ಮಾರ್ಕೆಟ್, ಬಸ್ ನಲ್ಲಿ ಇಲ್ಲದ ನಿರ್ಬಂಧ ಥಿಯೇಟರ್ ನಲ್ಲಿ ಏಕೆ?: ಧ್ರುವ ಸರ್ಜಾ ಕಿಡಿ
ಬೆಂಗಳೂರು: ಸಿನಿಮಾ ಥಿಯೇಟರ್ ಗಳಲ್ಲಿ ಶೇ.50ರಷ್ಟು ಮಾತ್ರ ಪ್ರೇಕ್ಷಕರನ್ನು ಹೊಂದುವ ನಿಯಮದ ವಿರುದ್ಧ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಕಿಡಿಕಾರಿದ್ದಾರೆ.
ಮಾರಕ ಕೊರೋನಾ ವೈರಸ್ ನಿಯಂತ್ರಣ ಸಂಬಂಧ ಈ ಹಿಂದಿನ ಕೋವಿಡ್ ಮಾರ್ಗಸೂಚಿಯಂತೆ ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಮಾತ್ರ ಪ್ರೇಕ್ಷಕರನ್ನು ಹೊಂದುವ ಮೂಲಕ ಸಿನಿಮಾ ಪ್ರದರ್ಶನಕ್ಕೆ ಅನುಮತಿ ನೀಡಲಾಗಿತ್ತು. ಆದರೆ ಈಗ ರಾಜ್ಯದಲ್ಲಿ ಕೋವಿಡ್ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಇದೇ ಕಾರಣಕ್ಕೆ ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಪ್ರೇಕ್ಷಕರ ಹೊಂದಲು ಅನುಮತಿ ನೀಡಬೇಕು ಎಂಬ ಕೂಗು ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿಯಿಂದ ಬರುತ್ತಿದೆ.
ಈಗಾಗಲೇ ಕೋವಿಡ್ ನಿರ್ಬಂಧಗಳನ್ನು ಮತ್ತಷ್ಟು ಸಡಿಲಿಸಿದ್ದು, ಹೀಗಾಗಿ ರಾಜ್ಯದಲ್ಲಿ ಪರಿಸ್ಥಿತಿ ಬಹುತೇಕ ಸಹಜಸ್ಥಿತಿಗೆ ಮರಳಿದೆ. ಇದೇ ಕಾರಣಕ್ಕೆ ಥಿಯೇಟರ್ ಗಳಲ್ಲಿಯೂ ಶೇ.100ರಷ್ಟು ಪ್ರೇಕ್ಷಕರನ್ನು ಹೊಂದಲು ಅವಕಾಶ ನೀಡಬೇಕು ಎಂದು ಸಿನಿಮಾವಲಯ ಸರ್ಕಾರವನ್ನು ಒತ್ತಾಯಿಸಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟ ಧ್ರುವ ಸರ್ಜಾ ಟ್ವೀಟ್ ಮಾಡಿದ್ದು, ಮಾರ್ಕೆಟ್ ಗಳಲ್ಲಿ ಜನ ಗಿಜಿಗುಡುತ್ತಿದ್ದಾರೆ. ಸಾವಿರಾರು ಮಂದಿ ಏಕಕಾಲದಲ್ಲಿ ಸಂಚರಿಸುತ್ತಿದ್ದಾರೆ. ಬಸ್ ನಲ್ಲೂ ಜನ ತುಂಬಿ ತುಳುಕುತ್ತಿದ್ದಾರೆ. ಆದರೆ ಇದಾವುದಕ್ಕೂ ಇಲ್ಲದ ನಿರ್ಬಂಧ ಥಿಯೇಟರ್ ಗಳಿಗೆ ಮಾತ್ರ ಏಕೆ ಎಂದು ಧ್ರುವ ಸರ್ಜಾ ಪ್ರಶ್ನೆ ಮಾಡಿದ್ದಾರೆ.
ಇನ್ನು ಧ್ರುವ ಸರ್ಜಾ ಅವರ ಪ್ರಶ್ನೆಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಸಾಥ್ ನೀಡಲಿದ್ದು, ಈ ಸಂಬಂಧ ಕರ್ನಾಟಕ ಸರ್ಕಾರದೊಂದಿಗೆ ಇಂದು ಚರ್ಚೆ ನಡೆಸುವ ಸಾಧ್ಯತೆ ಇದೆ.
ನಟ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ಪೊಗರು ಚಿತ್ರ ಇದೇ ಫೆಬ್ರವರಿ 19ರಂದು ಪೊಗರು ಬಿಡುಗಡೆಯಾಗಲಿದೆ.