Rahul Gandhi; ಕಾಂಗ್ರೆಸ್ ಪಕ್ಷಕ್ಕೆ ಮತ್ತೆ ರಾಹುಲ್ ಗಾಂಧಿ ಅಧ್ಯಕ್ಷರಾಗ್ತಾರ?; ದೆಹಲಿ ಕೈ ಘಟಕದಲ್ಲಿ ಹೀಗೊಂದು ಕೂಗು!
ನವ ದೆಹಲಿ: ಕಳೆದ ಲೋಕಸಭೆ ಚುನಾವಣೆ ಸೋಲಿನ ಹೊಣೆ ಹೊತ್ತು ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ಹುದ್ದೆಯಿಂದ ಕೆಳಗೆ ಇಳಿದಿದ್ದರು. ಆದರೆ, ಅವರು ಆ ಹುದ್ದೆಯನ್ನು ತ್ಯಜಿಸಿ 1 ವರ್ಷವಾದರೂ ಸಹ ಈವರೆಗೆ ಕಾಂಗ್ರೆಸ್ ಈ ಹುದ್ದೆಗೆ ಯಾರನ್ನೂ ನೇಮಕ ಮಾಡಿಲ್ಲ. ಬದಲಾಗಿ ಸೋನಿಯಾ ಗಾಂಧಿ ಅವರೇ ಹಂಗಾಮಿ ರಾಷ್ಟ್ರಾಧ್ಯಕ್ಷೆಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ನಡುವೆ ಇದೀಗ ಮತ್ತೊಮ್ಮೆ ರಾಹುಲ್ ಗಾಂಧಿ ಅವರೇ ರಾಷ್ಟ್ರಾಧ್ಯಕ್ಷರಾಗಬೇಕು ಎಂಬ ಕೂಗು ದೆಹಲಿ ಕೈ ಘಟಕದಿಂದ ಕೇಳಿಬರುತ್ತಿದೆ. ಕಾಂಗ್ರೆಸ್ ದೆಹಲಿ ಘಟಕವು ಭಾನುವಾರ ಸಂಜೆ ಈ ಕುರಿತು “ಸರ್ವಾನುಮತದ” ನಿರ್ಣಯವನ್ನು ಅಂಗೀಕರಿಸಿದೆ. ಬಂಗಾಳ ಮತ್ತು ತಮಿಳುನಾಡು ಸೇರಿದಂತೆ ಹಲವಾರು ಪ್ರಮುಖ ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಎದುರಾಗಿದೆ. ಇದರ ಬೆನ್ನಿಗೆ ಜೂನ್‌ನಲ್ಲಿ ಸಾಂಸ್ಥಿಕ ಚುನಾವಣೆಗಳೂ ಎದುರಾಗಲಿದ್ದು, ಎಲ್ಲಾ ರಾಜ್ಯ ಕಾಂಗ್ರೆಸ್ ಘಟಕಗಳಲ್ಲೂ ಇದೇ ರೀತಿಯ ಕೂಗು ಕೇಳಿಬರುವ ನಿರೀಕ್ಷೆ ಇದೆ ಎನ್ನಲಾಗುತ್ತಿದೆ.
ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ ಸಿಡಬ್ಲ್ಯುಸಿ (ಕಾಂಗ್ರೆಸ್ ಕಾರ್ಯಕಾರಿ ಸಮಿತಿ) ಯ ಪ್ರಕ್ಷುಬ್ಧ ಸಭೆಯ ನಂತರ ಈ ನಿರ್ಣಯವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಸಭೆಯಲ್ಲಿ ಹಿರಿಯ ನಾಯಕರಾದ ಗುಲಾಮ್ ನಬಿ ಆಜಾದ್, ಆನಂದ್ ಶರ್ಮಾ, ಮುಕುಲ್ ವಾಸ್ನಿಕ್ ಮತ್ತು ಪಿ ಚಿದಂಬರಂ – ಪಕ್ಷದ ನಾಯಕತ್ವ ಮತ್ತು ನಿರ್ವಹಣೆಯ ಬಗ್ಗೆ ಆಗಾಗ್ಗೆ ಪ್ರಶ್ನೆಗಳನ್ನು ಎತ್ತುತ್ತಿದ್ದು, ಚುನಾವಣೆ ಮೂಲಕ ರಾಷ್ಟ್ರಾಧ್ಯಕ್ಷರ ಆಯ್ಕೆ ನಡೆಯಬೇಕು ಎಂದಿದ್ದಾರೆ.
ಇದಕ್ಕೆ ಉತ್ತರ ನೀಡಿರುವ ಗಾಂಧಿ ಕುಟುಂಬದ ನಿಷ್ಠರು ಎನಿಸಿಕೊಂಡಿರುವ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್, ಎ.ಕೆ. ಆಂಟನಿ, ತಾರಿಕ್ ಅನ್ವರ್ ಮತ್ತು ಉಮ್ಮನ್ ಚಾಂಡಿ ಮುಂದೆ ಎದುರಾಗಲಿರುವ ರಾಜ್ಯ ಚುನಾವಣೆಗಳ ನಂತರ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿ ಎಂದು ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ರಾಹುಲ್ ಗಾಂಧಿ ಈಗಾಗಲೇ ರಾಷ್ಟ್ರಾಧ್ಯಕ್ಷ ಹುದ್ದೆಯನ್ನು ತೊರೆದಿದ್ದಾರೆ. ಅಲ್ಲದೆ, ಅವರು ಈಗ ಯಾವುದೇ ಹುದ್ದೆಯ ಬಗ್ಗೆ ಆಕಾಂಕ್ಷೆ ಹೊಂದಿಲ್ಲ ಎಂದು ಹೇಳಲಾಗುತ್ತಿದೆ. ಈ ನಡುವೆ ಕಾಂಗ್ರೆಸ್ ಪಕ್ಷದಲ್ಲಿ ರಾಷ್ಟ್ರಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಸಲು ಎಲ್ಲರೂ ಒಪ್ಪಿಗೆ ಸೂಚಿಸಿದ್ದರೆ, ದೆಹಲಿ ಘಟಕ ಮತ್ತೆ ರಾಹುಲ್ ಗಾಂಧಿ ಅವರೇ ರಾಷ್ಟ್ರಾಧ್ಯಕ್ಷರಾಗಬೇಕು ಎಂದು ಒತ್ತಾಯಿಸಿದೆ. ಈ ನಡುವೆ ರಾಹುಲ್ ಮುಂದಿನ ದಿನಗಳಲ್ಲಿ ಯಾವ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.