ಉತ್ತರಾಖಂಡ ಪ್ರವಾಹ; ಮೃತರ ಸಂಖ್ಯೆ 26ಕ್ಕೆ ಏರಿಕೆ, ಮುಂದುವರಿದ 171 ಮಂದಿ ಪತ್ತೆ ಕಾರ್ಯಾಚರಣೆ
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಉಂಟಾದ ಪ್ರವಾಹ ದುರಂತದಲ್ಲಿ ಕನಿಷ್ಠ 26 ಜನರು ಸಾವನ್ನಪ್ಪಿದ್ದಾರೆ. ವಿದ್ಯುತ್ ಸ್ಥಾವರದ ಬಳಿಯ ಸುರಂಗದಲ್ಲಿ ಪವರ್ ಪ್ಲಾಂಟ್ನ ಹಿರಿಯ ಅಧಿಕಾರಿಗಳು, ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಕಾರ್ಮಿಕರು ಸೇರಿ 171 ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ತಂಡಗಳು ವಿವಿಧ ರೀತಿಯಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದೆ. ಉತ್ತರಾಖಂಡದಲ್ಲಿ ಜೋಶಿ ಮಠದ ಬಳಿ ಹಿಮನದಿ ಸ್ಫೋಟಗೊಂಡು ಹಲವು ಕಾರ್ಮಿಕರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಗಂಗಾ ನದಿಯ ತಟದಲ್ಲಿರುವ ಎಲ್ಲ ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಉತ್ತರಾಖಂಡದ ನಂದಾ ದೇವಿ ಹಿಮನದಿಯ ಒಂದು ಭಾಗವು ಹಿಮನದಿ ಸ್ಫೋಟದಲ್ಲಿ ಒಡೆದಿದೆ. ಹಾಗಾಗಿ, ಗಂಗಾ ನದಿಯ ದಡದಲ್ಲಿರುವ ಜಿಲ್ಲೆಗಳಲ್ಲಿ ಎಚ್ಚರಿಕೆ ನೀಡಲಾಗಿದೆ. ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಪಿಎಸಿ ಪ್ರವಾಹ ನಿರ್ವಹಣಾ ತಂಡಗಳಿಗೆ ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಉತ್ತರಾಖಂಡ ಪ್ರವಾಹದ ಬಗ್ಗೆ ಟ್ವೀಟ್ ಮಾಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರಾಖಂಡದಲ್ಲಿನ ನೈಸರ್ಗಿಕ ವಿಕೋಪವನ್ನು ನಿಭಾಯಿಸಲು, ಉತ್ತರ ಪ್ರದೇಶ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ. ಈ ದುರಂತದಲ್ಲಿ ಸಾವನ್ನಪ್ಪಿರುವವರಿಗೆ ಶಾಂತಿ ಸಿಗಲಿ. ಆದಷ್ಟು ಬೇಗ ಪ್ರವಾಹ ನಿಯಂತ್ರಣಕ್ಕೆ ಬರಲು ಸಹಾಯ ಮಾಡುತ್ತೇವೆ ಎಂದಿದ್ದಾರೆ.
ಜೀವ ಉಳಿಸುವುದು ಮತ್ತು ಮೃತ ಕುಟುಂಬಗಳಿಗೆ ಎಲ್ಲಾ ರೀತಿಯ ನೆರವು ನೀಡುವುದು ರಾಜ್ಯ ಸರ್ಕಾರದ ಆದ್ಯತೆಯಾಗದೆ ಎಂದು ಉತ್ತರಾಖಂಡದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ತಳಿಸಿದ್ದಾರೆ. ಕೇಂದ್ರ ಸಚಿವರಾದ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಆರ್.ಕೆ. ಸಿಂಗ್ ಜೊತೆಗೆ ಪೌರಿ ಸಂಸದ ತಿರಥ್ ಸಿಂಗ್ ರಾವತ್, ಉತ್ತರಾಖಂಡ ಸಚಿವ ಧನ್ ಸಿಂಗ್ ರಾವತ್ ಕೂಡ ವಿಪತ್ತು ಪೀಡಿತ ತಪೋವನ ಮತ್ತು ರೈನಿಯಲ್ಲಿ ಸಂತ್ರಸ್ತ ಕುಟುಂಬಗಳನ್ನು ಭೇಟಿ ಮಾಡಿ ಅವರಿಗೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದ್ದಾರೆ.
ಪ್ರವಾಹದ ತೀವ್ರತೆಗೆ ಎನ್ಪಿಟಿಸಿಯ 480 ಮೆಗಾವ್ಯಾಟ್ ತಪೋವನ್ – ವಿಷ್ಣುಗಡ ಯೋಜನೆ ಮತ್ತು 13.2 ಮೆಗಾವ್ಯಾಟ್ ರಿಷಿಗಂಗಾ ಹೈಡೆಲ್ ಪ್ರಾಜೆಕ್ಟ್ ಹಾನಿಗೊಳಗಾಗಿದ್ದು, ನೀರು ನುಗ್ಗುತ್ತಿದ್ದಂತೆ ಒಳಗೆ ಸಿಕ್ಕಿಬಿದ್ದ ಹಲವಾರು ಕಾರ್ಮಿಕರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.
ಉತ್ತರಾಖಂಡ ಪ್ರವಾಹದ ಬಗ್ಗೆ ಟ್ವೀಟ್ ಮಾಡಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಉತ್ತರಾಖಂಡದಲ್ಲಿನ ನೈಸರ್ಗಿಕ ವಿಕೋಪವನ್ನು ನಿಭಾಯಿಸಲು, ಉತ್ತರ ಪ್ರದೇಶ ಸರ್ಕಾರ ಎಲ್ಲ ರೀತಿಯ ನೆರವು ನೀಡಲಿದೆ. ಈ ದುರಂತದಲ್ಲಿ ಸಾವನ್ನಪ್ಪಿರುವವರಿಗೆ ಶಾಂತಿ ಸಿಗಲಿ. ಆದಷ್ಟು ಬೇಗ ಪ್ರವಾಹ ನಿಯಂತ್ರಣಕ್ಕೆ ಬರಲು ಸಹಾಯ ಮಾಡುತ್ತೇವೆ ಎಂದಿದ್ದಾರೆ.