Yuvarathnaa: ಪುನೀತ್​ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟ ಯುವರತ್ನ ಚಿತ್ರತಂಡ..!

ಪುನೀತ್​ ರಾಜ್​ಕುಮಾರ್ ಹಾಗೂ ಸಂತೋಷ್​ ಆನಂದ್​ ರಾಮ್​ ಕಾಂಬಿನೇಶನ್​ನಲ್ಲಿ ಮೂಡಿ ಬರುತ್ತಿರುವ ಸಿನಿಮಾ ಯುವರತ್ನ. ಅಪ್ಪು ಅಭಿನಯದ ಬಹುನಿರೀಕ್ಷಿತ ಇದಾಗಿದ್ದು, ಇನ್ನು ಬೆಳ್ಳಿ ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.  ಹೊಸ ವರ್ಷದ ದಿನ ಅಂದರೆ ಜನವರಿ ಒಂದರಂದು  ಯುವರತ್ನ ಸಿನಿಮಾದ ರಿಲೀಸ್ ದಿನಾಂಕವನ್ನು ಪ್ರಕಟಿಸುವ ಮೂಲಕ ಚಿತ್ರತಂಡ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್​ ಕೊಟ್ಟಿತ್ತು. ಇನ್ನು ಕೊರೋನಾ ಲಾಕ್​ಡೌನ್​ನಿಂದಾಗಿ ಸುಮಾರು 7 ತಿಂಗಳ ಕಾಲ ಚಿತ್ರಮಂದಿರಗಳು ಬಾಗಿಲು ಮುಚ್ಚಿದ್ದವು. ಹಂತ ಹಂತವಾಗಿ ಲಾಕ್​ಡೌನ್​ ಸಡಿಲಗೊಳ್ಳುತ್ತಿದ್ದಂತೆಯೇ ಮೆಲ್ಲನೆ ಸಿನಿಮಾ ಮಂದಿರಗಳೂ ಬಾಗಿಲು ತೆರೆದವು. ಇದರಿಂದಾಗಿ ತಮ್ಮ ನೆಚ್ಚಿನ ನಟನ ಸಿನಿಮಾಗಳನ್ನು ನೋಡಲು ಸಿನಿಪ್ರಿಯರು ಕಾತರರಾಗಿದ್ದಾರೆ. ಸಿನಿಮಾ ರಿಲೀಸ್​ಗಾಗಿ ಕಾಯುತ್ತಿರುವ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳಿಗೆ ಸಂತೋಷ್​ ರಾಮ್​ ಹಾಗೂ ಅವರ ತಂಡ ಗ ಮತ್ತೊಂದು ಸಿಹಿ ಸುದ್ದಿ ಕೊಟ್ಟಿದೆ. 

ಹೊಂಬಾಳೆ ಫಿಲಂಸ್​ ನಿರ್ಮಾಣದ ಹಾಗೂ ಸಂತೋಷ್​ ಆನಂದ್​ ರಾಮ್​ ನಿರ್ದೇಶನದ ಯುವರತ್ನ ಸಿನಿಮಾ ಏಪ್ರಿಲ್​ 1ರಂದು ರಿಲೀಸ್ ಆಗಲಿದೆ. ಇನ್ನು ಈಗಾಗಲೇ ರಿಲೀಸ್​ ಆಗಿರುವ ಹಾಡುಗಳು, ಪೋಸ್ಟರ್​ಗಳು ಹಾಗೂ ಟೀಸರ್​ ಅಭಿಮಾನಿಗಳಿಗೆ ತುಂಬಾ ಇಷ್ಟ ಆಗಿದೆ. ಇನ್ನು ಇದೇ ತಿಂಗಳ 21ಕ್ಕೆ ಮೂರನೇ ಹಾಡು ರಿಲೀಸ್​ ಆಗಲಿದೆ.

ಥಮನ್​ ಸಂಗೀತ ನಿರ್ದೇಶನ ಮಾಡಿರುವ ಯುವರತ್ನ ಸಿನಿಮಾದಿಂದ ಪಾಠಶಾಲ ಎಂಬ ಹಾಡು ರಿಲೀಸ್ ಆಗಲಿದೆ. ಫೆ. 21ರಂದು ಸಂಜೆ 4;20ಕ್ಕೆ ಹಾಡು ಬಿಡುಗಡೆಯಾಗಲಿದೆ. ಈ ಹಾಡು ಹೇಗಿರಲಿದೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿದೆ.

ಪಾಠಶಾಲಾ ಹಾಡಿನಲ್ಲಿ ಗುರುವಿನ ಬಗ್ಗೆ ಹೆಚ್ಚಾಗಿ ಚಿತ್ರೀಕರಿಸಲಾಗಿದೆಯಂತೆ. ಇನ್ನು ಶಾಲಾ-ಕಾಲೇಜುಗಳಿಗೆ ಹೋಗುವವರಿಗಾಗಿ ಇದನ್ನು ಮಾಡಲಾಗಿದೆ ಎಂದು ಸಂಗೀತ ನಿರ್ದೇಶಕ ಥಮನ್​ ಹೇಳಿಕೊಂಡಿದ್ದಾರೆ.

ಯುವರತ್ನ ಸಿನಿಮಾದಲ್ಲಿ ಪುನೀತ್​ ಮತ್ತೆ ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕಾಗಿ ಅವರು ತಮ್ಮ ದೇಹದ ಮೇಲೆ ತುಂಬಾ ಕೆಲಸ ಮಾಡಿದ್ದಾರೆ. ಈ ಸಿನಿಮಾದಲ್ಲಿ ಪುನೀತ್​ಗೆ ನಾಯಕಿಯಾಗಿ ಸಯೇಷಾ ನಟಿಸಿದ್ದಾರೆ. ಇತ್ತೀಚೆಗಷ್ಟೆ ಈ ಸಿನಿಮಾದ ಪವರ್​ ಆಫ್​ ಯೂತ್​​ ಹಾಡು ರಿಲೀಸ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಪುನೀತ್ ಅವರೊಂಗಿದೆ ಟಗರು ಖ್ಯಾತಿಯ ಡಾಲಿ ಧನಂಜಯ್​ ಸಹ ಕಾಣಿಸಿಕೊಂಡಿದ್ದಾರೆ. ಇವರ ಜೊತೆ ಸುಧಾರಾಣಿ, ದಿಗಂತ್​, ಸೋನು ಗೌಡ, ರಾಧಿಕಾ ಶರತ್​ಕುಮಾರ್​, ಪ್ರಕಾಶ್​ ರೈ ಹಾಗೂ ಇತರರ ತಾರಾಬಳಗವಿದೆ. ಸದ್ಯ ಪುನೀತ್​ ಜೇಮ್ಸ್​ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೆ ಉತ್ತರ ಕರ್ನಾಟಕದಲ್ಲಿ ಜೇಮ್ಸ್​ ಸಿನಿಮಾದ ಶೂಟಿಂಗ್​ ಶೆಡ್ಯೂಲ್​ ಮುಗಿಸಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *