ಡಕೋಟಾ ಎಕ್ಸ್ಪ್ರೆಸ್ನಂತಿರುವ ಬಿಜೆಪಿ ಸರ್ಕಾರವನ್ನು ಜನರು ಶೀಘ್ರದಲ್ಲೇ ರಿಪ್ಲೇಸ್ ಮಾಡ್ತಾರೆ; ವಿಧಾನಸಭೆಯಲ್ಲಿ ಗುಡುಗಿದ ಸಿದ್ದರಾಮಯ್ಯ
ಬೆಂಗಳೂರು(ಫೆ.03): ಸಂವಿಧಾನಕ್ಕೆ ವಿರುದ್ಧವಾಗಿರುವ ಸರ್ಕಾರ ಅಂದರೆ ಅದು ಬಿಜೆಪಿ ಸರ್ಕಾರ. ಆಪರೇಷನ್ ಕಮಲ ಹುಟ್ಟಿ ಹಾಕಿದ್ದು ಯಾರು..? ಆಪರೇಷನ್ ಕಮಲದ ಜನಕ ಅಂತ ಯಾರಾದ್ರೂ ಇದ್ದಾರೆ ಅಂದ್ರೆ, ಅದು ಮಿಸ್ಟರ್ ಯಡಿಯೂರಪ್ಪ ಮಾತ್ರ. ಪಾಪದ ಹಣ ಖರ್ಚು ಮಾಡಿ, ಶಾಸಕರನ್ನು ಕಾಂಗ್ರೆಸ್ , ಜೆಡಿಎಸ್ನಿಂದ ಕರೆದುಕೊಂಡರು. ಇಲ್ಲಿ ನಾನು ಪರ್ಚೇಸ್ ಅನ್ನೋ ಪದ ಬಳಕೆ ಮಾಡಲ್ಲ, ಯಾಕೆಂದರೆ ಅವರಿಗೆ ಕೋಪ ಬರಬಹುದು. ಇದು ವೆಂಕಟರಮಣಪ್ಪನಿಗೂ ಅನುಭವ ಆಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸದನದಲ್ಲಿ ಮಾತನಾಡಿದರು.
ಸಿದ್ದರಾಮಯ್ಯನವರ ಮಾತಿಗೆ ವೆಂಕಟರಮಣಪ್ಪ ಕೂಡ ಧ್ವನಿಗೂಡಿಸಿ, ಹೌದು ನನಗೆ ಅವರು ತುಂಬಾ ಕಿರುಕುಳ ಕೊಟ್ಟು, ನಂತರ ಪಕ್ಷದಿಂದಲೇ ಉಚ್ಚಾಟನೆ ಮಾಡಿದರು. ಮುಂದೆ ಅವರಿಗೂ ಇದೇ ಸಂದರ್ಭ ಬರಬಹುದು ಎಂದು ವೆಂಕರಣಮಪ್ಪ ಅಭಿಪ್ರಾಯಪಟ್ಟರು. ಇದೇ ವೇಳೆ, ಭೈರತಿ ಬಸವರಾಜ್ ಅದೆಲ್ಲಾ ಏನೂ ಆಗಲ್ಲ, ನಾವೆಲ್ಲರೂ ಚೆನ್ನಾಗಿ ಇದ್ದೇವೆ ಎಂದು ತಿರುಗೇಟು ನೀಡಿದರು.
ಇದು ಅನೈತಿಕವಾಗಿ ಹುಟ್ಟಿಕೊಂಡ, ಅಂಗ ವೈಫಲ್ಯದಿಂದ ಬಳಲುತ್ತಿರುವ ಸರ್ಕಾರ. ಈ ರೀತಿಯಾಗಿ ಹುಟ್ಟಿರುವ ಸರ್ಕಾರದಿಂದ ಯಾವ ರೀತಿ ಅಭಿವೃದ್ಧಿಯಾಗುತ್ತೆ? ಎಂದು ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದರು. ಹಿಂದೆ ಇವರು ಏನೇನು ಸಾಧನೆ ಮಾಡಿದ್ದಾರೆ ಎಂದು ಕನ್ನಡಿ ಮುಂದೆ ನಿಂತುಕೊಂಡು ನೋಡಿಕೊಳ್ಳಲಿ. ಹಿಂದಿನ ಸರ್ಕಾರದ ಸಾಧನೆ ಬಗ್ಗೆ ನಾನು ಚರ್ಚೆ ಮಾಡಲು ತಯಾರಾಗಿದ್ದೇನೆ. ಇವರು ಇವರ ಪ್ರಣಾಳಿಕೆ ಇಟ್ಟುಕೊಂಡು ಚರ್ಚೆಗೆ ಬರಲಿ. ನಾನು ಚರ್ಚೆಗೆ ಬರಲು ರೆಡಿ ಇದ್ದೇನೆ. ಇವರು ಇವರ ಸಾಧನೆ ಬಗ್ಗೆ ಚರ್ಚೆಗೆ ಬರಲಿ ಎಂದು ಸಿಎಂ ಯಡಿಯೂರಪ್ಪನವರಿಗೆ ಸಿದ್ದರಾಮಯ್ಯ ಸವಾಲು ಹಾಕಿದರು.
ಇನ್ನು, ಖಾತೆ ಹಂಚಿಕೆ ವಿಚಾರ ಎತ್ತಿಕೊಂಡ ಸಿದ್ದರಾಮಯ್ಯ, ಐದು ದಿನಗಳಲ್ಲಿ ನಾಲ್ಕು ಬಾರಿ ಖಾತೆ ಹಂಚಿಕೆ ಮಾಡಿದ್ದಾರೆ. ಕರ್ನಾಟಕದ ಇತಿಹಾಸದಲ್ಲಿ ಏನಾದರೂ ಹೀಗೆ ನಡೆದಿತ್ತೇನ್ರಿ? ಯಡಿಯೂರಪ್ಪನವರನ್ನು ಸಮರ್ಥ ಸಿಎಂ ಅಂತಾ ಕರೀಬೇಕಾ? ಅಥವಾ ಅಸಮರ್ಥ ಸಿಎಂ ಅಂತಾ ಕರೀಬೇಕಾ ಎಂದು ಪ್ರಶ್ನಿಸಿದರು.
ಎಷ್ಟು ಬಾರಿ ಖಾತೆ ಹಂಚಿಕೆ ಆಗಿದೆ ಎಂದು ಸಿದ್ದರಾಮಯ್ಯನವರು ಸಚಿವ ಅರವಿಂದ್ ಲಿಂಬಾವಳಿಗೆ ಪ್ರಶ್ನಿಸಿದರು. ಏನೋ ಗೊತ್ತಿಲ್ಲ ಸರ್, ಆ ಬಗ್ಗೆ ನನಗೆ ಗೊತ್ತಿಲ್ಲ ಎಂದರು ಲಿಂಬಾವಳಿ. ಆಗ ಸಿದ್ದರಾಮಯ್ಯ, ಪಾಪ ನಿಮಗೆ ನಗರಾಭಿವೃದ್ಧಿ ಖಾತೆ ಕೊಡಬೇಕಿತ್ತು ಆದರೆ ಸಿಎಂ ಯಡಿಯೂರಪ್ಪ ಕೊಟ್ಟಿಲ್ಲ. ಹಿಂದೆ ನಾನು ಸಿಎಂ ಆಗಿದ್ದಾಗ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಟ್ಟಿದ್ದೆ. ಆದರೆ ಯಡಿಯೂರಪ್ಪ ಯಾಕೆ ಇನ್ನೂ ಆ ಖಾತೆಯನ್ನು ಅವರೇ ಇಟ್ಟುಕೊಂಡಿದ್ದಾರೆ ಅಂತ ಗೊತ್ತಿಲ್ಲ. ಹೋಗಲಿ ಈ ಖಾತೆಯನ್ನು ಸುರೇಶ್ ಕುಮಾರ್ಗಾದರೂ ಕೊಡಬಹುದಿತ್ತಪ್ಪ ಎಂದು ಟೀಕೆ ಮಾಡಿದರು. ಸದನದಲ್ಲಿ ಸಿದ್ದರಾಮಯ್ಯ ಸಿಎಂ ಸೇರಿ ಸಚಿವರನ್ನು ಕಿಚಾಯಿಸಿದರು.
ಪಾಪ ಸುರೇಶ್ ಕುಮಾರ್ ಎಂದ ಸಿದ್ದರಾಮಯ್ಯನವರಿಗೆ, ನನ್ನ ಪಾಪ ಎಂದು ಕರೆಯಬೇಡಿ ಎಂದರು ಸುರೇಶ್ ಕುಮಾರ್. ಸರಿ ಹೋಗಲಿ ಬಿಡಿ ಎಂದು ಸಿದ್ದರಾಮಯ್ಯ ಭಾಷಣ ಮುಂದುವರೆಸಿದರು.ಬಿಜೆಪಿ ಸರ್ಕಾರ ಡಕೋಟಾ ಎಕ್ಸಪ್ರೆಸ್. ರಿಪೇರಿ ಮಾಡೋಕೆ ಆಗದ ಸರ್ಕಾರವನ್ನು ಶೀಘ್ರದಲ್ಲೇ ಜನರು ರಿಪ್ಲೇಸ್ ಮಾಡ್ತಾರೆ. ಯಾರು ಕೂಡ ನಿಮ್ಮ ಸರ್ಕಾರವನ್ನು ರಿಪೇರಿ ಮಾಡೋಕೆ ಆಗಲ್ಲ. ನಿಮ್ಮಿಂದ ಯಾರ ಕೈಯಲ್ಲೂ ಇದನ್ನು ಮಾಡೋಕೆ ಸಾಧ್ಯ ಇಲ್ಲ. ಆದರೆ ರಿಪ್ಲೇಸ್ ಮಾತ್ರ ರಾಜ್ಯದ ಜನರು ಮಾಡ್ತಾರೆ. ಅದು ಕೂಡ ಏನು ದೂರು ಇಲ್ಲ, ಶೀಘ್ರದಲ್ಲೇ ಜನರು ಇದನ್ನು ಮಾಡ್ತಾರೆ. ಆದರೂ ಅಲ್ಲಿವರೆಗೂ ನೀವು ಒಳ್ಳೆ ಕಾರ್ಯ ಮಾಡಬೇಕು ಅಲ್ವಾ..? ಯಾಕೆ ಸತ್ತ ಸರ್ಕಾರದದಂತೆ ಇದ್ದೀರಾ ಎಂದು ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪನವರನ್ನು ಟೀಕೆ ಮಾಡಿದರು.
ಮುಂದುವರೆದ ಅವರು, ಇನ್ನೂ ನೀವು ಮಂತ್ರಿ ಮಂಡಲ ಪೂರ್ಣ ಮಾಡೋಕೆ ಆಗಿಲ್ಲ. ನಾಗೇಶ್ ರನ್ನು ತೆಗೆದು ಬೀದಿ ಪಾಲು ಮಾಡಿಬಿಟ್ಟರು. ಪಾಪ ಅವನು ನಮ್ಮ ಜೊತೆ ಚೆನ್ನಾಗಿ ಇದ್ದ. ಆದರೆ ಅಲ್ಲಿಗೆ ಹೋಗಿ ಬೀದಿ ಪಾಲು ಆಗಿಹೋದ. ಅವನನ್ನು ಪಾಪ ಈ ಸುಧಾಕರ್ ಕೂಡ ರಕ್ಷಣೆ ಮಾಡೋಕೆ ಆಗಿಲ್ಲ. ಏನು ಅಬಕಾರಿ ಇಲಾಖೆಯಲ್ಲಿ ಏನಾದರೂ ಸಮಸ್ಯೆ ಆಗಿತ್ತಾ? ಅವರನ್ನು ತೆಗೆದು ಹಾಕೋಕೆ? ಎಂದು ಲಿಂಬಾವಳಿಗೆ ಸಿದ್ದರಾಮಯ್ಯ ಪ್ರಶ್ನಿಸಿದರು. ಆಗ ಯಾಕೆ ಸರ್ ನೀವು ಪದೇ ಪದೇ ನನ್ನನ್ನೇ ಪ್ರಶ್ನೆ ಮಾಡ್ತೀರಾ ಅಂತ ಲಿಂಬಾವಳಿಯವರು ಕೇಳಿದರು.