ಬಿ.ಎಸ್. ಯಡಿಯೂರಪ್ಪ ಅವರಿಂದ ‘ತನುಜಾ’ ಸಿನಿಮಾ ಫಸ್ಟ್‌ಲುಕ್ ರಿಲೀಸ್‌! ಈ ಚಿತ್ರಕ್ಕೆ ಲೇಖನವೇ ಸ್ಫೂರ್ತಿ!

ಸಿನಿಮಾಗೆ ಸಂಬಂಧಿಸಿದ ಕಾರ್ಯಕ್ರಮಗಳಲ್ಲಿ ರಾಜಕಾರಣಿಗಳು ಕಾಣಿಸಿಕೊಳ್ಳುವುದು ಬಲು ಅಪರೂಪ. ಈಗ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ‘ತನುಜಾ’ ಸಿನಿಮಾದ ಪ್ರಮೋಷನ್‌ಗೆ ಸಾಥ್‌ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ…

ಹೈಲೈಟ್ಸ್‌:

  • ಹರೀಶ್ ಎಂ.ಡಿ. ಹಳ್ಳಿ ನಿರ್ದೇಶನದ ‘ತನುಜಾ’ ಸಿನಿಮಾ
  • ಫಸ್ಟ್‌ಲುಕ್‌ ಬಿಡುಗಡೆ ಮಾಡಿದ ಸಿ.ಎಂ. ಯಡಿಯೂರಪ್ಪ
  • ವಿಶ್ವೇಶ್ವರ ಭಟ್‌ ಲೇಖನದಿಂದ ಸ್ಫೂರ್ತಿ ಪಡೆದ ಚಿತ್ರ
  • ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಚಿತ್ರೀಕರಣ

ರಾಜಕೀಯ ಚಟುವಟಿಕೆಗಳಲ್ಲಿ ಸದಾ ಕಾಲ ಬ್ಯುಸಿ ಆಗಿರುವ ಸಿ.ಎಂ. ಬಿ.ಎಸ್‌. ಯಡಿಯೂರಪ್ಪ ಅವರು ಕೊಂಚ ಬಿಡುವು ಮಾಡಿಕೊಂಡು ಸಿನಿಮಾ ಮಂದಿಯ ಕಡೆಗೆ ಗಮನ ನೀಡಿದ್ದಾರೆ. ಹೊಸದೊಂದು ಕನ್ನಡ ಸಿನಿಮಾದ ಫಸ್ಟ್‌ಲುಕ್‌ ಲಾಂಚ್‌ ಮಾಡಿಕೊಟ್ಟಿದ್ದಾರೆ. ಮುಖ್ಯಮಂತ್ರಿ ಕೈಯಿಂದ ಫಸ್ಟ್‌ಲುಕ್‌ ಅನಾವರಣ ಮಾಡಿಸಿಕೊಂಡ ಈ ಸಿನಿಮಾ ಹೆಸರು ‘ತನುಜಾ’.

ಫಸ್ಟ್‌ ಲುಕ್‌ ಲಾಂಚ್‌ ಮಾಡುವ ಸಂದರ್ಭದಲ್ಲಿ ಆರೋಗ್ಯ ಸಚಿವ ಕೆ. ಸುಧಾಕರ್ ಕೂಡ ಉಪಸ್ಥಿತರಿದ್ದರು ಎಂಬುದು ವಿಶೇಷ. ಬಿಯಾಂಡ್‌ ವಿಷನ್ಸ್‌ ಸಿನಿಮಾಸ್‌ ಲಾಂಛನದಲ್ಲಿ ಈ ಚಿತ್ರ ನಿರ್ಮಾಣ ಆಗುತ್ತಿದೆ. ಈ ಚಿತ್ರಕ್ಕೆ ಹರೀಶ್ ಎಂ.ಡಿ. ಹಳ್ಳಿ ಅವರು ನಿರ್ದೇಶನ ಮಾಡಿದ್ದಾರೆ. ಸಿನಿಮಾವೊಂದರ ಕಥೆಗೆ ಎಲ್ಲಿಂದ ಬೇಕಾದರೂ ಸ್ಫೂರ್ತಿ ಸಿಗಬಹುದು. ಅದೇ ರೀತಿ, ‘ತನುಜಾ’ ಚಿತ್ರಕ್ಕೆ ಪ್ರೇರಣೆ ಆಗಿರುವುದು ಒಂದು ಲೇಖನದಿಂದ ಎಂಬುದು ವಿಶೇಷ.

ಹೌದು, ಖ್ಯಾತ ಪತ್ರಕರ್ತ ವಿಶ್ವೇಶ್ವರ ಭಟ್‌ ಅವರು ಬರೆದ ಒಂದು ಲೇಖನದಿಂದ ಪ್ರಭಾವಿತರಾಗಿ ನಿರ್ದೇಶಕ ಹರೀಶ್ ಎಂ.ಡಿ. ಹಳ್ಳಿ ಅವರು ‘ತನುಜಾ’ ಸಿನಿಮಾ ಮಾಡುತ್ತಿದ್ದಾರೆ. ಹಾಗಾಗಿ ಚಿತ್ರದ ಫಸ್ಟ್‌ಲುಕ್‌ ಲಾಂಚ್‌ ಸಂದರ್ಭದಲ್ಲಿ ವಿಶ್ವೇಶ್ವರ ಭಟ್‌ ಅವರು ಕೂಡ ಜೊತೆಗಿದ್ದರು. ಚಿತ್ರದ ಕಾರ್ಯಕಾರಿ ನಿರ್ಮಾಪಕ ರಘುನಂದನ್ ಎಸ್‌.ಕೆ. ಕೂಡ ಉಪಸ್ಥಿತರಿದ್ದರು. ನೈಜ ಫಟನೆ ಆಧಾರಿತ ಈ ಚಿತ್ರದ ಚಿತ್ರೀಕರಣ ಮಾರ್ಚ್‌ ಎರಡನೇ‌ ವಾರದಲ್ಲಿ ಆರಂಭವಾಗಲಿದೆ.

ಬೆಂಗಳೂರು ಮತ್ತು ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಸಲು ಪ್ಲ್ಯಾನ್‌ ಮಾಡಿಕೊಳ್ಳಲಾಗಿದೆ. 2016-17ನೇ ಸಾಲಿನ ರಾಜ್ಯ ಪ್ರಶಸ್ತಿಗೆ ಭಾಜನವಾಗಿದ್ದ ‘ಅಂತರ್ಜಲ’ ಚಿತ್ರವನ್ನು ನಿರ್ದೇಶಿಸಿದ್ದ ಹರೀಶ್ ಎಂ.ಡಿ. ಹಳ್ಳಿ ಅವರಿಗೆ ಇದು ಎರಡನೇ ಚಿತ್ರ. ‘ಸ.ಹಿ.ಪ್ರಾ. ಶಾಲೆ: ಕಾಸರಗೋಡು’ ಚಿತ್ರದಲ್ಲಿ ಅಭಿನಯಿಸಿದ್ದ ಸಪ್ತಾ ಪಾವೂರ್‌ ಈ ಚಿತ್ರದ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಉಳಿದ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ಪ್ರದ್ಯೋತನ ಸಂಗೀತ ನಿರ್ದೇಶನ ಹಾಗೂ ರವೀಂದ್ರನಾಥ್ ಅವರ ಛಾಯಾಗ್ರಹಣವಿರುವ ‘ತನುಜಾ’ ಚಿತ್ರಕ್ಕೆ ಆರ್. ಚಂದ್ರಶೇಖರ್ ಪ್ರಸಾದ್ ಸಂಭಾಷಣೆ ಬರೆಯುತ್ತಿದ್ದಾರೆ.

 

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *