ಹಿಂದಿನ ಸರ್ಕಾರಗಳು ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟು ಬಜೆಟ್ ತಯಾರಿಸುತ್ತಿದ್ದವು: ಪ್ರಧಾನಿ ಮೋದಿ ಆರೋಪ
ಗೋರಖ್ ಪುರ್: ಹಿಂದಿನ ಯುಪಿಎ ಸರ್ಕಾರದ ವಿರುದ್ಧ ಮತ್ತೊಮ್ಮೆ ಹರಿಹಾಯ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟು ಹಿಂದಿನ ಸರ್ಕಾರ ಕೇಂದ್ರ ಬಜೆಟ್ ನ್ನು ತಯಾರಿಸಿತ್ತು. ಅಲ್ಲದೆ ಕೇವಲ ಘೋಷಣೆಯಾಗಿ ಬಜೆಟ್ ಉಳಿದಿದ್ದವಷ್ಟೆ ಹೊರತು ಘೋಷಣೆಗಳನ್ನು ಈಡೇರಿಸಲು ಸಾಧ್ಯವಾಗಲಿಲ್ಲ, ಇಂದು ದೇಶದ ದಿಕ್ಕು ಬದಲಾಗುತ್ತಿದೆ ಎಂದರು.
ದಶಕಗಳವರೆಗೆ ನಮ್ಮ ದೇಶದಲ್ಲಿ ಕೇಂದ್ರ ಬಜೆಟ್ ಎಂದರೆ ಕೇವಲ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದ್ದವು. ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕೆ ಮಾತ್ರ ಬಜೆಟ್ ಮೀಸಲಾಗಿತ್ತು. ಮನೆಯ ದಿನನಿತ್ಯದ ಖರ್ಚುವೆಚ್ಚಗಳನ್ನು ಇಂದಿನ ಅಗತ್ಯಗಳು ಮತ್ತು ಭವಿಷ್ಯದ ಜವಾಬ್ದಾರಿಗಳನ್ನು ಗಮನದಲ್ಲಿಟ್ಟುಕೊಂಡು ಒಂದು ಯೋಜನೆ ಹಾಕಿಕೊಳ್ಳುತ್ತೇವೆ. ಆದರೆ ಹಿಂದಿನ ಸರ್ಕಾರಗಳು ಈಡೇರಿಸಲಾಗದ ಕೇವಲ ಘೋಷಣೆಗಳಿಗೆ ಮಾತ್ರ ಸೀಮಿತವಾದ ಬಜೆಟ್ ನ್ನು ಮಂಡಿಸುತ್ತಿದ್ದವು. ಇಂದು ದೇಶದ ಜನರು ಅಂತಹ ಆಲೋಚನೆಗಳು ಮತ್ತು ದೃಷ್ಟಿಕೋನಗಳನ್ನು ಬದಲಿಸಿಕೊಳ್ಳುತ್ತಿದ್ದಾರೆ ಎಂದರು.
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಐತಿಹಾಸಿಕ ಘಟನೆಯಾದ ಉತ್ತರ ಪ್ರದೇಶದ ಗೋರಖ್ ಪುರದ ಚೌರಿ ಚೌರ ಘಟನೆಯ ಶತಮಾನೋತ್ಸವ ಸಮಾರಂಭವನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಶತಮಾನೋತ್ಸವ ಆಚರಣೆಯ ಸಂದರ್ಭದ ಅಂಚೆಚೀಟಿಯನ್ನು ಸಹ ಬಿಡುಗಡೆ ಮಾಡಿದರು. 1922ರಲ್ಲಿ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಆರಂಭಗೊಂಡ ಅಸಹಕಾರ ಚಳವಳಿಯಲ್ಲಿ ಪಾಲ್ಗೊಂಡ ಸ್ವಾತಂತ್ರ್ಯ ಹೋರಾಟಗಾರರ ಗುಂಪಿನ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು. ಇದರಲ್ಲಿ ಹಲವರು ಮೃತಪಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಪ್ರತಿಭಟನಾಕಾರರು, ಗೋರಖ್ ಪುರದ ಚೌರಿ ಚೌರಾ ಪೊಲೀಸ್ ಠಾಣೆಯನ್ನು ಮುತ್ತಿಕ್ಕಿ ಬೆಂಕಿಯಿಟ್ಟು ಸುಟ್ಟು ಹಾಕಿದ್ದರು, ಅದರೊಳಗೆ ಸೇರಿದ್ದ ಹಲವು ಪೊಲೀಸರು ಮೃತಪಟ್ಟಿದ್ದರು. ಇದಕ್ಕೆ ಚೌರಿ ಚೌರಾ ಘಟನೆ ಎನ್ನುತ್ತಾರೆ.
ಚೌರಿ ಚೌರಾ ಪೊಲೀಸರ ಹತ್ಯೆಯಾಗಿ ತೀವ್ರ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆಯಲ್ಲಿ ಗಾಂಧೀಜಿ ಚಳವಳಿಯನ್ನು ಹಿಂಪಡೆದರು.ನೂರಾರು ಪ್ರತಿಭಟನಾಕಾರರು ಬಂಧಿಸಲ್ಪಟ್ಟರು, ಅವರಲ್ಲಿ 228 ಮಂದಿಯನ್ನು ಜೈಲಿಗೆ ಕಳುಹಿಸಲಾಯಿತು. ಅವರಲ್ಲಿ 6 ಮಂದಿ ಮೃತಪಟ್ಟರು. 172 ಮಂದಿಗೆ ಗಲ್ಲಿಗೇರಿಸಲು ಆದೇಶಿಸಲಾಯಿತು. ಉಳಿದವರಿಗೆ ಜೀವಾವಧಿ ಶಿಕ್ಷೆಯಾಯಿತು.
ಗಲ್ಲು ಶಿಕ್ಷೆಯನ್ನು ಪುನರ್ ಪರಿಶೀಲಿಸಿದ ಅಲಹಾಬಾದ್ ಹೈಕೋರ್ಟ್ 1923ರ ಏಪ್ರಿಲ್ ನಲ್ಲಿ 19 ಮಂದಿಗೆ ಗಲ್ಲುಶಿಕ್ಷೆ, 110 ಮಂದಿಗೆ ಜೀವಾವಧಿ ಶಿಕ್ಷೆಯನ್ನು ಪೋರ್ಟ್ ಬ್ಲೇರ್ ಜೈಲಿನಲ್ಲಿ ಮತ್ತು ಇತರರಿಗೆ ದೀರ್ಘಾವಧಿ ಜೈಲುಶಿಕ್ಷೆ ವಿಧಿಸಿತು.
ಇಂದಿನ ಕಾರ್ಯಕ್ರಮದಲ್ಲಿ ಘಟನೆಯಲ್ಲಿ ಭಾಗಿಯಾದವರ ಕುಟುಂಬದವರಲ್ಲಿ 99 ಮಂದಿಯನ್ನು ಗೌರವಿಸಲಾಯಿತು. ಚೌರಿ ಚೌರಾ ಘಟನೆಯ ಶತಮಾನೋತ್ಸವ ಸಮಾರಂಭ ಉತ್ತರ ಪ್ರದೇಶದ ಎಲ್ಲಾ 75 ಜಿಲ್ಲೆಗಳಲ್ಲಿ ಪ್ರಭಾತ್ ಫೆರಿಸ್ ಮತ್ತು ಇತರ ಕಾರ್ಯಕ್ರಮಗಳ ಮೂಲಕ 2022ರ ಫೆಬ್ರವರಿ 4ರವರೆಗೆ ಮುಂದುವರಿಯುತ್ತದೆ.