ವಿಶೇಷ ವಿಡಿಯೋ ಮೂಲಕ ಮಗನ ಮುಖ ತೋರಿಸಿದ ನಟಿ ಮೇಘನಾ ರಾಜ್!
ಹೈಲೈಟ್ಸ್:
- ಚಿರಂಜೀವಿ ಸರ್ಜಾ, ಮೇಘನಾ ರಾಜ್ರದ್ದು ಪ್ರೇಮ ವಿವಾಹ
- ಅಕ್ಟೋಬರ್ 22, 2020ರಂದು ಜ್ಯೂನಿಯರ್ ಚಿರು ಆಗಮನ
- ಇನ್ನೂ ಚಿರು ಪುತ್ರನಿಗೆ ಹೆಸರು ಇಡಬೇಕಿದೆ
ನಟಿ ಮೇಘನಾ ರಾಜ್ ಹಾಗೂ ನಟ ಚಿರಂಜೀವಿ ಸರ್ಜಾ ಅವರು ಪ್ರೀತಿಸಿ ಮದುವೆಯಾಗಿದ್ದರು. ಆದರೆ ವಿಧಿಯ ಆಟದಿಂದ ಚಿರು ಇಹಲೋಕ ತ್ಯಜಿಸಿದರು. ಇವರಿಬ್ಬರ ಪ್ರೀತಿಗೆ ಸಾಕ್ಷಿಯಾಗಿ ಜ್ಯೂನಿಯರ್ ಚಿರು ಆಗಮನವಾಗಿದೆ. ಮೇಘನಾ ಪುತ್ರ ಹುಟ್ಟಿ ನಾಲ್ಕು ತಿಂಗಳಾಗುತ್ತ ಬಂತು. ಆದರೆ ಮಗು ಹುಟ್ಟಿದ ದಿನ ಬಿಟ್ಟರೆ ಆಮೇಲೆ ಅಭಿಮಾನಿಗಳು ಯಾರೂ ಆ ಮಗುವಿನ ಮುಖ ನೋಡಿರಲಿಲ್ಲ. ‘ಪ್ರೇಮಿಗಳ ದಿನ’ದ ಪ್ರಯುಕ್ತ ಮೇಘನಾ ಎಲ್ಲರಿಗೂ ಮಗನ ಮುಖದ ದರ್ಶನ ಮಾಡಿಸಿದ್ದಾರೆ.
ಫೆಬ್ರವರಿ 14, 2021ರಂದು ಸರಿಯಾಗಿ ರಾತ್ರಿ 12 ಗಂಟೆಗೆ ಮೇಘನಾ ಮಗನನ್ನು ಪರಿಚಯಿಸಿದ್ದಾರೆ. ಒಂದು ವಿಶೇಷವಾದ ವಿಡಿಯೋ ಮೂಲಕ ಅವರ ಸಿಂಬಾರನ್ನು ತೋರಿಸಿದ್ದಾರೆ. ಆ ವಿಡಿಯೋದಲ್ಲಿ 22 ಅಕ್ಟೋಬರ್ 2017ರಂದು ನಡೆದಿದ್ದ ಮೇಘನಾ-ಚಿರು ನಿಶ್ಚಿತಾರ್ಥದ ತುಣುಕು, ಹಾಗೂ ಅವರಿಬ್ಬರ ಬಾಲ್ಯದ ಫೋಟೋ, ಮಗುವನ್ನು ತೋರಿಸಲಾಗಿದೆ. ಅಷ್ಟೇ ಅಲ್ಲದೆ ಚಿರು ಎಂದಿಗೂ ನಮ್ಮನ್ನು ಅಗಲಿಲ್ಲ, ಅಗಲೋದಿಲ್ಲ ಎಂಬಂತಹ ಮಾತು ಕೂಡ ಹೇಳಲಾಗಿದೆ. ಇನ್ನು ಚಿರು ಪುತ್ರ ಕೂಡ ಹುಟ್ಟಿದ್ದು 22 ಅಕ್ಟೋಬರ್ 2020ರಂದು.
ಚಿರು ಪುತ್ರನನ್ನು ನೋಡಿ ಎಲ್ಲರೂ ಖುಷಿಪಟ್ಟಿದ್ದಾರೆ. ಆತನ ನಗುವಿನ ಬಗ್ಗೆಯೇ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುತ್ತಿದ್ದಾರೆ. ಧ್ರುವ ಸರ್ಜಾ ಪತ್ನಿ ಪ್ರೇರಣಾ ಶಂಕರ್, ಐಶ್ವರ್ಯಾ ಅರ್ಜುನ್ ಮುಂತಾದವರು ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಚಿರು-ಮೇಘನಾ ಅಭಿಮಾನಿಗಳಿಗೆ ಮಗುವಿನ ಮುಖ ನೋಡಿರುವುದು ತುಂಬ ಖುಷಿ ಕೊಟ್ಟಿದೆ.
ಚಿರು ನಿಧನದ ನಂತರದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಮೇಘನಾ ‘ನನ್ನ ಮಗನೇ ನನಗೆ ಶಕ್ತಿ, ಅವನೇ ನನಗೆ ಎಲ್ಲ’ ಎಂದಿದ್ದರು. ಇನ್ನು ತವರು ಮನೆಯಲ್ಲಿ ಮೇಘನಾ ಮಗುವಿನ ತೊಟ್ಟಿಲು ಶಾಸ್ತ್ರ ನಡೆದಿದೆ. ಧ್ರುವ ಸರ್ಜಾ ತಂದ ಬೆಳ್ಳಿ ತೊಟ್ಟಿಲಲ್ಲಿ ಇನ್ನೊಮ್ಮೆ ತೊಟ್ಟಿಲು ಶಾಸ್ತ್ರ ನಡೆಯಬೇಕಿದೆ. ಅಷ್ಟೇ ಅಲ್ಲದೆ ಮಗುವಿಗೆ ಹೆಸರು ಕೂಡ ಇಡಬೇಕಿದೆ. ಈಗಾಗಲೇ ಅಭಿಮಾನಿಗಳು ಮಗುವಿಗೆ ಅನೇಕ ಹೆಸರನ್ನು ಸೂಚಿಸಿದ್ದಾರೆ. ಶೀಘ್ರದಲ್ಲಿಯೇ ನಾಮಕರಣ ಆಗಬಹುದಾದ ಸಾಧ್ಯತೆಯಿದೆ.
https://www.instagram.com/megsraj/channel/?utm_source=ig_embed