ಉತ್ತರಾಖಂಡ ಹಿಮ ಪ್ರವಾಹ: ಮೃತರ ಕುಟುಂಬಕ್ಕೆ 6 ಲಕ್ಷ ಪರಿಹಾರ, ಸುರಂಗದಲ್ಲಿ ಸಿಲುಕಿದ್ದ 16 ಮಂದಿ ರಕ್ಷಣೆ!
ಚಮೋಲಿ(ಉತ್ತರಾಖಂಡ): ಚಮೋಲಿ ಜಿಲ್ಲೆಯಲ್ಲಿ ಭಾರೀ ಪ್ರಮಾಣದಲ್ಲಿ ಹಿಮಪರ್ವತ ಕುಸಿದು ಡ್ಯಾಂ ಒಡೆದ ಪರಿಣಾಮ ಉಂಟಾದ ಅನಾಹುತದಲ್ಲಿ 10 ಮಂದಿ ಬಲಿಯಾಗಿದ್ದು ಇದೇ ವೇಳೆ ಸುರಂಗದಲ್ಲಿ ಸಿಲುಕಿದ್ದ 16 ಮಂದಿಯನ್ನು ಐಟಿಬಿಪಿ ರಕ್ಷಿಸಿದೆ.
ಹಿಮ ಪ್ರವಾಹದಲ್ಲಿ ಬರೋಬ್ಬರಿ 150 ಮಂದಿ ನಾಪತ್ತೆಯಾಗಿದ್ದು ಪ್ರಸ್ತುತ ಹತ್ತು ಮೃತದೇಹಗಳು ಸಿಕ್ಕಿರುವುದಾಗಿ ರಕ್ಷಣಾ ತಂಡಗಳು ತಿಳಿಸಿವೆ.
ಉತ್ತರಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಮೃತರ ಕುಟುಂಬಕ್ಕೆ ತಲಾ 4 ಲಕ್ಷ ರುಪಾಯಿ ಘೋಷಿಸಿದ್ದಾರೆ. ಇದರ ಜೊತೆಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2 ಲಕ್ಷ ರೂಪಾಯಿ ಹಾಗೂ ಗಾಯಗೊಂಡಿರುವವರಿಗೆ ತಲಾ 50 ಸಾವಿರ ರುಪಾಯಿ ಪರಿಹಾರ ನೀಡುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ.
ಚಮೋಲಿ ಜಿಲ್ಲೆಯ ತಪೋವನ ಪ್ರದೇಶದಲ್ಲಿರುವ ಸುರಂಗದಲ್ಲಿ ಸಿಲುಕಿದ್ದ 16 ಕಾರ್ಮಿಕರನ್ನು ಇಂಡೋ-ಟಿಬೆಟಿಯನ್ ಪೊಲೀಸರು ರಕ್ಷಿಸಿದ್ದಾರೆ.