ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸಿ: ರಾಜ್ಯ ಸರ್ಕಾರಕ್ಕೆ ರಂದೀಪ್ ಸುರ್ಜೆವಾಲಾ ಆಗ್ರಹ
ಬೆಂಗಳೂರು: ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಹಿರಿಯ ನಾಯಕ ರಂದೀಪ್ ಸುರ್ಜೇವಾಲಾ ಅವರು ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬಿಜೆಪಿ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಕಳೆದ 9 ದಿನಗಳಿಂದ ಹೆಚ್ಚುತ್ತಲೇ ಇದೆ. ಕಳೆದ 6 ವರ್ಷದಲ್ಲಿ ರೂ. 20 ಲಕ್ಷ ಕೋಟಿ ಲೂಟಿಯಾಗಿದೆ. ರಾಜಸ್ಥಾನದಲ್ಲಿ ವ್ಯಾಟ್ ರೇಟ್ ಕಡಿಮೆ ಆಗಿದೆ. ಆದರೆ ಕರ್ನಾಟಕದಲ್ಲಿ ಏಕೆ ವ್ಯಾಟ್ ರೇಟ್ ಕಡಿಮೆ ಮಾಡಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಅಡುಗೆ ಸಿಲಿಂಡರ್ ದರ ರೂ. 770 ಆಗಿದೆ. ಎಲ್ಲಾ ಅಗತ್ಯ ವಸ್ತುಗಳ ದರ ಗಗನಕ್ಕೇರಿದೆ. ಪ್ರತಿ ಸಿಲಿಂಡರ್ ಮೇಲಿನ ದರವನ್ನು ರೂ.175 ಹೆಚ್ಚು ಮಾಡಲಾಗಿದೆ. 2020-21ರಲ್ಲಿ 2 ಲಕ್ಷ ಕೋಟಿ ತೆರಿಗೆ ಸಂಗ್ರಹಕ್ಕೆ ಮೋದಿ ಸರ್ಕಾರ ನಿರ್ಧರಿಸಿದೆ. ಇದರಿಂದ ಜನಸಾಮಾನ್ಯರಿಗೆ ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳ ಕುರಿತು ಮಾತನಾಡಿದ ಅವರು, ಪಕ್ಷದ ನಾಯಕರು ಹಾಗೂ ಈಗಾಗಲೇ ಆಯ್ಕೆಯಾಗಿರುವ ಜನಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಪೂರ್ಣ ಪ್ರಮಾಣದ ಯೋಜನೆಗಳೊಂದಿಗೆ ಚುನಾವಣೆ ಎದುರಿಸಲಾಗುತ್ತದೆ ಎಂದಿದ್ದಾರೆ.