ಹಳದಿ ಕಲ್ಲಂಗಡಿ ಬೆಳೆದು ಸೈ ಎನಿಸಿಕೊಂಡ ಕಲಬುರಗಿಯ ಯುವ ರೈತ

ಬೇಸಿಗೆ ಕಾಲದಲ್ಲಿ ಹೆಚ್ಚು ಬೇಡಿಕೆ ಇರುವ ಹಣ್ಣು ಕಲ್ಲಂಗಡಿ. ಸಾಧಾರಣ ಕೆಂಪು ಬಣ್ಣದ ಕಲ್ಲಂಗಡಿ ಎಲ್ಲರೂ ನೋಡಿರುತ್ತಾರೆ. ಆದರೆ ಕಲಬುರಗಿಯ ಯುವಕನೊಬ್ಬ ಜರ್ಮನ್​ ದೇಶದ ಹಳದಿ ತಳಿಯ ಕಲ್ಲಂಗಡಿ ಬೆಳೆದು ಸೈ ಎನಿಸಿಕೊಂಡಿದ್ದಾನೆ.

ಕಲಬುರಗಿ: ಬಹುತೇಕ ನಾವೆಲ್ಲರೂ ಕೆಂಪು ಬಣ್ಣದ ಕಲ್ಲಂಗಡಿ ನೋಡಿದ್ದೇವೆ, ತಿಂದಿದ್ದೇವೆ. ಆದರೆ ಇಲ್ಲೋಬ್ಬ ಯುವ ರೈತ ಹಳದಿ ಬಣ್ಣದ ಕಲ್ಲಂಗಡಿ ಬೆಳೆದು ಜನರ ಗಮನ ಸೆಳೆದಿದ್ದಾರೆ.

ಜರ್ಮನ್​ ಬೀಜ ತಂದು, ಹಳದಿ ಕಲ್ಲಂಗಡಿ ಬೆಳೆದು, ಹೊಸ ಪ್ರಯೋಗದಲ್ಲಿ ಸಫಲನಾದ ರಾಜ್ಯದ ಮೊದಲ ರೈತ ಅನ್ನೋ ಹೆಗ್ಗಳಿಕೆಗೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಕೊರಳ್ಳಿ ಯುವ ರೈತ ಬಸವರಾಜ್ ಪಾಟೀಲ್ ಪಾತ್ರರಾಗಿದ್ದಾರೆ. ಇವರು ಕಳೆದ 10 ವರ್ಷಗಳಿಂದ ಕೆಂಪು ಕಲ್ಲಂಗಡಿ ಬೆಳೆಯುತ್ತಿದರು. ಒಮ್ಮೆ ಯೂಟೂಬ್​ನಲ್ಲಿ ಸರ್ಚ್ ಮಾಡಿ, ಜರ್ಮನ್ ದಿಂದ ಯಲ್ಲೋಗೋಲ್ಡ್ ಬಣ್ಣದ ಕಲ್ಲಂಗಡಿ ಬೀಜ ತರಿಸಿ ಪ್ರಾಯೋಗಿಕವಾಗಿ 2 ಎಕರೆಯಲ್ಲಿ ಬೆಳೆ ಬೆಳೆದಿದ್ದಾರೆ. ಇದು ನೋಡಲು ಗಾತ್ರದಲ್ಲಿ ಹೆಚ್ಚುಕಮ್ಮಿ ಸಾಮಾನ್ಯ ಕಲ್ಲಂಗಡಿಯಂತೆ ಇದೆ. ಆದರೆ, ಕತ್ತರಿಸಿ ಒಳಗೆ ನೋಡಿದಾಗ ಹಳದಿ ಬಣ್ಣ ಕಂಡುಬರುತ್ತದೆ. ಹಣ್ಣಿನ ರುಚಿ ಸಹ ಉತ್ತಮವಾಗಿದೆ.

ಹಳದಿ ಕಲ್ಲಂಗಡಿ

ಹಳದಿ ಕಲ್ಲಂಗಡಿ

ಆಫ್ರಿಕಾ ಖಂಡದಲ್ಲಿ ಹಳದಿ ಕಲ್ಲಂಗಡಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಇಂತಹ ಕಲ್ಲಂಗಡಿ ಹೆಚ್ಚು ರುಚಿಕರ, ಉಷ್ಣವಲಯದ ದೇಶಗಳಲ್ಲಿ ಸಹ ಬೆಳೆಯಬಹುದು. ಕಲಬುರಗಿ ಜಿಲ್ಲೆ ಸಹ ಹೆಚ್ಚು ಉಷ್ಣಾಂಶ ಹೊಂದಿದ್ದು, ಹಳದಿ ಕಲ್ಲಂಗಡಿ ಭರ್ಜರಿ ಫಸಲು ಬಂದಿದೆ. ಜೊತೆಗೆ ಇದರಲ್ಲಿ ಹೆಚ್ಚಿನ ಕ್ಯಾಲೋರಿ ಸಹ ಇದ್ದು, ಬೇಸಿಗೆಯಲ್ಲಿ ಸಾಕಷ್ಟು ಡಿಮ್ಯಾಂಡ್ ಕೂಡ ಇದೆ.

ಇನ್ನು ಹಳದಿ ಕಲ್ಲಂಗಡಿ ದೊರೆಯುವುದು ಅತೀ ವಿರಳ. ಆರೋಗ್ಯಕ್ಕೆ ಸಹ ಹೆಚ್ಚು ಹಿತಕರ. ಈ ಹಿನ್ನಲೆ ಕೆಂಪು ಕಲ್ಲಂಗಡಿಗಿಂತ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಒಂದು ಟನ್ ಕೆಂಪು ಕಲ್ಲಂಗಡಿ 5 ರಿಂದ 7 ಸಾವಿರಕ್ಕೆ ಮಾರಾಟವಾದರೆ ಹಳದಿ ಕಲ್ಲಂಗಡಿ ದುಪ್ಪಟ್ಟು ಬೆಲೆಗೆ, ಅಂದರೆ 1 ಟನ್ ಹಳದಿ ಕಲ್ಲಂಗಡಿ 15 ಸಾವಿರವರೆಗೆ ಮಾರಾಟವಾಗುತ್ತದೆ.

ಒಟ್ಟಿನಲ್ಲಿ ಯುವ ರೈತನ ಈ ಸಾಧನೆ ಜಿಲ್ಲೆಯ ಜನರ ಗಮನ ಸೆಳೆದಿದೆ. ಎರಡು ಎಕ್ಕರೆಯಲ್ಲಿ ಪ್ರಾಯೋಗಿಕವಾಗಿ ಬೆಳೆದ ಹಳದಿ ಕಲ್ಲಂಗಡಿಯಿಂದ ಹೆಚ್ಚಿನ ಲಾಭ ದೊರೆತಿದ್ದು, ಅನೇಕ ರೈತರಿಗೆ ಬಸವರಾಜ್ ಪಾಟೀಲ್ ಮಾದರಿಯಾಗಿದ್ದಾರೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *