ಕೊರೊನಾ ಎರಡನೇ ಅಲೆ, ಜನರೇ ಹುಷಾರ್.! ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಆಗುತ್ತಾ .?
ಮಹಾರಾಷ್ಟ್ರದಲ್ಲಿ ಮತ್ತೆ ಕೋವಿಡ್ ಸೋಂಕು ಮಹಾಮಾರಿಯ ಅಬ್ಬರ ಜೋರಾಗುತ್ತಿರುವಂತೆಯೇ ಅತ್ತ ಸಿಎಂ ಉದ್ಧವ್ ಠಾಕ್ರೆ ಸರ್ಕಾರ ಮೂರು ಜಿಲ್ಲೆಗಳಲ್ಲಿ ಕಠಿಣ ಲಾಕ್ ಡೌನ್ ಜಾರಿಗೆ ತರಲು ಗಂಭೀರ ಚಿಂತನೆಯಲ್ಲಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ ಕೋವಿಡ್ -19 ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರ ಸರ್ಕಾರವು ರಾಜ್ಯದ ವಿದರ್ಭ ಪ್ರದೇಶದ ಯವತ್ಮಾಲ್, ಅಮರಾವತಿ ಮತ್ತು ಅಕೋಲಾ ನಗರಗಳಲ್ಲಿ ‘ಯಾವುದೇ ಕ್ಷಣದಲ್ಲಿ’ ಕಟ್ಟುನಿಟ್ಟಾದ ಲಾಕ್ ಡೌನ್ ಜಾರಿಗೆಬಹುದು ಎಂದು ಸರ್ಕಾರದ ಮೂಲಗಳು ಗುರುವಾರ ತಿಳಿಸಿವೆ.
ಬುಧವಾರ ಒಂದೇ ದಿನ ರಾಜ್ಯದಲ್ಲಿ 4,787 ಹೊಸ ಕೋವಿಡ್ -19 ಪ್ರಕರಣಗಳನ್ನು ವರದಿಯಾಗಿದೆ, ಇದು ಈ ವರ್ಷದ ಗರಿಷ್ಠ ಏಕದಿನ ಏರಿಕೆ ಎಂದು ಹೇಳಲಾಗಿದೆ. ಜಿಲ್ಲೆಗಳ ಪೈಕಿ ಅತೀ ಹೆಚ್ಚು ಸೋಂಕಿತರು ಕಂಡು ಬಂದ ಜಿಲ್ಲೆಗಳಲ್ಲಿ ಅಮರಾವತಿ ಅಗ್ರಸ್ಥಾನದಲ್ಲಿದ್ದು, ಇಲ್ಲಿ ಒಂದೇ ದಿನ 230 ಪ್ರಕರಣಗಳು ವರದಿಯಾಗಿವೆ. ಮಂಗಳವಾರ ಕೇವಲ 67 ಪ್ರಕರಣಗಳು ದಾಖಲಾಗಿದ್ದ ಅಂಕೋಲಾದಲ್ಲಿ ಬುಧವಾರ 105 ಪ್ರಕರಣಗಳು ವರದಿಯಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈಗಾಗಲೇ ಸರ್ಕಾರ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಮಂಗಳವಾರ ಕೋವಿಡ್ ಮಾನದಂಡಗಳನ್ನು ಬಿಡುಗಡೆ ಮಾಡಿದೆ. ಈ ಮಾನದಂಡಗಳನ್ನು ಜನ ಪಾಲಿಸದಿದ್ದರೆ, ಜನರು ಹೊಸ ಸುತ್ತಿನ ಕಟ್ಟುನಿಟ್ಟಾದ ಲಾಕ್ಡೌನ್ಗೆ ಸಿದ್ಧರಾಗಿರಬೇಕು ಎಂದು ಸಿಎಂ ಉದ್ಧವ್ ಠಾಕ್ರೆ ಎಚ್ಚರಿಕೆ ನೀಡಿದ್ದರು.
ಇನ್ನು ಕರ್ನಾಟಕದಲ್ಲಿ ಕೊರೋನಾ ಜೊತೆ ರೂಪಾಂತರಿ ಕರೋನಾ ಸೋಂಕು ಹರಡುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗುತ್ತಿದೆ. ಮಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿ ಕರೋನಾ ಸೋಂಕಿತರ ಸಂಖ್ಯೆ ಏರಿಕೆ ಆಗಿದೆ. ಹಾಗಾಗಿ ತಮಿಳುನಾಡು ಹಾಗೂ ಮಹಾರಾಷ್ಟ್ರದಿಂದ ನೇರ ಸಂಪರ್ಕ ಹೊಂದಿರುವ ರಾಜ್ಯದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಅಂತ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದಾರೆ.
ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಅಲ್ಪ ಪ್ರಮಾಣದಲ್ಲಿ ಹೆಚ್ಚಳ ಕಂಡಿರುವುದು ನಿಜ ಆದ್ರೆ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲಾ ಅಂತ ಆರೋಗ್ಯ ಸಚಿವ ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಕೋವಿಡ್ ಸೋಂಕಿತರ ಸಂಖ್ಯೆಯಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬರುತ್ತಿದ್ದರೂ ರಾಜ್ಯದಲ್ಲಿ ಮತ್ತೆ ಲಾಕ್ಡೌನ್ ಜಾರಿಗೊಳಿಸುವ ಯಾವುದೇ ಪ್ರಸ್ತಾವ ರಾಜ್ಯ ಸರ್ಕಾರದ ಮುಂದೆ ಇಲ್ಲ. ಕೇರಳದಿಂದ ಬರುತ್ತಿರುವವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್ ಸೋಂಕು ದೃಢಪಡುತ್ತಿದೆ. ಆದರೆ, ಯಾರೂ ಆತಂಕಪಡುವ ಅಗತ್ಯವಿಲ್ಲ. ಕೇರಳದಿಂದ ಬರುವ ಜನರ ಮೇಲೆ ವಿಶೇಷ ನಿಗಾ ಇಡಲಾಗುತ್ತಿದೆ. ಲಾಕ್ಡೌನ್ ಅಥವಾ ಸೀಲ್ಡೌನ್ನಂತಹ ಕ್ರಮಗಳು ಮುಂದೆ ಇರುವುದಿಲ್ಲ ಎಂದಿದ್ದಾರೆ.