ಕಾರ್ಯಗತಗೊಳ್ಳದ ಮಳೆನೀರಿನ ಕೊಯ್ಲು: ಸರ್ಕಾರದ ನಿರಾಸಕ್ತಿಗೆ ಅಂತರ್ಜಲವೂ ಬರಿದು!

ಹೈಲೈಟ್ಸ್‌:

  • ಫಸಲಾಗದ ಮಳೆ ನೀರು ಕೊಯ್ಲು
  • ಸರ್ಕಾರದ ನಿರಾಸಕ್ತಿಗೆ ಅಂತರ್ಜಲವೂ ಬರಿದು
  • ಸಚಿವರ ಮನೆಯಲ್ಲೂ ಇಲ್ಲ ಅಳವಡಿಕೆ
  • ಮಳೆ ನೀರು ಕೊಯ್ಲು ಯೋಜನೆ ನನೆಗುದಿಗೆ

ನಾಗರಾಜು ಅಶ್ವತ್ಥ್, ಬೆಂಗಳೂರು ಗ್ರಾಮಾಂತರ
ಬೆಂಗಳೂರು ಗ್ರಾಮಾಂತರ: ಹರಿದು ಹೋದ ನೀರನು ಹೊನ್ನು ಕೊಟ್ಟರೂ ತರಲಾಗದು. ಅತ್ಯಮೌಲ್ಯ ಮಳೆ ನೀರನ್ನು ಸಂರಕ್ಷಿಸೋ ದಿನವಿದು. ಹೌದು, ಹರಿದು ಹೋಗುವ ನೀರನ್ನು ತಡೆಗಟ್ಟಿ ಭೂಮಿಯಲ್ಲಿ ಇಂಗುವಂತೆ ಮಾಡುವುದು. ಆ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವುದು. ಕೃಷಿ, ಬೆಳೆ, ಸಸ್ಯ ಸಂರಕ್ಷಣೆ, ಜನ, ಜಾನುವಾರು ಗೃಹಬಳಕೆ ಇತ್ಯಾದಿ ನಾನಾ ಅವಶ್ಯಕತೆಗಳಿಗೆ ಸದಾ ಉಪಯೋಗಿಸಲು ಅನುಕೂಲವಾಗುವಂತೆ ಸಾಧ್ಯವಾದಷ್ಟು ಪ್ರಮಾಣದಲ್ಲಿ ಕೃಷಿ ಮತ್ತು ಕೃಷಿಯೇತರ ಪ್ರದೇಶದಲ್ಲಿ ಅಷ್ಟೇ ಅಲ್ಲದೇ ಕಟ್ಟಡಗಳಲ್ಲಿ ಸಂಗ್ರಹಿಸುವ ಮಳೆ ನೀರು ಕೊಯ್ಲು ಯೋಜನೆ ನನೆಗುದಿಗೆ ಬಿದ್ದಿದೆ.

ರಾಜ್ಯದಲ್ಲಿ ಮಳೆನೀರಿನ ಕೊಯ್ಲು ಪದ್ಧತಿ ಅಳವಡಿಕೆ ವರ್ಷಗಳಿಂದ ಅನುಷ್ಠಾನಕ್ಕೆ ಬಾರದೆ ಕಾಗದಕ್ಕೆ ಸೀಮಿತವಾಗಿದೆ. 2016ರಲ್ಲಿ ಕೊಯ್ಲು ಅಳವಡಿಕೆಗೆ ಅಧಿಸೂಚನೆ ಪ್ರಕಟಗೊಂಡು, ನೀರಿನ ಸಂಗ್ರಹಕ್ಕೊಂದು ನಿಯಮ ಪ್ರಕಟಗೊಂಡಿತು. ಆರಂಭ ಶೂರತ್ವ ಎಂಬಂತೆ ಕೆಲವೆಡೆ ಕೊಯ್ಲು ಅಳವಡಿಕೆಗೆ ಮುಂದಾದರು ಪೂರ್ಣ ಪ್ರಮಾಣದಲ್ಲಿ ರಾಜ್ಯದಲ್ಲಿ ಪದ್ಧತಿ ಅನುಷ್ಠಾನವಾಗಿಲ್ಲ. ರಾಜ್ಯದಲ್ಲಿ ಬಹುತೇಕ ಅಂತರ್ಜಲ ಅವಲಂಬಿತವಾಗಿದ್ದು, ಈಗಾಗಲೇ ನಾನಾ ಸಮಸ್ಯೆಗಳಿಗೆ ಇದು ಕಾರಣವಾಗಿದೆ.

ನಾಮ್‌ ಕೇ ವಾಸ್ತೇ ನಿಯಮ
2009 ರ ಅ.15ರಂದು ಸರಕಾರ ಆದೇಶ ಹೊರಡಿಸಿ, ಎಲ್ಲ ಸರಕಾರಿ ಕಟ್ಟಡಗಳು 2011ರ ಜೂನ್‌ ಒಳಗೆ ಹಾಗೂ 2400 ಚದರಡಿಗೂ ಹೆಚ್ಚಿನ ವಿಸ್ತೀರ್ಣವುಳ್ಳ ಖಾಸಗಿ ಕಟ್ಟಡಗಳು ಡಿ. 31, 2011ರೊಳಗೆ ಮಳೆ ನೀರಿನ ಕೊಯ್ಲು ಪದ್ಧತಿ ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು ಎಂದು ಸೂಚಿಸಿತ್ತು. ಈ ಗಡುವಿನಲ್ಲಿ ಪದ್ಧತಿ ಅಳವಡಿಕೆ ಕಾರ್ಯ ಪೂರ್ಣಗೊಂಡಿರಲಿಲ್ಲ. ಆದ್ದರಿಂದ 2012ರ ಮಾ.31ರವರೆಗೆ ಗಡುವು ವಿಸ್ತರಣೆ ಮಾಡಲಾಯಿತು. ಈ ಗಡುವು ಮೀರಿದ ಕಟ್ಟಡಗಳಿಗೆ ಕುಡಿಯುವ ನೀರು ಹಾಗೂ ಒಳಚರಂಡಿ ಸಂಪರ್ಕ ಕಡಿತಗೊಳಿಸುವ ಮೌಖಿಕ ಎಚ್ಚರಿಕೆ ನೀಡಿತ್ತು. ಆದರೆ, ಅದು ಹೇಳಿಕೆಗೆ ಮಾತ್ರ ಸೀಮಿತವಾಯ್ತು. ಪುನಃ 2016ರ ಅಧಿಸೂಚನೆ ಪ್ರಕಾರ 30*40ಚದರ ಅಡಿ ಅಥವ ಇದಕ್ಕಿಂತ ಹೆಚ್ಚಿನ ಪ್ರದೇಶದ ನಿರ್ಮಾಣವಾಗುವ ಹೊಸಕಟ್ಟಡಗಳಲ್ಲಿ ಮಳೆನೀರಿನ ಕೊಯ್ಲು ಪದ್ದತಿ ಕಡ್ಡಾಯ. ಜತೆಗೆ, ಈಗಾಗಲೇ ನಿರ್ಮಾಣವಾಗಿರುವ 40*60ಚದರ ಅಡಿ ಮನೆಗಳಲ್ಲುಪದ್ಧತಿ ಅಳವಡಿಸಬೇಕು. ಈ ನಿಯಮ ಜಾರಿಯಾಗಿ 4ವರ್ಷ ಕಳೆದುಹೋಗಿದ್ದರು ಶೇ.90ರಷ್ಟು ಸರಕಾರಿ ಕಚೇರಿಗಳಲ್ಲೇ ನಿಯಮ ಅನುಷ್ಠಾನಗೊಳ್ಳದಿರುವುದು ಸರಕಾರದ ನಿರಾಸಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.

ಅಂತರ್ಜಲ ಸೇಫ್‌ ಅಲ್ಲ
ರಾಜ್ಯದಲ್ಲಿ ಕೊಳವೆಬಾವಿಗಳ ಮೂಲಕ ಪಡೆಯಲಾಗುತ್ತಿರುವ ನೀರಿನ ಗುಣಮಟ್ಟ ಕುಡಿಯಲು ಯೋಗ್ಯವಲ್ಲದಿದ್ದರು ಜನ ವಿಧಿಯಿಲ್ಲದೆ ಬಳಸುತ್ತಿದ್ದಾರೆ. ಈ ನೀರಿನ ಮೂಲಗಳಲ್ಲಿ2019ರವರೆಗಿನ ಮಾಹಿತಿಯ ಪ್ರಕಾರ ಚಿಕ್ಕಬಳ್ಳಾಪುರದಲ್ಲಿ 776ರಲ್ಲಿ ಫ್ಲೋರ್ಲೆಡ್‌, 52ರಲ್ಲಿ ನೈಟ್ರೇಟ್‌, 6ರಲ್ಲಿ ಕಬ್ಬಿಣಾಂಶ ಪತ್ತೆಯಾಗಿದೆ. ತುಮಕೂರಿನಲ್ಲಿ 1932ರಲ್ಲಿ ಪ್ಲೋರೈಡ್‌, 1198ರಲ್ಲಿ ನೈಟ್ರೇಟ್‌, 2607ರಲ್ಲಿ ಕಬ್ಬಿಣಾಂಶ ಕಂಡುಬಂದಿದೆ. ವಿಜಯಪುರದಲ್ಲಿ 258ರಲ್ಲಿ ಪ್ಲೋರೈಡ್‌, 242ರಲ್ಲಿನೈಟ್ರೇಟ್‌, 199ರಲ್ಲಿಕಬ್ಬಿಣಾಂಶ ಪತ್ತೆಯಾಗಿದೆ. ಮಂಡ್ಯದ ಜಲಮೂಲಗಳಲ್ಲಿ69ರಲ್ಲಿ ಪ್ಲೋರೈಡ್‌, 420ರಲ್ಲಿ ನೈಟ್ರೇಟ್‌, 41ರಲ್ಲಿ ಕಬ್ಬಿಣಾಂಶವಿದ್ದು, ಗದಗದಲ್ಲಿ 335ರಲ್ಲಿ ಪ್ಲೋರೈಡ್‌, 11ರಲ್ಲಿ ನೈಟ್ರೇಟ್‌, 593ರಲ್ಲಿ ಲವಣಾಂಶವಿರುವುದು ತಿಳಿದುಬಂದಿದೆ. ರಾಯಚೂರು, ಬೆಳಗಾವಿ, ಕಲ್ಬುರ್ಗಿ ಸೇರಿದಂತೆ 3 ಜಿಲ್ಲೆಯಲ್ಲಿ 457ರಲ್ಲಿ ಪ್ಲೋರೈಡ್‌, 588ರಲ್ಲಿ ನೈಟ್ರೇಟ್‌ ಅಂಶವಿದ್ದು ಆತಂಕಕ್ಕೆ ಕಾರಣವಾಗಿದೆ.

ರಾಜಧಾನಿಯ ಕಥೆ
ಜಲವಿಜ್ಞಾನಿಗಳ ಅಧ್ಯಯನದ ಪ್ರಕಾರ ಬೆಂಗಳೂರಿನಲ್ಲಿ ವಾರ್ಷಿಕ ಮಳೆ 850ಮಿಮೀ ಮಳೆ ಬೀಳುತ್ತದೆ. ಈ ಪೈಕಿ ಶೇ.70ರಷ್ಟು ನೀರು ಹರಿದು ನಿರುಪಯುಕ್ತವಾಗಿ ಚರಂಡಿ ಸೇರುತ್ತದೆ. ಕೇವಲ ಶೇ.30ರಷ್ಟು ನೀರು ಅಂತರ್ಜಲ ಸೇರುತ್ತದೆ. ರಾಜಧಾನಿಯಲ್ಲಿ ಬೀಳುವ ಹೆಚ್ಚಿನ ನೀರು ಪೋಲಾಗಿ ಚರಂಡಿಯ ರಾಸಾಯನಿಕ ನೀರಿನೊಂದಿಗೆ ಮಿಶ್ರಿತವಾಗುತ್ತಿದೆ. ಪ್ರಸ್ತುತ ಇದೇ ಹಾನಿಕಾರಕ ಅಂಶವುಳ್ಳ ನೀರನ್ನು ಸಂಸ್ಕರಿಸಿ ಬಯಲುಸೀಮೆಯ ಕೆರೆಗಳಿಗೆ ಪೂರೈಸಲಾಗುತ್ತಿದೆ.

ಐಎಎಸ್‌ಗಳು ಮಾದರಿಯಾಗಲಿ
ಅಂತರ್ಜಲ ನೀರಿನ ಅವಲಂಬನೆ ಕಡಿಮೆ ಮಾಡಿ, ಮಳೆನೀರಿನ ಸದ್ಬಳಕೆ ಮಾಡಿಕೊಳ್ಳುವಲ್ಲಿ ಸರಕಾರದ ಮುಖ್ಯಸ್ಥಾನಗಳಲ್ಲಿರುವ ಐಎಎಸ್‌, ಐಪಿಎಸ್‌ ಅಧಿಕಾರಿಗಳು, ಸಚಿವರು ತಮ್ಮ ಮನೆಗಳಲ್ಲಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು. ಉನ್ನತ ಸ್ಥಾನದಲ್ಲಿರುವವರೇ ಮುತುವರ್ಜಿ ವಹಿಸಿ ಯೋಜನೆ ಅಳವಡಿಸಿಕೊಳ್ಳದಿದ್ದರೆ ಸಾಮಾನ್ಯರಿಂದ ಏನನ್ನು ನಿರೀಕ್ಷೆ ಮಾಡಲಾಗದು ಎಂದು ಹಿರಿಯ ಪತ್ರಕರ್ತ, ನೀರಿನ ತಜ್ಞ ನಾಗೇಶ್‌ಹೆಗ್ಡೆ ತಿಳಿಸಿದ್ದಾರೆ.

ಸಚಿವರ ಮನೆಯಲ್ಲೇ ವ್ಯವಸ್ಥೆಯಿಲ್ಲ!
ರಾಜ್ಯದ ನೀರಾವರಿ ಸಚಿವ ರಮೇಶ್‌ ಜಾರಕಿಹೊಳಿಯವರ ಮನೆಯಲ್ಲೇ ಮಳೆನೀರಿನ ಕೊಯ್ಲುಅಳವಡಿಕೆಯಾಗಿಲ್ಲ. ಇದನ್ನು ಸ್ವತಃ ಸಚಿವರೇ ಒಪ್ಪಿಕೊಂಡಿದ್ದಾರೆ. ‘ನಮ್ಮದು ಹಳೆಮನೆಯಾಗಿದ್ದು, ಮಳೆನೀರಿನ ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಸದ್ಯದಲ್ಲೇ ಮಗ ಮನೆ ನಿರ್ಮಿಸುತ್ತಿದ್ದು, ಖಚಿತವಾಗಿ ಮಳೆನೀರಿನ ಕೊಯ್ಲು ವ್ಯವಸ್ಥೆ ಅಳವಡಿಕೆಗೆ ಒತ್ತು ನೀಡಲಾಗುತ್ತದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ತಿಳಿಸಿದ್ದಾರೆ.

ಮಳೆನೀರಿನ ಕೊಯ್ಲು ಪದ್ಧತಿ ಅಳವಡಿಕೆಗೆ ಪ್ರಸಕ್ತ ವರ್ಷದಲ್ಲಿ ನೂತನ ಯೋಜನೆ ಜಾರಿಗೆ ಚಿಂತನೆ ನಡೆಸುತ್ತಿದ್ದು, ಶೀಘ್ರ ಕಾರ್ಯರೂಪಕ್ಕೆ ತರಲಾಗುತ್ತದೆ.
ರಮೇಶ್‌ ಜಾರಕಿಹೊಳಿ, ಜಲಸಂಪನ್ಮೂಲ ಸಚಿವ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *