ದಿಲ್ಲಿ ಹಿಂಸಾಚಾರದಲ್ಲಿ ಭಾಗಿಯಾದ ಶಂಕಿತ ದಂಗೆಕೋರರ ಚಿತ್ರಗಳನ್ನು ರಿಲೀಸ್‌ ಮಾಡಿದ ಪೊಲೀಸರು!

ಹೊಸದಿಲ್ಲಿ: ಜನವರಿ 26ರ ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ಪೆರೇಡ್ ಸಂದರ್ಭದಲ್ಲಿ ರಾಷ್ಟ್ರ ರಾಜಧಾನಿಯ ಕೆಂಪು ಕೋಟೆಯಲ್ಲಿ ನಡೆದ ಹಿಂಸಾಚಾರದಲ್ಲಿ ಭಾಗಿಯಾಗಿರುವ ‘ದಂಗೆಕೋರರ’ ಚಿತ್ರಗಳನ್ನು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದಾರೆ. ಗಣರಾಜ್ಯೋತ್ಸವದ ಹಿಂಸಾಚಾರದ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರು ಮುಖದ ವಿಶ್ಲೇಷಣೆ ತಂತ್ರಜ್ಞಾನ ಬಳಸಿಕೊಂಡು ಶಂಕಿತರನ್ನು ಗುರುತಿಸಿದ್ದಾರೆ.

ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಒದಗಿಸಿದ ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಸುಮಾರು 42 ಜನರ ಚಹರೆಯನ್ನು ಪತ್ತೆ ಹಚ್ಚಿದ್ದು, ವಾಟ್ಸಾಪ್ ವಿಡಿಯೋಗಳಿಂದ 20 ಶಂಕಿತರನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ಗಲಭೆಕೋರರನ್ನು ಬಂಧಿಸುವ ಹಿನ್ನೆಲೆ ಈಗಾಗಲೇ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

ಈವರೆಗೆ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ದಿಲ್ಲಿ ಪೊಲೀಸರು ತಿಳಿಸಿದ್ದಾರೆ. ಕೆಲವು ಶಂಕಿತರು ದೆಹಲಿಯಿಂದ ಪರಾರಿಯಾಗಿದ್ದಾರೆ ಮತ್ತು ಇತರರು ತಲೆಮರೆಸಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನು ಆರೋಪಿಗಳ ಚಿತ್ರಗಳನ್ನು ಬಿಡುಗಡೆಗೊಳಿಸಿರುವ ಪೊಲೀಸರು, ಎಲ್ಲ ರೀತಿಯಲ್ಲಿ ಇವರನ್ನು ಲಾಕ್‌ ಮಾಡಲು ಪ್ಲಾನ್‌ ರೂಪಿಸಿದ್ದಾರೆ.

ಗಲಭೆ ನಂತರ ತಮ್ಮ ತಮ್ಮ ಸ್ಥಳಗಳಿಗೆ ತೆರಳಿದರು!
ದಿಲ್ಲಿ ಪೊಲೀಸರ ಮಾಹಿತಿಯ ಪ್ರಕಾರ, ಕೆಲವು ಶಂಕಿತರು ಗಲಭೆ ಬಳಿಕ ಮತ್ತೆ ತಮ್ಮ ಸ್ಥಳಗಳಿಗೆ ಧಾವಿಸಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ಬಂಧಿತರಾಗಿರುವ ಇಬ್ಬರು ಆರೋಪಿಗಳಲ್ಲಿ ಒಬ್ಬನನ್ನು ಧರ್ಮೇಂದ್ರ ಸಿಂಗ್ ಹರ್ಮನ್ ಎಂದು ಗುರುತಿಸಲಾಗಿದೆ. ಇವರಿಬ್ಬರು ಜನವರಿ 26 ರಂದು ಹಿಂಸಾಚಾರ ನಡೆದಾಗ ಕೆಂಪು ಕೋಟೆಯಲ್ಲಿ ಗಲಭೆ ನಡೆಸುತ್ತಿರುವ ವಿಡಿಯೋ ತುಣುಕಿನಲ್ಲಿ ಕಾಣಿಸಿಕೊಂಡಿದ್ದಾರೆ.

ಅಲ್ಲದೆ ಬಂಧಿತನಾಗಿರುವ ಹರ್ಮನ್ ಎಂಬಾತ ಕೆಂಪು ಕೋಟೆಯಲ್ಲಿ ಸಿಖ್‌ ಧ್ವಜ ಹಾರಿಸಿರುವ ಬಗ್ಗೆ ಪೊಲೀಸರು ಖಚಿತಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಕೇಂದ್ರದ ಕೃಷಿ ಕಾನೂನು ವಿರೋಧಿಸಿ ಜನವರಿ 26ರ ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ಪೆರೇಡ್ ನಡೆಸಿದ್ದರು ಈ ವೇಳೆ ಭಾರೀ ಗಲಭೆ ಸೃಷ್ಟಿಯಾಗಿತ್ತು. ರೈತರು, ಪೊಲೀಸರ ನಡುವೆ ಘರ್ಷಣೆ ಉಂಟಾಗಿತ್ತು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *