ನಾವು ಹೇಳಿದ್ರೂ ಕೇಳಲಿಲ್ಲ, ಪೋನ್ ನಲ್ಲಿ ಮಾತಾಡ್ತಾ ವೈದ್ಯರು ಲಸಿಕೆ ಬದಲು ಸ್ಯಾನಿಟೈಸರ್ ಹಾಕಲು ಹೇಳಿದರು: ಆಶಾ ಕಾರ್ಯಕರ್ತೆ

ಮುಂಬೈ: ಪೊಲಿಯೋ ಲಸಿಕೆ ಬದಲಿಗೆ ಮಕ್ಕಳಿಗೆ ಹ್ಯಾಂಡ್ ಸ್ಯಾನಿಟೈಸರ್ ಹಾಕಿದ್ದ ಪ್ರಕರಣಕ್ಕೆ ಇದೀಗ ಸ್ಫೋಟಕ ತಿರುವು ದೊರೆತಿದ್ದು, ಪೊಲಿಯೋ ಲಸಿಕೆ ಹಾಕುವ ತಂಡದ ನೇತೃತ್ವ ವಹಿಸಿದ್ದ ವೈದ್ಯನೇ ಮಕ್ಕಳಿಗೆ ಸ್ಯಾನಿಟೈಸರ್ ಹಾಕುವಂತೆ ಹೇಳಿದ್ದಎಂದು ತಂಡದಲ್ಲಿದ್ದ ಆಶಾ ಕಾರ್ಯಕರ್ತೆಯರು ಮಾಹಿತಿ ಬಹಿರಂಗ ಗೊಳಿಸಿದ್ದಾರೆ.

ಕೋಪರಿ ಕಪ್ಸಿ ಬುಡಕಟ್ಟು ಗ್ರಾಮವಾಗಿದ್ದು, ಏನೂ ಅರಿಯದ ಗ್ರಾಮಸ್ಥರಿಗೆ ಮೋಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಡಾ ಗವಾಡೆ ಸೇರಿದಂತೆ ನಾಲ್ವರನ್ನು ಅಮಾನತು ಮಾಡಲಾಗಿದೆ.

ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಕೋಪರಿ ಕಪ್ಸಿ ಗ್ರಾಮದಲ್ಲಿ 12 ಮಕ್ಕಳಿಗೆ ಲಸಿಕೆ ಹಾಕುವಾಗ ಆಶಾ (ಮಾನ್ಯತೆ ಪಡೆದ ಸಾಮಾಜಿಕ ಆರೋಗ್ಯ ಕಾರ್ಯಕರ್ತೆ) ಕಾರ್ಯಕರ್ತೆಯರು, ಪೋಲಿಯೊ ಲಸಿಕೆ ಬದಲು ನೀಲಿ ಬಣ್ಣದ ಹ್ಯಾಂಡ್ ಸ್ಯಾನಿಟೈಜರ್ ಹಾಕಿದ ಸುದ್ದಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಇದೀಗ ಘಟನೆ ಸಂಬಂಧ ಮಾಹಿತಿ ನೀಡಿರುವ ಆಶಾ ಕಾರ್ಯಕರ್ತೆಯರು ಅಂದು ತಂಡದ ನೇತೃತ್ವ ವಹಿಸಿದ್ದ ವೈದ್ಯ ಡಾ.ಅಮೋಲ್ ಗವಾಡೆ ಅವರ ಸೂಚನೆ ಮೇರೆಗೆ ಲಸಿಕೆ ಬದಲಿಗೆ ಸ್ಯಾನಿಟೈಸರ್ ನೀಡಲಾಗಿತ್ತು ಎಂದು ಹೇಳಿದ್ದಾರೆ.

ಈ ಕುರಿತಂತೆ ಮಾಹಿತಿ ನೀಡಿದ ಲಸಿಕೆ ನೀಡಿಕೆ ವೇಳೆ ತಂಡದಲ್ಲಿದ್ದ ಆಶಾ ಕಾರ್ಯಕರ್ತೆಯೊಬ್ಬರು.. ‘ನಾವು ವೈದ್ಯರಿಗೆ ಲಸಿಕೆಯ ಬಣ್ಣ ಗುಲಾಬಿ ಬಣ್ಣದ್ದು, ನೀಲಿ ಬಣ್ಣದ್ದಲ್ಲ ಎಂದು ಹೇಳಿದೆವು. ಆದರೆ ಲಸಿಕೆ ಬಣ್ಣವನ್ನು ಈಗ ಬದಲಾಯಿಸಲಾಗಿದೆ ಎಂದು ವೈದ್ಯರು ನಮಗೆ ಹೇಳಿದರು… ನಾವು ಅವರೊಂದಿಗೆ ಈ ಬಗ್ಗೆ ಎಷ್ಟೇ ಹೇಳಿದರೂ ಅವರು ಫೋನ್ ನಲ್ಲಿ ಮಾತನಾಡುತ್ತಾ ನಮ್ಮ ಮಾತು ಕೇಳಲು ಸಿದ್ಧರಿರಲಿಲ್ಲ. ಪೊಲಿಯೋ ಲಸಿಕೆ ಬದಲಿಗೆ ನೀಲಿ ಬಣ್ಣದ ಸ್ಯಾನಿಟೈಸರ್ ನೀಡಿಸಿದರು. ಇದೀಗ ನಮ್ಮನ್ನು ಬಲಿಪಶುಗಳನ್ನಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ.

ಪ್ರಕರಣದಲ್ಲಿ ನಮ್ಮ ತಪ್ಪು ಏನು ಎಂದರೆ ನಾವು ವೈದ್ಯರ ಮಾತುಕೇಳಿ ನೀಲಿ ಬಣ್ಣದ ಸ್ಯಾನಿಟೈಸರ್ ನೀಡಿದ್ದು. ಅವರ ಸೂಚನೆ ಪಾಲಿಸದಿದ್ದರೆ ಅವರು ನಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದರು. ಅಲ್ಲದೆ ನಮಗೆ 15 ದಿನಕ್ಕೆ ಬದಲಾಗಿ ಕೇವಲ 1 ದಿನದ ತರಬೇತಿ ಮಾತ್ರ ನೀಡಿದ್ದರು. ಇದಕ್ಕೆ ಹೆದರಿ ನಾವು ನೀಲಿ ಬಣ್ಣದ ಸ್ಯಾನಿಟೈಸರ್ ಅನ್ನು ಮಕ್ಕಳಿಗೆ ಹಾಕಿದೆವು ಎಂದು ಹೇಳಿದ್ಜಾರೆ.

ಇನ್ನು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ ಅವರು, ಈ ಕುರಿತಂತೆ ಸ್ಪಷ್ಟನೆ ನೀಡಿದ್ದಾರೆ. ಅಮಾನತುಗೊಂಡ ಸಿಬ್ಬಂದಿ ಮೇಲಿನ ಆರೋಪ ಸಾಬೀತಾದರೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *