಾರೂ ನೇರವಾಗಿ ವೀಕ್ಷಣೆ ಮಾಡಿಲ್ಲವಾದರೂ, ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲವಾದರೂ, ನಾಗರಿಕರು ಭಯಭೀತರಾಗಿದ್ದಾರೆ. ಚಿರತೆಯನ್ನು ಬೇಗನೆ ಸೆರೆಹಿಡಿಯಬೇಕೆಂದು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ ಚಿರತೆಯ ನಡವಳಿಕೆ ನೋಡಿ ನಗರದ ಜನಸಂದಣಿ ನೋಡಿ ಚಿರತೆ ಹೆದರಿದಂತಿದೆ. ಹೀಗಾಗಿ ಯಾರ ಮೇಲೂ ದಾಳಿ ಮಾಡಿಲ್ಲ. ಆಹಾರ ಮತ್ತು ನೀರು ಹುಡುಕುತ್ತಾ ಚಿರತೆ ಅಲೆಯುತ್ತಿದೆ. ಪ್ರಸ್ತುತ ಆಪಾರ್ಟ್ ಮೆಂಟ್ ಸೇರಿದಂತೆ ಇತರೆಡೆಗಳಲ್ಲಿ ಇಲಾಖೆ ಬೋನ್ ಗಳನ್ನು ಇಟ್ಟಿದೆ. ಚಿರತೆ ಚಲನೆ ಪತ್ತೆ ಮಾಡಲು ಸಿಸಿಟಿವಿ ಕ್ಯಾಮೆರಾಗಳು ಮತ್ತು ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದೆ. 15ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.