ಹೊಸ ಜಿಲ್ಲೆ ವಿಜಯನಗರದಲ್ಲಿ ಗಣಿಧಣಿ ಜನಾರ್ದನ ರೆಡ್ಡಿ ರಾಜಕೀಯ ಪುನರ್ ಜನ್ಮ?

ಬೆಂಗಳೂರು:ವಿಜಯನಗರವನ್ನು 31 ನೇ ಜಿಲ್ಲೆಯನ್ನಾಗಿ ವಿಭಜಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದ ಬೆನ್ನಲ್ಲೇ ರಾಜಕೀಯವಲಯದಲ್ಲಿ ಹಲವು ರೀತಿಯ ಚರ್ಚೆಗಳು ಗರಿಗೆದರಿವೆ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಈಗ ವಿಜಯನಗರಕ್ಕೆ ಸಲೀಸಾಗಿ ಭೇಟಿ ನೀಡಬಹುದಾಗಿದೆ.

ಹೀಗಾಗಿ ವಿಜಯನಗರ ಜಿಲ್ಲೆಯಲ್ಲಿ ಜನಾರ್ದನ ರೆಡ್ಡಿಗೆ ರಾಜಕೀಯ ಪುನರ್ ಜನ್ಮ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 2011 ರಲ್ಲಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದರು. ಸುಮಾರು ನಾಲ್ಕು ವರ್ಷಗಳ ಕಾಲ ಜೈಲಿನಲ್ಲಿದ್ದ ರೆಡ್ಡಿಗೆ 2015 ರಲ್ಲಿ ಜಾಮೀನು ದೊರೆಯಿತು.  ಆದರೆ ಕೋರ್ಟ್ ಅನುಮತಿ ಯಿಲ್ಲದೆ ಆಂಧ್ರ
ಪ್ರದೇಶದ ಕಡಪ, ಅನಂತಪುರ ಮತ್ತು ಕರ್ನಾಟಕದ ಬಳ್ಳಾರಿ ಜಿಲ್ಲೆಗೆ ಜನಾರ್ದನ ರೆಡ್ಡಿ ಹೋಗುವಂತಿರಲಿಲ್ಲ.

ಆದರೆ ನೂತನವಾಗಿ ರಚನೆಯಾಗಿರುವ ವಿಜಯನಗರಕ್ಕೆ ಯಾವುದೇ ಅಡೆತಡೆಗಳಿಲ್ಲದೇ ರೆಡ್ಡಿ ಭೇಟಿ ನೀಡಬಹುದಾಗಿದೆ. ವಿಜಯನಗರಕ್ಕೆ ಪ್ರವೇಶಿಸಲು ಜನಾರ್ದನ ರೆಡ್ಡಿಗೆ ಯಾವುದೇ ಕಾನೂನು ತೊಡಕು ಇಲ್ಲ ಎಂದು ಕೆಲವು ತಜ್ಞರು ಭಾವಿಸುತ್ತಾರೆ.ಆದರೆ ರೆಡ್ಡಿ  ಹೊಸಪೇಟೆಯಲ್ಲಿ ವ್ಯಾಪಾರ ಸಂಸ್ಥೆಗಳನ್ನು ಹೊಂದಿದ್ದಾರೆ.

ಹೊಸಪೇಟೆಯಲ್ಲಿ ತಮ್ಮ ರಾಜಕೀಯ ಬದುಕನ್ನು ಪುನರಾರಂಭಿಸಲು ರೆಡ್ಡಿ ಬಯಸಿದ್ದಾರೆ ಎಂದು ಕೆಲವು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ, ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ರೆಡ್ಡಿ ಜೈಲಿಗೆ ತೆರಳುವ ಮೊದಲೇ ಅವರ ಆಪ್ತ ಸ್ನೇಹಿತ ಬಿ. ಶ್ರೀರಾಮುಲು ಬಿಎಸ್ ಆರ್ ಕಾಂಗ್ರೆಸ್ ಎಂಬ ರಾಜಕೀಯ ಪಕ್ಷ ಸ್ಥಾಪಿಸಿದ್ದರು. 2010 ರಲ್ಲಿ ಹೊಸಪೇಟೆಯಲ್ಲಿ ರಾಮುಲು ರ್ಯಾಲಿ ಆಯೋಜಿಸಿದ್ದು ದೊಡ್ಡ ಮಟ್ಟದಲ್ಲಿ ಯಶಸ್ಸು ಪಡೆಯಿತು.

ಆದರೆ ಪ್ರಸಕ್ತ ಸಂದರ್ಭದಲ್ಲಿ ಸ್ಥಿತಿಗತಿಗಳು ಬದಲಾಗಿವೆ. ಬಳ್ಳಾರಿಯ ಮತ್ತೊಬ್ಬ ಮೈನಿಂಗ್ ದೊರೆ ಆನಂದ್ ಸಿಂಗ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ವಿಜಯನಗರದಿಂದ ಗೆಲುವು ಸಾಧಿಸಿದ್ದಾರೆ. ರೆಡ್ಡಿ ಅವರು ತಮ್ಮ ರಾಜಕೀಯ ಜೀವನವನ್ನು ಇಲ್ಲಿ ಪುನರಾರಂಭಿಸಲು ನಿರ್ಧರಿಸಿದರೆ ಇದು ಅವರ ಪರವಾಗಿ ಕೆಲಸ ಮಾಡುತ್ತದೆ ಎಂದು ಬಳ್ಳಾರಿಯ ರಾಜಕೀಯ
ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

ಜಾಮೀನು ಮಂಜೂರು ಮಾಡುವಾಗ ಸುಪ್ರೀಂ ಕೋರ್ಟ್ ರೆಡ್ಡಿಗೆ ಕರ್ನಾಟಕದ ಬಳ್ಳಾರಿ ಜಿಲ್ಲೆಗೆ ಭೇಟಿ ನೀಡದಂತೆ ಷರತ್ತು ವಿಧಿಸಿತ್ತು “ಆದರೆ ಈಗ ಜಿಲ್ಲೆಯನ್ನು ವಿಭಜಿಸಿದಂತೆ, ಜನಾರ್ದನ ರೆಡ್ಡಿ ಹೊಸ ಜಿಲ್ಲೆಗೆ ಭೇಟಿ ನೀಡಬಹುದು ಎಂದು ಬಳ್ಳಾರಿ ಹಿರಿಯ ವಕೀಲ ಸಿರಿಗೆರಿ ಪನ್ನಗರಾಜ್ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅವರು ಹೆಚ್ಚಾಗಿ ಬಳ್ಳಾರಿಗೆ ಹತ್ತಿರವಿರುವ ಚಿತ್ರದುರ್ಗಕ್ಕೆ ಭೇಟಿ ನೀಡುತ್ತಿದ್ದರು. ಈಗ ಅವರು ಹೊಸ ಜಿಲ್ಲೆಯ ಜಿಲ್ಲಾ ಕೇಂದ್ರವಾಗಿರುವ ಹೊಸಪೇಟೆಗೆ ಭೇಟಿ ನೀಡಬಹುದು ವಕೀಲರು ತಿಳಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *