ದೇಶದ ರಕ್ಷಣೆಗೆ ಇತರೆ ರಾಷ್ಟ್ರಗಳ ಮೇಲಿನ ಅವಲಂಬನೆ ಮುಂದುವರಿಕೆ ಸಾಧ್ಯವಿಲ್ಲ: ರಕ್ಷಣಾ ಸಚಿವ ರಾಜನಾಥ್ ಸಿಂಗ್
ಬೆಂಗಳೂರು: ನಮ್ಮ ದೇಶದ ರಕ್ಷಣೆಗೆ ಇತರೆ ರಾಷ್ಟ್ರಗಳ ಮೇಲಿನ ಅವಲಂಬನೆ ಹೀಗೆಯೇ ಮುಂದುವರೆಸಲು ಸಾಧ್ಯವಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮಂಗಳವಾರ ಹೇಳಿದ್ದಾರೆ.
ಬೆಂಗಳೂರಿಗೆ ಆಗಮಿಸಿರುವ ರಾಜನಾಥ್ ಸಿಂಗ್ ಅವರು, ಹಿಂದೂಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್‌ನ (ಎಚ್‌ಎಎಲ್) ಹಗರು ಯುದ್ಧ ವಿಮಾನ (ಎಲ್‌ಸಿಎ) ತಯಾರಿಕಾ ಎರಡನೇ ಕಾರ್ಯಕ್ಷೇತ್ರವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿ ಅವರು, ನಮ್ಮ ದೇಶದ ರಕ್ಷಣೆಗೆ ನಾವು ಇತರೆ ರಾಷ್ಟ್ರಗಳ ಮೇಲೆ ಹೀಗೆಯೇ ಅವಲಂಬನೆಯಾಗುವುದನ್ನು ಮುಂದುವರೆಸಲು ಸಾಧ್ಯವಿಲ್ಲ. ತೇಜಸ್ ಎಂ1ಎ ಖರೀದಿಗೆ ಸಾಕಷ್ಟು ರಾಷ್ಟ್ರಗಳು ಆಸಕ್ತಿ ತೋರಿಸುತ್ತಿವೆ ಎಂಬುದಾಗಿ ತಿಳಿದುಬಂದಿದೆ. ಶೀಘ್ರದಲ್ಲಿಯೇ ಇತರೆ ರಾಷ್ಟ್ರಗಳಿಂದ ಆರ್ಡರ್ ಗಳನ್ನು ಪಡೆಯಲಿದ್ದೀರಿ ಎಂದು ಹೆಚ್ಎಎಲ್’ಗೆ ತಿಳಿಸಿದ್ದಾರೆ.
ಹೆಚ್ಎಎಲ್’ಗೆ ಹೆಚ್ಚೆಚ್ಚು ಆರ್ಡರ್ ಬರುವಂತೆ ಮಾಡಲು ಸಾಕಷ್ಟು ಕೆಲಸಗಳನ್ನು ಮಾಡಲಾಗುತ್ತದೆ. ಕೊರೋನಾ ಸಾಂಕ್ರಾಮಿಕ ರೋಗದ ನಡುವಲ್ಲೂ ಹೆಚ್ಎಎಲ್ ರೂ.48,000 ಕೋಟಿ ಆರ್ಡರ್ ಗಳನ್ನು ಪಡೆದುಕೊಂಡಿದೆ. ಸ್ಥಳೀಯ ರಕ್ಷಣಾ ಸಂಗ್ರಹದ ದೃಷ್ಟಿಯಲ್ಲಿ ನೋಡುವುದಾದರೆ, ಇದೊಂಡು ಅತೀದೊಡ್ಡ ಗಳಿಕೆಯೆಂದೇ ಹೇಳಬಹುದು. ಈ ಬೆಳವಣಿಗೆಯು ಭಾರತೀಯ ಏರೋಸ್ಪೇಸ್ ಕ್ಷೇತ್ರವನ್ನು ಬಹಳ ಎತ್ತರಕ್ಕೆ ಕೊಂಡೊಯ್ಯಲಿದೆ ಎಂದು ಹೇಳಿದ್ದಾರೆ.
ಮುಂದಿನ 3-4 ವರ್ಷಗಳಲ್ಲಿ ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ 1.75 ಲಕ್ಷ ಕೋಟಿ ರೂ.ಗಳ ಗುರಿ ಸಾಧಿಸುತ್ತೇವೆಂಬ ವಿಶ್ವಾಸ ನನಗಿದೆ ಎಂದಿದ್ದಾರೆ.
ತೇಜಸ್ ಯುದ್ಧ ವಿಮಾನ ಸ್ಥಳೀಯ ವಿಮಾನವಷ್ಟೇ ಅಲ್ಲ, ಎಂಜಿನ್ ಸಾಮರ್ಥ್ಯ, ರೇಡಾರ್ ವ್ಯವಸ್ಥೆ, ದೃಶ್ಯ ವ್ಯಾಪ್ತಿಯನ್ನೂ ಮೀರಿ ಹಲವಾರು ನಿಯತಾಂಕಗಳಲ್ಲಿ ವಿದೇಶಿ ವಿಮಾನಗಳಿಗಿಂತ ಉತ್ತಮವಾಗಿದೆ ಮತ್ತು ಅಗ್ಗದ ದರವನ್ನು ಹೊಂದಿದೆ ಎಂದು ತಿಳಿಸಿದ್ದಾರೆ