ಇಳಕಲ್ನಲ್ಲಿ ಭಾರಿ ಬೆಂಕಿ ಅವಘಡ…! ಬೆಂಕಿಯ ಕೆನ್ನಾಲಿಗೆ ಹೊತ್ತಿ ಉರಿದ ನಾಲ್ಕು ಅಂತಸ್ತಿನ ಕಟ್ಟಡ…!
ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ನಾಲ್ಕು ಅಂತಸ್ತಿನ ವಾಣಿಜ್ಯ ಮಳಿಗೆಯೊಂದು ಭಾರೀ ಅಗ್ನಿ ಅವಘಡಕ್ಕೆ ತುತ್ತಾಗಿರುವ ಘಟನೆ ಕಳೆದ ರಾತ್ರಿ ನಡೆದಿದೆ. ಇಳಕಲ್ನ ಬಸವೇಶ್ವರ ಸರ್ಕಲ್ ನಲ್ಲಿರುವ ಚಂದ್ರಶೇಖರ್ ಸಜ್ಜನ ಎಂಬುವರಿಗೆ ಸೇರಿದ ಶಾಪಿಂಗ್ ಸೆಂಟರ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಮೋರ್ ಸೂಪರ್ ಮಾರ್ಕೆಟ್, ಹಾರ್ಡ್ ವೇರ್ ಅಂಗಡಿ, ಕೇಕ್ ಬೇಕರಿ, ಸರೋದ್ ಇಳಕಲ್ ಸೀರೆ, ಪೀಟರ್ ಇಂಗ್ಲೆಂಡ್ ಬಟ್ಟೆ ಮಳಿಗೆ ಸೇರಿದಂತೆ ಅನೇಕ ಅಂಗಡಿಗಳು ಸುಟ್ಟು ಕರಕಲಾಗಿವೆ ಎನ್ನಲಾಗಿದೆ.
ಘಟನೆಯಿಂದ 20 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಇಡೀ ಕಟ್ಟಡ ಬೆಂಕಿಗಾಹುತಿಯಾಗಿದ್ದನ್ನು ಕಂಡ ಮಾಲೀಕ ದಿಕ್ಕು ತೋಚದಂತಾಗಿ ಕುಳಿತಿದ್ದರು. ಸದ್ಯ ಸ್ಥಳದಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಠಿಕಾಣಿ ಹೂಡಿ, ಹರಸಾಹಸಪಟ್ಟು ಬೆಂಕಿ ನಂದಿಸಿದ್ದಾರೆ. ಇಳಕಲ್ ನಗರ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.