ಟ್ರೀ ಪಾರ್ಕ್ ವಿರೋಧಿಸಿ ಆನ್‌ಲೈನ್ ಅಭಿಯಾನ; ತುರಹಳ್ಳಿ ಅರಣ್ಯ ಉಳಿಸಲು ಪರಿಸರವಾದಿಗಳ ಹೋರಾಟ!
ಹೈಲೈಟ್ಸ್:
- ತುರಹಳ್ಳಿ ಟ್ರೀ ಪಾರ್ಕ್ ವಿರೋಧಿಸಿ ಆನ್‌ಲೈನ್ ಅಭಿಯಾನ
- ಸೇವ್ ತುರಹಳ್ಳಿ ಫಾರೆಸ್ಟ್’ ಎಂಬ ಹೆಸರಲ್ಲಿ’ಆನ್‌ಲೈನ್ ಪಿಟಿಷನ್’
- ರಾಜ್ಯ ಸರಕಾರದ ಕ್ರಮಕ್ಕೆ ಪರಿಸರವಾದಿಗಳು ಮತ್ತು ಸ್ಥಳೀಯರಿಂದ ವಿರೋಧ
- ಒಂದೇ ದಿವಸ 7 ಸಾವಿರ ಸಹಿ ದಾಖಲು
- ಮಿಸ್ಡ್ ಕಾಲ್ ಅಭಿಯಾನಕ್ಕೂ ಚಾಲನೆ
ಬೆಂಗಳೂರು: ನಗರದ ಹೊರವಲಯದಲ್ಲಿರುವ ‘ತುರಹಳ್ಳಿ ಕಿರು ಅರಣ್ಯ’ ಪ್ರದೇಶದಲ್ಲಿ’ಟ್ರೀ ಪಾರ್ಕ್‘ ನಿರ್ಮಿಸಲು ಮುಂದಾಗಿರುವ ರಾಜ್ಯ ಸರಕಾರದ ಕ್ರಮಕ್ಕೆ ವಿರೋಧಿಸಿ ಪರಿಸರವಾದಿಗಳು ಮತ್ತು ಸ್ಥಳೀಯರು ಶುಕ್ರವಾರದಿಂದ ‘ಸೇವ್ ತುರಹಳ್ಳಿ ಫಾರೆಸ್ಟ್’ ಎಂಬ ಹೆಸರಲ್ಲಿ’ಆನ್‌ಲೈನ್ ಪಿಟಿಷನ್’ ಅಭಿಯಾನ ಆರಂಭಿಸಿದ್ದಾರೆ. ಆನ್‌ಲೈನ್ ಪಿಟಿಷನ್‌ಗೆ ಒಂದೇ ದಿವಸ ಸುಮಾರು 7 ಸಾವಿರಕ್ಕೂ ಹೆಚ್ಚು ಮಂದಿ ಸಹಿ ಮಾಡಿದ್ದಾರೆ. ಇದರ ಜತೆಗೆ, ‘ಮಿಸ್ಡ್ ಕಾಲ್ ಅಭಿಯಾನ’ವನ್ನೂ ಶುರು ಮಾಡಲಾಗಿದೆ.
ಫೆ.20ರವರೆಗೆ ಈ ಆನ್‌ಲೈನ್ ಪಿಟಿಷನ್‌ಗೆ ಸಹಿ ಹಾಕಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ. ನಂತರ ಈ ವರದಿಯನ್ನು ಸರಕಾರಕ್ಕೆ ಸಲ್ಲಿಸಲು ಉದ್ದೇಶಿಸಲಾಗಿದೆ. ಈ ಸಂಬಂಧ ‘ವಿಕ’ದೊಂದಿಗೆ ಮಾತನಾಡಿದ ಚೇಂಜ್ ಮೇಕರ್ಸ್ ಕನಕಪುರ ರೋಡ್ ಸಂಘಟನೆ ಸದಸ್ಯ ಅಲೀಂ, ”ತುರಹಳ್ಳಿ ಕಿರು ಅರಣ್ಯದಲ್ಲಿ ಯಾವುದೇ ಕಾರಣಕ್ಕೂ ಟ್ರೀ ಪಾರ್ಕ್ ಬೇಡ. ಅರಣ್ಯ ಪ್ರದೇಶವಾಗಿ ಉಳಿಸಿದರೆ ಸಾಕು. ಆನ್‌ಲೈನ್ ಪಿಟಿಷನ್ ಜತೆಗೆ,ಮಿಸ್ಡ್ ಕಾಲ್ ಅಭಿಯಾನವನ್ನೂ ಆರಂಭಿಸಲಾಗಿದೆ. ಪ್ರತಿಭಟನೆ ಸಹ ಮುಂದುವರಿಸುತ್ತೇವೆ. ಸರಕಾರ ಕೂಡಲೇ ಟ್ರೀ ಪಾರ್ಕ್ ಯೋಜನೆಯಿಂದ ಹಿಂದೆ ಸರಿಯಬೇಕು,” ಎಂದು ಒತ್ತಾಯಿಸಿದರು.
ಜೀವ ವೈವಿಧ್ಯತೆಗೆ ಧಕ್ಕೆ ಆತಂಕ
ಸುಮಾರು 600 ಎಕರೆ ಪ್ರದೇಶದಲ್ಲಿರುವ ಈ ಕಿರು ಅರಣ್ಯ ಪ್ರದೇಶದ ಸುಮಾರು 400 ಎಕರೆಯಲ್ಲಿ’ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್’ ನಿರ್ಮಾಣಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಟ್ರೀಪಾರ್ಕ್ ನಿರ್ಮಿಸಿದಲ್ಲಿ ಅರಣ್ಯದಲ್ಲಿರುವ ನಾನಾ ಪ್ರಾಣಿಗಳಿಗೆ, ಸಸ್ಯಗಳಿಗೆ ಕಂಟಕವಾಗಲಿದೆ. ಜೀವ ವೈವಿಧ್ಯತೆಗೆ ಧಕ್ಕೆಯಾಗಲಿದೆ ಎಂದು ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ರಾಜ್ಯ ಸರಕಾರ ಯೋಜನೆ ಬಗ್ಗೆ ಸಮರ್ಪಕ ಮಾಹಿತಿ ನೀಡಿಲ್ಲ. ಸಾರ್ವಜನಿಕರ ವಾಯುವಿಹಾರಕ್ಕೆ ವಾಕಿಂಗ್ ಪಾಥ್, ರಸ್ತೆ, ವಾಹನಗಳ ನಿಲ್ದಾಣ, ಶೌಚಾಲಯ, ವಿಶ್ರಾಂತಿ ತಾಣ, ವಾಚ್ ಟವರ್, ಕ್ಯಾಂಟೀನ್ ಸೇರಿದಂತೆ ಇತರೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಮನರಂಜನೆಗಾಗಿ ಆ್ಯಂಪಿ ಥಿಯೇಟರ್ ಹಾಗೂ ಮಾಹಿತಿ ಕೇಂದ್ರ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.