ಬಳ್ಳಾರಿ-ವಿಜಯನಗರ ಯಾವಾಗಲೂ ಜತೆಗಿರುತ್ತವೆ..! ತಿಂಗಳೊಳಗೆ ಎಲ್ಲ ಕಚೇರಿ ಆರಂಭ ಎಂದ ಆನಂದ್ ಸಿಂಗ್
ಹೈಲೈಟ್ಸ್:
- ಹೊಸ ಜಿಲ್ಲೆ ವಿರೋಧಿಸಿದವರು ಅಣ್ಣ ತಮ್ಮಂದಿರು ಎಂದ ಆನಂದ್ ಸಿಂಗ್
- ವಿಜಯನಗರ ಘೋಷಣೆಯಿಂದ ಹೊಸಪೇಟೆಯಲ್ಲಿ ಮನೆ ಮಾಡಿದ ಸಂಭ್ರಮ
- ವಿಜಯೋತ್ಸವ ವೇದಿಕೆಗೆ 2 ತಿಂಗಳು, ತಿಂಗಳೊಳಗೆ ಎಲ್ಲ ಕಚೇರಿ ಆರಂಭ
ಹೊಸಪೇಟೆ: ಹೊಸ ಜಿಲ್ಲೆ ರಚನೆಗೆ ವಿರೋಧಿಸಿದವರೂ ನಮ್ಮ ಅಣ್ಣ ತಮ್ಮಂದಿರು. ಹೋರಾಟ ಮಾಡುವುದು ಎಲ್ಲರ ಹಕ್ಕು. ಅಖಂಡತೆ ಅವರ ಇಚ್ಛೆ. ಅವರೆಲ್ಲರನ್ನೂ ಆತ್ಮೀಯರಂತೆಯೇ ನೋಡುತ್ತೇನೆ ಎಂದು ಸಚಿವ ಬಿ.ಆನಂದ್ ಸಿಂಗ್ ಹೇಳಿದ್ದಾರೆ.
ರಾಜ್ಯ ಸರಕಾರದಿಂದ ವಿಜಯನಗರ ಜಿಲ್ಲೆ ಅಧಿಕೃತ ಘೋಷಣೆ ನಂತರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯೋತ್ಸವವನ್ನು ಬಹಳ ದೊಡ್ಡ ಮಟ್ಟದಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ವೇದಿಕೆ ನಿರ್ಮಾಣಕ್ಕೆ ಎರಡ್ಮೂರು ತಿಂಗಳು ಹಿಡಿಯಬಹುದು. ಅಷ್ಟು ದೊಡ್ಡ ವೇದಿಕೆ ನಿರ್ಮಾಣಕ್ಕೆ ಈಗಾಗಲೇ ಚರ್ಚಿಸಲಾಗಿದೆ. ಆದಷ್ಟು ಬೇಗ ವಿಜಯೋತ್ಸವ ದಿನಾಂಕವನ್ನು ತಿಳಿಸಲಾಗುವುದು ಎಂದರು.
ನೂತನ ಜಿಲ್ಲೆಗೆ ಡಿಸಿ, ಎಸ್ಪಿ, ಸಿಇಒ ನೇಮಕ ಸೇರಿ ಒಂದು ತಿಂಗಳೊಳಗೆ ಕಚೇರಿ ಆರಂಭಿಸಲಾಗುವುದು. ಕಚೇರಿ ಎಲ್ಲಿ ಬರಬೇಕೆಂಬ ಚರ್ಚೆಗೆ ನೀಲ ನಕ್ಷೆ ತಯಾರಿಗೆ ಖಾಸಗಿ ಏಜೆನ್ಸಿಗೆ ನೀಡಲಾಗಿದೆ ಎಂದು ತಿಳಿಸಿದರು.
ಸಚಿವ ಸ್ಥಾನ ಮುಖ್ಯವಲ್ಲ. ಪಶ್ಚಿಮ ಭಾಗದ ಜನರಿಗೆ ಬೇಕಿದ್ದು ವಿಜಯನಗರ ಜಿಲ್ಲೆ. ವಿಭಜನೆ ನಂತರವೂ ಬಳ್ಳಾರಿಯೊಂದಿಗಿನ ಸಂಬಂಧ ಬೇರೆ ಆಗಲ್ಲ. ಎಲ್ಲರೂ ಅಣ್ಣ ತಮ್ಮಂದಿರಂತೆ ಒಟ್ಟಾಗಿ ಇರುತ್ತೇವೆ. ಈ ವಿಷಯನ್ನು ಯಾರೂ ಪ್ರತಿಷ್ಠೆಗೆ ತೆಗೆದುಕೊಳ್ಳುವುದು ಬೇಡ. ಇಬ್ಭಾಗದಿಂದ ದ್ವೇಷ ಬೇಡ. ತಪ್ಪು ಮಾಹಿತಿಗೆ ಕಿವಿ ಕೊಡುವುದು ಬೇಡ. ಗಡಿಭಾಗದಲ್ಲಿ ಅವರಿಗೆ ತೊಂದರೆಯಾದರೆ, ನಾವೂ ಒಟ್ಟಿಗೆ ಇರುತ್ತೇವೆ. ಯಾರೂ ಯಾರಿಂದ ಏನೂ ಕಿತ್ತುಕೊಂಡು ಹೋಗಲು ಸಾಧ್ಯವಿಲ್ಲ. ಜಿಲ್ಲೆ ಎಂಬುದು ಗಿಡದಲ್ಲಿನ ನೆಲ್ಲಿಕಾಯಿ ಅಲ್ಲ ಎಂದರು.