ಮೆಡಿಕಲ್‌ ಸೀಟ್‌ಗಾಗಿ ಲಕ್ಷ.. ಲಕ್ಷ.. ಕಳೆದುಕೊಂಡ ಜನ..! ಅರ್ಧ ಕೋಟಿ ಅಡ್ವಾನ್ಸ್‌ ಪಡೆದು ವಂಚಕರು ಪರಾರಿ

ಹೈಲೈಟ್ಸ್‌:

  • ಬೆಂಗಳೂರಿನಲ್ಲಿ ಮೆಡಿಕಲ್‌ ಸೀಟ್‌ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ
  • ರೆಸಿಡೆನ್ಸಿ, ಬ್ರಿಗೇಡ್‌ ರೋಡ್‌ಗಳಲ್ಲಿನ ಕಂಪನಿಗಳಿಂದ ಜನರಿಗೆ ಮೋಸ
  • 16 ಜನರಿಂದ ಅಶೋಕ್‌ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರು: ರಾಜಧಾನಿಯಲ್ಲಿ ಬೃಹತ್‌ ವೈದ್ಯಕೀಯ ಶಿಕ್ಷಣದ ವಂಚನೆ ಪ್ರಕರಣ ಬಯಲಾಗಿದೆ. 20 ವೈದ್ಯಕೀಯ ಸೀಟ್‌ ಆಕಾಂಕ್ಷಿಗಳು ರೆಸಿಡೆನ್ಸಿ ರಸ್ತೆ ಹಾಗೂ ಬ್ರಿಗೇಡ್‌ ರೋಡ್‌ನಲ್ಲಿ ನಕಲಿ ಸಮಾಲೋಚನಾ ಕಂಪನಿಗಳಿಂದ ವಂಚನೆಗೆ ಒಳಗಾಗಿದ್ದು, 50 ಲಕ್ಷಕ್ಕೂ ಹೆಚ್ಚಿನ ಹಣವನ್ನು ಕಳೆದುಕೊಂಡಿದ್ದಾರೆ.

 

ಕಂಪನಿಗಳು ಆಕಾಂಕ್ಷಿಗಳಿಗೆ ವೈದ್ಯಕೀಯ ಸೀಟನ್ನು ನೀಡುವ ಭರವಸೆಯನ್ನು ನೀಡಿವೆ. ಆದರೆ, ಕಚೇರಿಗಳಲ್ಲಿ ಸಂತ್ರಸ್ತರಿಗೆ ಮೊಬೈಲ್ ಫೋನ್‌ಗಳನ್ನು ಹೊರಗೆ ಟ್ರೇನಲ್ಲಿ ಇರಿಸಲು ಕಂಪನಿಗಳು ತಿಳಿಸಿದ್ದು, ಜೊತೆಗೆ ಮುಂಗಡ ಹಣವನ್ನು ಪಾವತಿಸಲು ಕೇಳಲಾಗಿದೆ. ಬಳಿಕ ನಕಲಿ ಪ್ರವೇಶ ಪತ್ರಗಳನ್ನು ನೀಡಿ ಕಳುಹಿಸಿ ವಂಚನೆ ಎಸಗಿವೆ.

ಮೈಸೂರು ನಿವಾಸಿಯಾಗಿರುವ ನವ್ಯಾ ಬಿ.ಸಿ. ಅವರು ಅಶೋಕ್‌ ನಗರ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದಾರೆ. ರೆಸಿಡೆನ್ಸಿ ರಸ್ತೆಯಲ್ಲಿರುವ ವೀವರ್ಕ್‌ ಕಟ್ಟಡದಲ್ಲಿ ನಕಲಿ ಕಂಪನಿಯನ್ನು ನಡೆಸುತ್ತಿದ್ದ ಆನಂದ್‌ ರಾವ್‌, ಮಾದುಶಾ ಮತ್ತು ವಿನೂತಾ ಅವರ ಮೇಲೆ ದೂರು ನೀಡಲಾಗಿದೆ. ತಮ್ಮ ದೂರಿನಲ್ಲಿ ನವ್ಯಾ ಅವರು ನವೆಂಬರ್ 28ರಂದು ಅವರು ವೈದ್ಯಕೀಯ ಸೀಟ್ ಪಡೆಯಲು ಸಹಾಯ ಮಾಡುತ್ತೇವೆ ಎಂಬ ಮೆಸೇಜ್‌ ಒಂದು ಮೊಬೈಲ್‌ಗೆ ಬಂತು. ಅದರಲ್ಲಿ www.neetcounselling.com ಎಂಬ ವೆಬ್‌ಸೈಟ್‌ ಲಿಂಕ್‌ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.

ನನ್ನ ಮಗನಿಗೆ ವೈದ್ಯಕೀಯ ಸೀಟ್‌ ಬೇಕಾಗಿದ್ದರಿಂದ ಅವರನ್ನು ನವೆಂಬರ್‌ 31ರಂದು ಬೆಂಗಳೂರಿನ ಕಚೇರಿಯಲ್ಲಿ ಭೇಟಿಯಾಗಿದ್ದೇವು. ನಮ್ಮನ್ನು ಕಟ್ಟಡದ ಮೂರನೇ ಮಹಡಿಗೆ ಕರೆದೊಯ್ದ ಮಧುಷಾ, ಬಿಜಿಎಸ್ ವೈದ್ಯಕೀಯ ಕಾಲೇಜಿನಲ್ಲಿ ಐದು ವರ್ಷದ ಕೋರ್ಸ್‌ಗೆ ಸೀಟ್‌ ಕಾಯ್ದಿರಿಸಲು 50 ಲಕ್ಷ ರೂ. ಒಪ್ಪಂದ ಮಾಡಿಕೊಂಡು ನಮ್ಮಿಂದ 50,000 ರೂ.ಗಳನ್ನು ಮುಂಗಡವಾಗಿ ಪಡೆದರು ಎಂದು ನವ್ಯಾ ಹೇಳಿದ್ದಾರೆ.

ನಂತರ ಡಿಸೆಂಬರ್ 4ರಂದು ಕಚೇರಿಗೆ ಹೋದಾಗ ನವ್ಯಾ ಅವರಿಗೆ ಬಾಸ್‌ ಆನಂದ್ ರಾವ್ ಪರಿಚಯವಾಗಿದ್ದಾರೆ. ಅವರು 10 ಲಕ್ಷ ರೂ. ಪಾವತಿಸಿದರೆ, ಸೀಟ್‌ನ್ನು ಖಚಿತಪಡಿಸುತ್ತೇವೆ ಎಂದು ಹೇಳಿದ್ದಾರೆ. ಬಳಿಕ ಜನವರಿ 15ಕ್ಕೆ ಬಂದು ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಎಂದಿದ್ದರು. ಅದಾದ ಬಳಿಕ ಜನವರಿ 18ಕ್ಕೆ ಬನ್ನಿ ಎಂದರು ಎಂದು ನವ್ಯಾ ದೂರಿನಲ್ಲಿ ತಿಳಿಸಿದ್ದಾರೆ.

ಜನವರಿ 18ರಂದು ಕಾಲೇಜಿಗೆ ಹೋಗಿ ಮಧುಷಾಗೆ ಕರೆ ಮಾಡಲು ಪ್ರಯತ್ನಿಸಿದೆ, ಆದರೆ ಅವರ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ನವ್ಯಾ ಹೇಳುತ್ತಾರೆ. “ನಾವು ರೆಸಿಡೆನ್ಸಿ ರಸ್ತೆಯಲ್ಲಿರುವ ಅವರ ಕಚೇರಿಗೆ ಹೋದಾಗ ಅಲ್ಲಿ, ನಮಗೆ ಮೋಸ ಹೋದ ಸುಮಾರು 20 ಜನ ಸೇರಿದ್ದರು. ಕಚೇರಿ ಮುಚ್ಚಲಾಗಿತ್ತು. ಪ್ರತಿಯೊಬ್ಬರು 5 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದರು.

ಫೋನ್‌ಗೆ ಅವಕಾಶವಿದ್ದಿಲ್ಲ
ನಾವು ಕಂಪನಿಯ ಮೂರನೇ ಮಹಡಿಗೆ ತಲುಪಿದ ಕೂಡಲೇ ತಮ್ಮ ಫೋನ್‌ಗಳನ್ನು ಸೈಲೆಂಟ್ ಮೋಡ್‌ನಲ್ಲಿ ಇರಿಸಲು ಮತ್ತು ಅದನ್ನು ಪ್ರವೇಶ ದ್ವಾರದ ಟ್ರೇನಲ್ಲಿ ಇಡಲು ಹೇಳುತ್ತಿದ್ದರು ಎಂದು ನವ್ಯಾ ಹೇಳಿದ್ದಾರೆ. ಇವು ಕಂಪನಿಯ ನಿಯಮಗಳು ಎಂದು ನಮಗೆ ತಿಳಿಸಲಾಯಿತು. ಇದಕ್ಕಾಗಿಯೇ ನಮ್ಮಲ್ಲಿ ಇದರ ಬಗ್ಗೆ ಯಾವುದೇ ಫೋಟೋಗಳು, ವಿಡಿಯೋಗಳು ಇಲ್ಲ ಎಂದು ಅವರು ಹೇಳಿದರು.

ಒಬ್ಬೊಬ್ಬರಿಗೆ ಒಂದು ಕಂಪನಿಹೆಸರು
ಜಯನಗರದ ಪೂರ್ಣಿಮಾ (51) ಎಂಬುವವರು ಅಶೋಕ್‌ ನಗರ ಪೊಲೀಸ್‌ ಠಾಣೆಯಲ್ಲಿ ಆರೋಪಿಗಳಾದ ಭರತ್, ಕಿಶೋರ್ ಮತ್ತು ಪ್ರತಿಭಾ ವಿರುದ್ಧ ದೂರು ನೀಡಿದ್ದಾರೆ. ಡಿಸೆಂಬರ್ 21ರಂದು, ಪ್ರತಿಭಾ ಅವರಿಂದ ಕರೆ ಬಂದಿದ್ದು, ತಾನು ಹೈಫ್ಲೈ ಅಂಬಿಟ್ಸಿಯಾ ಎಂಬ ಕಂಪನಿಯ ಕೆಲಸ ಮಾಡುತ್ತಿದ್ದು, ವೈದ್ಯಕೀಯ ಸೀಟು ಪಡೆಯಲು ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾಳೆ.

ಅವರು ಕಿಮ್ಸ್ ಕಾಲೇಜಿನಲ್ಲಿ ನನ್ನ ಮಗಳಿಗೆ ಸೀಟು ನೀಡಲು ಒಪ್ಪಿದರು. ನಾವು ಬ್ರಿಗೇಡ್ ರಸ್ತೆಯಲ್ಲಿರುವ ಅವರ ಕಚೇರಿಗೆ ಹೋದೆವು, ಅಲ್ಲಿ ನಮಗೆ ಮತ್ತಿಬ್ಬರು ಭೇಟಿಯಾಗಿದ್ದರು. ಅವರು ನಮಗೆ ಸೀಟಿಗೆ 80 ಲಕ್ಷ ರೂ. ಎಂದು ಹೇಳಿ 6 ಲಕ್ಷ ರೂ.ಗಳನ್ನು ಮುಂಗಡವಾಗಿ ಪಾವತಿಸಲು ಹೇಳಿದರು. ಆದರೆ, ನಾವು ಕೇವಲ 4 ಲಕ್ಷ ರೂ. ಪಾವತಿಸಿದೇವು. ಸೋಮವಾರ, ಕರೆ ಮಾಡಿದರೆ, ಅವರ ಫೋನ್ ಸ್ವಿಚ್ ಆಫ್ ಆಗಿದೆ. ಕಚೇರಿಗೆ ಭೇಟಿ ನೀಡಿದರೆ ಅದು ಕೂಡ ಮುಚ್ಚಲ್ಪಟ್ಟಿದೆ ಎಂದು ಪೂರ್ಣಿಮಾ ಹೇಳಿದ್ದಾರೆ.

16 ಜನರಿಂದ ದೂರು ದಾಖಲು
ರೆಸಿಡೆನ್ಸಿ ರೋಡ್‌ ಹಗರಣ ಸೋಮವಾರ ಬೆಳಕಿಗೆ ಬಂದಿದ್ದರೆ, ಮರುದಿನ ಬ್ರಿಗೇಡ್ ರಸ್ತೆಯ ವಂಚನೆ ಬೆಳಕಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ನಕಲಿ ಕಂಪನಿಗಳನ್ನು ವಿವಿಧ ಗುಂಪುಗಳು ನಿರ್ವಹಿಸುತ್ತಿದ್ದು, ಯಾರಿಗಾದರೂ ಅನುಮಾನ ಬರುವ ಮುಂಚೆಯೇ ಅವರು ಹಣದೊಂದಿಗೆ ಓಡಿ ಹೋಗಿದ್ದಾರೆ. ಇಲ್ಲಿಯವರೆಗೆ ಸುಮಾರು 16 ಜನ ದೂರು ದಾಖಲಿಸಿದ್ದಾರೆ. ಪ್ರತಿಯೊಬ್ಬರೂ ಸುಮಾರು 3 ರಿಂದ 4 ಲಕ್ಷ ರೂ. ವಂಚನೆಗೊಳಗಾಗಿದ್ದು, ಅಂದಾಜು 50 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *