‘ಚಕ್ಕಾ ಜಾಮ್’ ವೇಳೆ ಶಾಂತಿ ಕಾಪಾಡುವುದು ಸರ್ಕಾರದ ಕೆಲಸ: ರೈತ ಮುಖಂಡ ಜಗ್ತಾರ್ ಸಿಂಗ್ ಬಜ್ವಾ
ನವದೆಹಲಿ: ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಹೆದ್ದಾರಿ ತಡೆದು(ಚಕ್ಕಾ ಜಾಮ್) ನಡೆಸುವ ಪ್ರತಿಭಟನೆ ಚಕ್ಕಾ ಜಾಮ್ ಶಾಂತಿಯುತವಾಗಿ ಸಾಗಲಿದ್ದು, ಯಾವುದೇ ಸಮಾಜ ವಿರೋಧಿ ಶಕ್ತಿಗಳು ಹಿಂಸಾಚಾರ ನಡೆಸದಂತೆ ನೋಡಿಕೊಳ್ಳುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಕಿಸಾನ್ ಅಂದೋಲನ್ ಸಮಿತಿಯ(ಕೆಎಸಿ) ನಾಯಕ ಜಗ್ತಾರ್ ಸಿಂಗ್ ಬಜ್ವಾ ಹೇಳಿದ್ದಾರೆ.
ಇದುವರೆಗಿನ ನಮ್ಮ ಪ್ರತಿಭಟನೆ ಶಾಂತಿಯುತವಾಗಿಯೇ ಸಾಗಿತ್ತು. ಇಡೀ ರೈತ ಸಮುದಾಯ ಶಾಂತಿಯುತವಾಗಿ ಚಕ್ಕಾ ಜಾಮ್ ನಡೆಸಲು ಬಯಸುತ್ತದೆ. ಸರ್ಕಾರ ತನ್ನ ಸಂಸ್ಥೆಗಳು, ಭದ್ರತಾ ಪಡೆಗಳು, ಪೊಲೀಸರ ಮೂಲಕ ನಮಗೆ ಭದ್ರತೆ ಒದಗಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ, ಪಿತೂರಿಯಿಂದ ಹಿಂಸಾಚಾರ ನಡೆಯದಂತೆ ನೋಡಿಕೊಳ್ಳಬೇಕು, ಸರ್ಕಾರದ ಜವಾಬ್ದಾರಿ ಕೂಡ ಎಂದು ಹೇಳಿದರು.
ನಿನ್ನೆ ಟಿಕಾಯತ್ ಅವರು ಘೋಷಿಸಿರುವಂತೆ ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಹೊರತುಪಡಿಸಿ ದೇಶದ ಬೇರೆಲ್ಲಾ ಕಡೆಗಳಲ್ಲಿ ಚಕ್ಕಾ ಜಾಮ್ ನಡೆಯಲಿದೆ. ಈ ಎರಡು ರಾಜ್ಯಗಳಲ್ಲಿ ಅಧಿಕಾರಿಗಳ ಮುಂದೆ ಒಡಂಬಡಿಕೆ ಸಲ್ಲಿಸಿದ ನಂತರ ಕೃಷಿ ಕಾಯ್ದೆ ವಿರುದ್ಧ ನಮ್ಮ ಪ್ರತಿಭಟನೆಯನ್ನು ದಾಖಲು ಮಾಡಿಕೊಳ್ಳುತ್ತೇವೆ ಎಂದರು.
ತಮ್ಮ ತಮ್ಮ ಭಾಗಗಳಲ್ಲಿ ಚಕ್ಕಾ ಜಾಮ್ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳಲು ಪ್ರತಿಭಟನಾ ಶಿಬಿರ ಸ್ಥಳದಿಂದ ಪ್ರತಿಭಟನಾ ನಿರತರು ತಮ್ಮ ಗ್ರಾಮಗಳಿಗೆ ಹೋಗಿದ್ದಾರೆ ಎಂದು ಜಗ್ತರ್ ಸಿಂಗ್ ಬಜ್ವ ತಿಳಿಸಿದ್ದಾರೆ.
ಇಂದಿನ ಹೆದ್ದಾರಿ ತಡೆಗೆ ಭದ್ರತೆಯಾಗಿ ಕಳೆದ ಗಣರಾಜ್ಯೋತ್ಸವ ದಿನದಂದು ನಡೆದ ಹಿಂಸಾಚಾರ ಘಟನೆ ಮರುಕಳಿಸದೇ ಇರಲು ದೆಹಲಿ-ಎನ್ ಸಿಆರ್ ಪ್ರದೇಶಗಳಲ್ಲಿ ಸುಮಾರು 50 ಸಾವಿರ ಪೊಲೀಸ್ ಸಿಬ್ಬಂದಿಯನ್ನು, ಅರೆಸೇನಾಪಡೆ ಮತ್ತು ಮೀಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸುಮಾರು 12 ಮೆಟ್ರೊ ನಿಲ್ದಾಣಗಳ ಮೇಲೆ ನಿಗಾ ಇರಿಸಲಾಗಿದೆ. ದೆಹಲಿಯ ಕೆಂಪು ಕೋಟೆ ಬಳಿ ತೀವ್ರ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ.
ಇಂದು ಮಧ್ಯಾಹ್ನ 12 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ದೇಶಾದ್ಯಂತ ರೈತರಿಂದ ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಯನ್ನು ವಿರೋಧಿಸಿ ಹೆದ್ದಾರಿ ತಡೆ ನಡೆಸಲಾಗುತ್ತದೆ. ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ, 2020, ರೈತ ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯ್ದೆ 2020 ಮತ್ತು ಅಗತ್ಯ ಸರಕುಗಳ (ತಿದ್ದುಪಡಿ) ಕಾಯ್ದೆ 2020 ನ್ನು ವಿರೋಧಿಸಿ ಕಳೆದ ನವೆಂಬರ್ 26ರಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.