ಮೋದಿ ಸರ್ಕಾರವನ್ನು ಅಧಿಕಾರದಿಂದ ಇಳಿಸುವ ಎಚ್ಚರಿಕೆ ನೀಡಿದ ಟಿಕಾಯತ್
ಚಂಡೀಗಢ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಐದು ನಿರ್ಣಯಗಳನ್ನು ಹರ್ಯಾಣದ ಜಿಂದ್ ಜಿಲ್ಲೆಯ ಮಹಾಪಂಚಾಯತ್ ನಲ್ಲಿ ಪ್ರತಿಭಟನಾ ನಿರತ ರೈತರು ಹೊರಡಿಸಿದ್ದಾರೆ.
ಕೃಷಿ ಕಾಯ್ದೆಯಲ್ಲಿ ಕನಿಷ್ಠ ಬೆಂಬಲ ಬೆಲೆಯನ್ನು ಖಚಿತಪಡಿಸುವುದು, ರೈತರ ಸಾಲಮನ್ನಾ, ಸ್ವಾಮಿನಾಥನ್ ವರದಿಯ ಶಿಫಾರಸುಗಳನ್ನು ಜಾರಿಗೆ ತರುವುದು, ಮೊನ್ನೆ ಜನವರಿ 26ರ ಹಿಂಸಾಚಾರದಲ್ಲಿ ದೆಹಲಿಯಲ್ಲಿ ರೈತರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಕೇಸುಗಳನ್ನು ಹಿಂತೆಗೆದುಕೊಳ್ಳುವುದೇ ಆ ಐದು ನಿರ್ಣಯಗಳಾಗಿವೆ.
ಪ್ರತಿಭಟನಾ ನಿರತ ರೈತರು ಮಹಾಪಂಚಾಯತ್ ನ್ನು ರಾಷ್ಟ್ರೀಯ ಮಟ್ಟದಲ್ಲಿ ನಡೆಸುವುದಾಗಿ ಬೆದರಿಕೆ ಹಾಕಿದ್ದು, ಕೇಂದ್ರ ಸರ್ಕಾರ ಕಾನೂನು ಹಿಂತೆಗೆದುಕೊಳ್ಳುವವರೆಗೆ ದೇಶಾದ್ಯಂತ ಮಹಾಪಂಚಾಯತ್ ನ್ನು ನಡೆಸಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.
ನಿನ್ನೆ ಜಿಂದ್ ಮಹಾಪಂಚಾಯತ್ ನಲ್ಲಿ ಮಾತನಾಡಿದ ಭಾರತೀಯ ಕಿಸಾನ್ ಸಂಘದ ನಾಯಕ ರಾಕೇಶ್ ಟಿಕಾಯತ್, ಪ್ರತಿಭಟನೆ ಮುಂದುವರಿದರೆ ಬಿಜೆಪಿ ಸರ್ಕಾರ ಅಧಿಕಾರ ಕಳೆದುಕೊಳ್ಳುತ್ತದೆ. ಸರ್ಕಾರ ನಮ್ಮ ಮಾತುಗಳನ್ನು ಜಾಗ್ರತೆಯಿಂದ ಕೇಳಬೇಕು. ಗದ್ದಿ ವಾಪ್ಸಿಗೆ ನಮ್ಮ ಯುವಕರು ಕರೆ ಕೊಟ್ಟರೆ ನೀವೇನು ಮಾಡುತ್ತೀರಿ ಎಂದು ಕೇಳಿದರು.
ಗಡಿ ಭಾಗಗಳಲ್ಲಿ ದೆಹಲಿ ಪೊಲೀಸರು ಹಾಕಿರುವ ಬೃಹತ್ ತಡೆಗಳ ಬಗ್ಗೆ ಮಾತನಾಡಿದ ಅವರು, ರಾಜನಿಗೆ ಭಯವಾದರೆ ಕೋಟೆಯನ್ನು ಮುಚ್ಚಲು ನೋಡುತ್ತಾರೆ ಎಂದರು.
ಹರ್ಯಾಣದ ಕಂಡೇಲಾ ಗ್ರಾಮದ ಮಹಾಪಂಚಾಯತ್ ನಲ್ಲಿ ನಿನ್ನೆ ಟಿಕಾಯತ್ ಅವರು ಮಾತು ಆರಂಭಿಸುವ ಮೊದಲು ರೈತ ಮುಖಂಡರು ಕುಳಿತಿದ್ದ ವೇದಿಕೆ ಅಧಿಕ ಭಾರದಿಂದಾಗಿ ಕುಸಿದು ಹೋಯಿತು. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ, ಟಿಕಾಯತ್ ಭಾಷಣ ಮುಂದುವರಿಸಿದರು.
ಪಂಜಾಬ್ ಮತ್ತು ಹರ್ಯಾಣ ಭಾಗದ ರೈತರು ಟಿಕ್ರಿ ಮತ್ತು ಸಿಂಘು ಗಡಿಭಾಗದಲ್ಲಿ ಕಳೆದ ಎರಡು ತಿಂಗಳಿನಿಂದ ಜಮಾಯಿಸಿದ್ದಾರೆ. ಮೊನ್ನೆ ಗಣರಾಜ್ಯೋತ್ಸವ ನಂತರ ಪ್ರತಿಭಟನಾ ಸ್ಥಳಕ್ಕೆ ಪೊಲೀಸ್ ಬ್ಯಾರಿಕೇಡ್ ಗಳನ್ನು ಹಾಕಲಾಗಿದೆ.
ಈ ಮಧ್ಯೆ, ನಿನ್ನೆ ದೆಹಲಿಯಲ್ಲಿ ಪ್ರತಿಕ್ರಿಯೆ ನೀಡಿದ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್, ಪ್ರತಿಭಟನಾ ನಿರತ ರೈತರೊಂದಿಗೆ ಕೇಂದ್ರ ಸರ್ಕಾರ ಯಾವುದೇ ಅನೌಪಚಾರಿಕ ಮಾತುಕತೆ ನಡೆಸುತ್ತಿಲ್ಲ, ಸ್ಥಳೀಯ ಆಡಳಿತದ ಕಾನೂನು ಮತ್ತು ಸುವ್ಯವಸ್ಥೆಯನ್ನು ನೋಡಿಕೊಂಡು ಪ್ರತಿಭಟನಾ ಸ್ಥಳದಲ್ಲಿ ಮುಂದಿನ ದಿನಗಳಲ್ಲಿ ಇಂಟರ್ನೆಟ್ ಸೇವೆ ರದ್ದು ಮಾಡಿ ಇನ್ನಷ್ಟು ಬ್ಯಾರಿಕೇಡ್ ಗಳನ್ನು ಹಾಕಲಾಗುವುದು ಎಂದು ಹೇಳಿದ್ದಾರೆ.
ಕಳೆದ ಬಾರಿ ಕೇಂದ್ರ ಸರ್ಕಾರ ಮತ್ತು ಪ್ರತಿಭಟನಾ ನಿರತ ರೈತರ ಮಧ್ಯೆ 11ನೇ ಸುತ್ತಿನ ಮಾತುಕತೆ ನಡೆದು ಯಾವುದೇ ನಿರ್ಣಯಕ್ಕೆ ಬರುವಲ್ಲಿ ವಿಫಲವಾಗಿದೆ. ನೂತನ ಕೃಷಿ ಕಾಯ್ದೆಯನ್ನು ರದ್ದುಪಡಿಸಲು 18 ತಿಂಗಳು ಸಮಯಾವಕಾಶ ನೀಡಿ ಎಂದು ಕಳೆದ ಸಭೆಯಲ್ಲಿ ಕೇಂದ್ರ ಸರ್ಕಾರ ರೈತ ಸಂಘಟನೆಗಳಿಗೆ ಹೇಳಿತ್ತು.
ಸಂಚಾರ ಮಾರ್ಗ ಬದಲಾವಣೆ: ಇಂದು ಬೆಳಗ್ಗೆ ಗಾಜಿಪುರ್ ಗಡಿಭಾಗವನ್ನು ಬಂದ್ ಮಾಡಲಾಗಿದೆ. ನೊಯ್ಡಾ ಸಂಪರ್ಕ ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ 24, ರಾಷ್ಟ್ರೀಯ ಹೆದ್ದಾರಿ 9ರಲ್ಲಿ ಸಂಚಾರವನ್ನು ಬದಲಿಸಲಾಗಿದೆ. ಮುರ್ಗ ಮಂಡಿ ಮತ್ತು ಗಾಜಿಪುರ್ ಆರ್/ಎ ರಸ್ತೆ ಸಂಖ್ಯೆ 56, ವಿಕಾಸ್ ಮಾರ್ಗದಲ್ಲಿ ಸಂಚಾರ ಬದಲಾಯಿಸಿದ್ದು ಬೇರೆ ಗಡಿಭಾಗದಿಂದ ವಾಹನ ಸಂಚಾರರು ಸಂಚರಿಸುವಂತೆ ಹೇಳಲಾಗಿದೆ.
ಸಿಂಘು, ಪಿಯು ಮನಿಯಾರಿ, ಸಬೊಲಿ, ಔಚಂಡಿ ಗಡಿ ಭಾಗಗಳನ್ನು ಮುಚ್ಚಲಾಗಿದೆ. ಲಾಂಪುರ್, ಸಫಿಯಾಬಾದ್, ಸಿಂಘು ಶಾಲೆ ಮತ್ತು ಪಲ್ಲ ಟೋಲ್ ಪ್ಲಾಸಾ ಗಡಿಗಳನ್ನು ತೆರೆಯಲಾಗಿದೆ. ಬದಲಿ ಮಾರ್ಗವನ್ನು ಬಳಸುವಂತೆ ಸೂಚಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಸಂಚಾರ ದಟ್ಟವಾಗಿದೆ. ಔಟರ್ ರಿಂಗ್ ರಸ್ತೆ, ಜಿಟಿಕೆ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ 44ನ್ನು ಬಳಸುವಂತೆ ದೆಹಲಿ ಪೊಲೀಸರು ಪ್ರಯಾಣಿಕರಿಗೆ ಮನವಿ ಮಾಡಿದ್ದಾರೆ.