Petrol Price – ಶನಿವಾರ ಮತ್ತೆ ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ; ಬೆಂಗಳೂರು ಮತ್ತಿತರೆಡೆ ಎಷ್ಟಿದೆ ರೇಟು?
ನವದೆಹಲಿ(ಫೆ. 13): ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೂಡ್ ಆಯಿಲ್ ಬೆಲೆ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮೊದಲಾದ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ದುಬಾರಿಯಾಗುತ್ತಲೇ ಇದೆ. ಕಳೆದ 44 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 17 ಬಾರಿ ಹೆಚ್ಚಾಗಿದೆ. ಈ ತಿಂಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಫೆಬ್ರವರಿ 4ರಂದು ತಾರೀಕು ತಲಾ 37 ಪೈಸೆ, ಫೆಬ್ರವರಿ 5ರಂದು 37 ಪೈಸೆ, ಫೆಬ್ರವರಿ 9ರಂದು 42 ಪೈಸೆ, ಫೆಬ್ರವರಿ 10ರಂದು 31 ಪೈಸೆ, ಫೆಬ್ರವರಿ 11ರಂದು 38 ಪೈಸೆ ಹಾಗೂ ಫೆಬ್ರವರಿ 12ರಂದು 38 ಪೈಸೆ ಏರಿಕೆ ಮಾಡಲಾಗಿತ್ತು. ಈಗ ಫೆಬ್ರವರಿ 13ರಂದು ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 39 ಪೈಸೆ ಹೆಚ್ಚಳ ಮಾಡಲಾಗಿದೆ.
ಕಳೆದ 5 ದಿನಗಳಿಂದ ನಿರಂತರವಾಗಿ ಬೆಲೆ ಏರಿಕೆ ಮಾಡಲಾಗಿದೆ. 5 ದಿನಗಳಿಂದ ಒಟ್ಟು 1.82 ಪೈಸೆ ಬೆಲೆ ಹೆಚ್ಚಳ ಮಾಡಲಾಗಿದೆ. ಡಾಲರ್ ಎದುರು ರೂಪಾಯಿ ಮೌಲ್ಯ 72.85 ರೂಪಾಯಿ ಇದೆ. ಬ್ರೆಂಟ್ ಕಚ್ಚಾ ತೈಲ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ಗೆ 60.60ನಂತೆ ಲಭ್ಯವಾಗುತ್ತಿದೆ. ಆದರೂ ಭಾರತದಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಳ ಮಾಡುತ್ತಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಹೆಚ್ಚಳವಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವುದು, ಹಾಗೆಯೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಕಡಿಮೆಯಾದಾಗ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಇಳಿಸುವುದು ಸಾಮಾನ್ಯವಾದ ಸಂಗತಿ. ಬಹಳ ಹಿಂದಿನಿಂದಲೂ ಇದು ನಡೆದುಕೊಂಡ ಬಂದಿರುವ ರೀತಿ. ಆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಸತ್ಸಂಪ್ರದಾಯವನ್ನು ಮರೆತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕ್ರೂಡ್ ಆಯಿಲ್ ದರ ಗಣನೀಯವಾಗಿ ಕಡಿಮೆ ಆಗುತ್ತಿದ್ದರೂ ದೇಶಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಿರಂತರವಾಗಿ ಹೆಚ್ಚಳ ಮಾಡುತ್ತಲೇ ಇದೆ.
2020ರ ಜೂನ್ ತಿಂಗಳಲ್ಲಿ, ಅಂದರೆ ಜನ ಕೊರೋನಾ ಮತ್ತು ಲಾಕ್ಡೌನ್ ಎಂಬ ಎರಡು ಬಲು ದೊಡ್ಡ ಸಂಕಷ್ಟದ ಸಂದರ್ಭದಲ್ಲಿದ್ದಾಗ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸುವ ಪರಿಪಾಠ ಶುರುವಾಗಿತ್ತು. ಉದಾಹರಣೆಗೆ ಜೂನ್ ತಿಂಗಳಲ್ಲಿ ಬರೊಬ್ಬರಿ 23 ದಿನ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಏರಿಕೆ ಮಾಡಲಾಗಿತ್ತು. ಜುಲೈ ತಿಂಗಳಲ್ಲಿ ದಿನ ಬಿಟ್ಟು ದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಲಾಗಿತ್ತು. ಆಗಸ್ಟ್, ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲೂ ಆಗಾಗ್ಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಳ ಮಾಡಲಾಗಿತ್ತು. ಈಗ ಜನವರಿಯಲ್ಲೂ ನಿರಂತರವಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗುತ್ತದೆ. ದೇಶದ ವಿವಿಧ ನಗರಗಳಲ್ಲಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ವಿವರ ಹೀಗಿದೆ.
ದೇಶದ ವಿವಿಧ ನಗರಗಳಲ್ಲಿನ ಪೆಟ್ರೋಲ್ -ಡೀಸೆಲ್ ಬೆಲೆ
ಬೆಂಗಳೂರು- ಪೆಟ್ರೋಲ್ 91.40 ರೂ., ಡೀಸೆಲ್ 83.47 ರೂ.ಭೂಪಾಲ್- ಪೆಟ್ರೋಲ್ 96.39 ರೂ., ಡೀಸೆಲ್ 86.86 ರೂ.
ಮುಂಬೈ- ಪೆಟ್ರೋಲ್ 94.93 ರೂ., ಡೀಸೆಲ್ 85.70 ರೂ.
ಜೈಪುರ – ಪೆಟ್ರೋಲ್ 94.86 ರೂ., ಡೀಸೆಲ್ 87.04 ರೂ.
ಪಾಟ್ನಾ- ಪೆಟ್ರೋಲ್ 90.84 ರೂ., ಡೀಸೆಲ್ 83.95 ರೂ.
ಚೆನ್ನೈ- ಪೆಟ್ರೋಲ್ 90.70 ರೂ., ಡೀಸೆಲ್ 83.86 ರೂ.
ಕೋಲ್ಕತ್ತಾ- ಪೆಟ್ರೋಲ್ 89.73 ರೂ., ಡೀಸೆಲ್ 82.33 ರೂ.
ದೆಹಲಿ- ಪೆಟ್ರೋಲ್ 88.44 ರೂ., ಡೀಸೆಲ್ 78.74 ರೂ.
ನೋಯ್ಡಾ- ಪೆಟ್ರೋಲ್ 86.94 ರೂ., ಡೀಸೆಲ್ 78.37 ರೂ.
ಲಕ್ನೋ- ಪೆಟ್ರೋಲ್ 87.22 ರೂ., ಡೀಸೆಲ್ 79.11 ರೂ.
ಗುರುಗಾವ್ – ಪೆಟ್ರೋಲ್ 85. 90ರೂ., ಡೀಸೆಲ್ 78.95ರೂ.
ರಾಂಚಿ- ಪೆಟ್ರೋಲ್ 86.44 ರೂ., ಡೀಸೆಲ್ 82.27 ರೂ.