ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ: 72 ಎಫ್‌ಐಆರ್‌, 426 ಆರೋಪಿಗಳ ಬಂಧನ

ಬೆಂಗಳೂರು: ನಗರದ ಡಿ.ಜೆ.ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 72 ಎಫ್‌ಐಆರ್‌ ದಾಖಲಿಸಲಾಗಿದ್ದು, 426 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ವಿಧಾನ ಪರಿಷತ್ತಿಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‌ನ ಸಿ.ಎಂ. ಇಬ್ರಾಹಿಂ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ”ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಲಾಗಿದೆ. ಎರಡು ಪ್ರಕರಣಗಳನ್ನು ಮಾತ್ರ ಎನ್‌ಐಎಗೆ ವಹಿಸಲಾಗಿದೆ. ಎಲ್ಲಾ 72 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲು ಕ್ರಮ ವಹಿಸಲಾಗುತ್ತಿದೆ. ಹೈಕೋರ್ಟ್‌ನ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯುತ್ತಿದೆ. ಈ ತಿಂಗಳಾಂತ್ಯದೊಳಗೆ ಇನ್ನೂ ಮೂರ್ನಾಲ್ಕು ಎಫ್‌ಐಆರ್‌ ದಾಖಲಿಸಲಾಗುವುದು” ಎಂದರು.

ಸಿಎಂ ಇಬ್ರಾಹಿಂ ಮಾತನಾಡಿ, ”ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಶೇ.40ರಿಂದ 50ರಷ್ಟು ನಿರಪರಾಧಿಗಳನ್ನು ಬಂಧಿಸಲಾಗಿದೆ. ಈ ಬಗ್ಗೆ ರಾತ್ರಿ ಪಾಳಿಯಲ್ಲಿ ಸೇವೆ ಸಲ್ಲಿಸಿದ ಬಗ್ಗೆ ಹಾಜರಾತಿ ಪತ್ರಗಳನ್ನು ನೀಡಿದ್ದಾರೆ. ಹೀಗಾಗಿ, ಅಮಾಯಕರನ್ನು ಬಿಡುಗಡೆ ಮಾಡಲು ಸರಕಾರ ಕ್ರಮ ವಹಿಸಬೇಕು” ಎಂದು ಆಗ್ರಹಿಸಿದರು.

ಅಮಾಯಕರನ್ನು ಬಂಧಿಸಿಲ್ಲ:
”ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಿಲ್ಲ. ಆದರೆ, ಗಲಭೆಯಲ್ಲಿ ಪಾತ್ರ ವಹಿಸದ 94 ಮಂದಿಯನ್ನು ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಬಿಟ್ಟು ಕಳಿಸಿದ್ದಾರೆ. ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಇದೆ. ಪೊಲೀಸರು ಪ್ರಾಮಾಣಿಕವಾಗಿ ತನಿಖೆ ನಡೆಸಿ ಚಾರ್ಜ್ಶೀಟ್‌ ಸಲ್ಲಿಸಿದ್ದಾರೆ. ಕೋರ್ಟ್‌ ತೀರ್ಪು ಆಧರಿಸಿ ಮುಂದಿನ ಕ್ರಮ ಜರುಗಿಸಲಾಗುವುದು” ಎಂದು ಬೊಮ್ಮಾಯಿ ತಿಳಿಸಿದರು.

”ಗಲಭೆಯಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ನಷ್ಟವಾಗಿರುವ ಕುರಿತು ಅಂದಾಜು ಮಾಡುವ ಸಲುವಾಗಿ ಕ್ಲೇಮ್‌ ಕಮಿಷನರ್‌ ನೇಮಿಸಲಾಗಿದೆ. ಅವರಿಂದ ವರದಿ ಸ್ವೀಕೃತವಾದ ನಂತರ ಅಗತ್ಯ ಕ್ರಮ ವಹಿಸಲಾಗುವುದು” ಎಂದರು. ಈ ನಡುವೆ, ”ಡಿ.ಜೆ.ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆಗೆ ಡ್ರಗ್‌ ಪೆಡ್ಲರ್‌ಗಳೇ ಕಾರಣ” ಎಂದು ಇಬ್ರಾಹಿಂ ಆರೋಪಿಸಿದರು.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *