ಉತ್ತರಾಖಂಡದ ಪರ್ವತಲ್ಲಿ ಅಪಾಯಕಾರಿ ಸರೋವರ, ಮತ್ತೊಂದು ದುರಂತ ತಪ್ಪಿಸಲು ತಜ್ಞರ ಕಸರತ್ತು

ಹೈಲೈಟ್ಸ್‌:

  • ನೀರ್ಗಲ್ಲಿನ ಅವಶೇಷಗಳಿಂದ ರಚನೆಯಾಗಿರುವ ಸರೋವರ
  • ಉಪಗ್ರಹದಿಂದ ಸೆರೆಹಿಡಿದ ನಂದಾದೇವಿ ಪರ್ವತದಲ್ಲಿನ ಸರೋವರ ರಚನೆ
  • ಮತ್ತೊಂದು ದುರಂತದ ಸೂಚನೆ ಎಂದ ತಜ್ಞರು

ಹೊಸದಿಲ್ಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿಇತ್ತೀಚೆಗೆ ಸಂಭವಿಸಿದ ನೀರ್ಗಲ್ಲು ಕುಸಿತದಿಂದಾಗಿ ನಂದಾದೇವಿ ಪರ್ವತದ ಕೆಳಪ್ರದೇಶದ ರೇಣಿ ಗ್ರಾಮದಲ್ಲಿ ಸರೋವರವೊಂದು ನಿರ್ಮಾಣಗೊಂಡಿರುವುದು ಪತ್ತೆಯಾಗಿದೆ. ಇದು ನೀರ್ಗಲ್ಲಿನ ಅವಶೇಷಗಳಿಂದ ರಚನೆಯಾಗಿರುವ ಹಿನ್ನೆಲೆಯಲ್ಲಿಅಪಾಯ ಕಟ್ಟಿಟ್ಟಬುತ್ತಿ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಸರೋವರ ರಚನೆಯಾಗಿರುವುದನ್ನು ಉಪಗ್ರಹದಿಂದ ತೆಗೆಯಲಾದ ಚಿತ್ರಗಳು ಖಾತ್ರಿಪಡಿಸಿದ್ದು, ಇದರಲ್ಲಿಅಡಗಿರುವ ನೀರು ಯಾವುದೇ ಸಮಯದಲ್ಲಿಕೂಡ ಮತ್ತೆ ಸ್ಫೋಟಗೊಂಡು ಮತ್ತೊಂದು ಅನಾಹುತಕ್ಕೆ ಕಾರಣವಾಗಬಹುದಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌)ಗಳ ತಜ್ಞರು ಚಿಂತನೆ ನಡೆಸಿದ್ದು, ದುರಂತ ತಪ್ಪಿಸುವ ಮಾರ್ಗೋಪಾಯದ ಹುಡುಕಾಟದಲ್ಲಿದ್ದಾರೆ.

”ಈ ಸರೋವರದ ಸುತ್ತಲೂ ನಮ್ಮ ಹೆಲಿಕಾಪ್ಟರ್‌ಗಳು ಹಾರಾಟ ನಡೆಸಿ ಪರಿಸ್ಥಿತಿಯ ಸೂಕ್ಷ್ಮತೆ ಪರಿಶೀಲಿಸಿವೆ. ಡ್ರೋನ್‌ಗಳನ್ನೂ ಬಳಸಿ ನೀರ್ಗಲ್ಲಿನ ಸರೋವರದ ಸಮೀಪದ ಫೋಟೊ, ವಿಡಿಯೊಗಳನ್ನು ಸಂಗ್ರಹಿಸಿದ್ದೇವೆ. ಈ ಕುರಿತು ಅಧ್ಯಯನ ನಡೆದಿದೆ. ಅಪಾಯ ತಡೆಯುವ ಕಾರ್ಯಾಚರಣೆ ರೂಪಿಸಲಾಗುತ್ತಿದೆ,” ಎಂದು ಎನ್‌ಡಿಆರ್‌ಎಫ್‌ ನಿರ್ದೇಶಕ ಎಸ್‌.ಎನ್‌.ಪ್ರಧಾನ್‌ ತಿಳಿಸಿದ್ದಾರೆ.

ಕಳೆದ ಭಾನುವಾರ ಸಂಭವಿಸಿದ ನೀರ್ಗಲ್ಲು ಕುಸಿತದಿಂದಾಗಿ ರಿಷಿಗಂಗಾ ನದಿಯ ಸಹಜ ಹರಿವಿನ ಮಾರ್ಗಕ್ಕೆ ಹಾನಿಯುಂಟಾಗಿದೆ. ಈಗ ಹೊಸ ಸರೋವರವೊಂದು ರಚನೆಯಾಗಿರುವುದರಿಂದ ನದಿಯ ಹರಿವಿಗೆ ಅಡ್ಡಿಯಾಗಿದೆ. ಇದು ಯಾವುದೇ ಕ್ಷಣದಲ್ಲಾದರೂ ಸ್ಫೋಟಗೊಂಡು ಮತ್ತೆ ನೀರು ಚಿಮ್ಮುವ ಅಪಾಯವಿದೆ. ಹೀಗಾಗಿ ಸದ್ಯವೇ ಮತ್ತೆ ಪ್ರವಾಹ ಬರಬಹುದು ಎಂದು ಸರೋವರದ ಪರಿಶೀಲನೆ ನಡೆಸಿರುವ ಘರ್‌ವಾಲ್‌ ವಿಶ್ವವಿದ್ಯಾಲಯ ಪ್ರಾಧ್ಯಾಪಕ ವೈ.ಪಿ. ಸುಂದ್ರಿಯಾಲ್‌ ಅಭಿಪ್ರಾಯಪಟ್ಟಿದ್ದಾರೆ.

ರೇಣಿ ಗ್ರಾಮದ ಬಳಿಕ ನೀರ್ಗಲ್ಲಿನ ಅವಶೇಷಗಳಿಂದ ಹೊಸ ಸರೋವರವೊಂದು ನೈಸರ್ಗಿಕವಾಗಿ ನಿರ್ಮಾಣವಾಗಿರುವುದು ಗಮನಕ್ಕೆ ಬಂದಿದೆ. ಎಚ್ಚರಿಕೆ ಪಾಲಿಸುತ್ತಿದ್ದೇವೆ, ಸದ್ಯಕ್ಕೆ ಆತಂಕಪಡುವ ಅಗತ್ಯವಿಲ್ಲ. ಕೇಂದ್ರ ಗೃಹ ಕಾರ್ಯದರ್ಶಿ ನಿತ್ಯವೂ ಕಾರ್ಯಾಚರಣೆ ಮಾಹಿತಿ ಪಡೆಯುತ್ತಿದ್ದಾರೆ.
– ತ್ರಿವೇಂದ್ರ ಸಿಂಗ್‌ ರಾವತ್‌ , ಉತ್ತರಾಖಂಡ ಸಿಎಂ

6ನೇ ದಿನವೂ ರಕ್ಷಣಾ ಕಾರ್ಯ
ತಪೋವನ ಸುರಂಗದಲ್ಲಿ ಸಿಲುಕಿರುವ ಸುಮಾರು 30 ಜನರ ರಕ್ಷಣೆಗಾಗಿ ಶುಕ್ರವಾರ ಕೂಡ ಕಾರ್ಯಾಚರಣೆ ಭರದಿಂದ ಸಾಗಿತ್ತು. ನೀರ್ಗಲ್ಲಿನ ಅವಶೇಷ ತೆರವು ಹಾಗೂ ಸುರಂಗ ಮಾರ್ಗದ ಡ್ರಿಲ್ಲಿಂಗ್‌ ಕಾರ್ಯ ನಡೆದಿದೆ. ”ಆರನೇ ದಿನವೂ ಕೂಡ ನಾವು ವಿಶ್ವಾಸಗುಂದದೇ ಯತ್ನ ನಡೆಸುತ್ತಿದ್ದೇವೆ. ಇದುವರೆಗೂ 38 ಶವಗಳು ಸಿಕ್ಕಿವೆ, 166 ಜನರು ನಾಪತ್ತೆಯಾಗಿದ್ದಾರೆ,” ಎಂದು ಡಿಜಿಪಿ ಅಶೋಕ್‌ ಕುಮಾರ್‌ ತಿಳಿಸಿದ್ದಾರೆ. ಹಿಮಕುಸಿತದಿಂದ ಸಂಪರ್ಕ ಕಡಿದುಕೊಂಡಿರುವ ಚಮೋಲಿ ಜಿಲ್ಲೆಯ ಕೆಲವು ಗ್ರಾಮಗಳ ಜನರು ಅಗತ್ಯ ವಸ್ತುಗಳನ್ನು ಪಡೆಯಲು ಅನುಕೂಲವಾಗುವಂತೆ ಭಾರತೀಯ ಸೇನೆ ಪರ್ವತ ತುದಿಯಲ್ಲಿಟ್ರಾಲಿಯ ವ್ಯವಸ್ಥೆ ಮಾಡಿದೆ. ಫುಟ್‌ಬ್ರಿಡ್ಜ್‌ ತುಂಡಾಗಿದ್ದರಿಂದ ಗ್ರಾಮಸ್ಥರು ಆತಂಕದಲಿದ್ದಾರೆ. ಹಾಗಾಗಿ ನದಿಗೆ ಅಡ್ಡಲಾಗಿ ತಾತ್ಕಾಲಿಕ ಟ್ರಾಲಿ ನಿರ್ಮಿಸಿದ್ದೇವೆ ಎಂದು ಸೇನೆಯ ಮೇಜರ್‌ ಉತ್ಕಷ್‌ರ್‍ ಶುಕ್ಲಾಹೇಳಿದ್ದಾರೆ.

ಮೂರು ದಿನದಿಂದ ಕಾಯುತ್ತಿರುವ ಶ್ವಾನ
ತಪೋವನ ಸುರಂಗಮಾರ್ಗದ ಹೊರಗಡೆ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿರುವ ನಡುವೆಯೇ ನಾಯಿಯೊಂದು ನಿತ್ಯವೂ ಅಲ್ಲಿಯೇ ಸುತ್ತಾಡಿಕೊಂಡು , ಯಾರದ್ದೋ ನಿರೀಕ್ಷೆಯಲ್ಲಿರುವಂತೆ ಕಾಯುತ್ತಿದೆ. ಸ್ಥಳೀಯ ಭೂಟಿಯಾ ಜಾತಿಯ ನಾಯಿಯನ್ನು ಗಮನಿಸಿರುವ ಸ್ಥಳೀಯರು, ಮೂರು ದಿನಗಳಿಂದಲೂ ತನ್ನ ಒಡೆಯ ಅಥವಾ ಆಪ್ತರಿಗಾಗಿ ಅದು ಎದುರು ನೋಡುತ್ತಿದೆ. ರಾತ್ರಿ ವೇಳೆ ಸ್ವಲ್ಪ ದೂರಕ್ಕೆ ತೆರಳಿ ಪುನಃ ಬೆಳಗ್ಗೆ ಕಾರ್ಯಾಚರಣೆ ವೇಳೆಗೆ ಸುರಂಗದತ್ತ ದೌಡಾಯಿಸುತ್ತಿದೆ ಎಂದಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *