ಕುಂಚಾವರಂನಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ; ಮುಂದಿನ ಒಂದು ತಿಂಗಳಲ್ಲಿ ಸಮಸ್ಯೆ ಮುಕ್ತ ಕುಂಚಾವರಂ – ಡಿ.ಸಿ. ವಿ.ವಿ.ಜ್ಯೋತ್ಸ್ನಾ

ಮುಂದಿನ ಒಂದು ತಿಂಗಳಲ್ಲಿ ಕುಂಚಾವರಂ ಗ್ರಾಮವನ್ನು ಸಮಸ್ಯೆ ಮುಕ್ತ ಗ್ರಾಮವನ್ನಾಗಿ ಮಾಡುವುದಾಗಿ ಕಲಬುರಗಿ ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಹೇಳಿದರು.

ಜಿಲ್ಲಾಧಿಕಾರಿಗಳ ನಡೆ-ಹಳ್ಳಿಯ ಕಡೆ ಕಾರ್ಯಕ್ರಮದ ಅಂಗವಾಗಿ ಅವರು ಶನಿವಾರ ಚಿಂಚೋಳಿ ತಾಲೂಕಿನ ಕುಂಚಾವರಂ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಭಾಗವಾಗಿ ವಿವಿಧ ಇಲಾಖೆಯಿಂದ ಸೌಲಭ್ಯ ಪಡೆದ 80 ಜನರಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.


ಗ್ರಾಮ ವಾಸ್ತವ್ಯದ ಅಂಗವಾಗಿ ಕಳೆದ 3-4 ದಿನದಿಂದ ಕಂದಾಯ ಇಲಾಖೆಯ ಅಧಿಕಾರಿ-ಸಿಬ್ಬಂದಿಗಳು ಮನೆ-ಮನೆಗೆ ಭೇಟಿ ನೀಡಿ ಅರ್ಜಿ ಮತ್ತು ಸಮಸ್ಯೆಗಳ ಪಟ್ಟಿ ಪಡೆದಿದ್ದಾರೆ. ಒಟ್ಟಾರೆ 350 ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ ಇಂದು 80 ಅರ್ಜಿಗಳು ಸ್ಥಳದಲ್ಲಿಯೇ ಇತ್ಯರ್ಥಗೊಳಿಸಿ ಪ್ರಮಾಣಪತ್ರ ವಿತರಿಸಲಾಗಿದೆ. 100ಕ್ಕೂ ಹೆಚ್ಚು ಅರ್ಜಿಗಳನ್ನು ಇಂದು ನಾನೇ ಖುದ್ದಾಗಿ ಫಲಾನುಭವಿಗಳಿಂದ ಸಮಸ್ಯೆಯನ್ನು ಆಲಿಸಿದ್ದೇನೆ ಎಂದರು.

ಪಿಂಚಣಿಗೆ ಸಂಬಂಧಿಸಿದ ಇನ್ನೂ 50 ಅರ್ಜಿಗಳು ಬಾಕಿಯಿದ್ದು, ಎರಡು ದಿನದಲ್ಲಿ ವಿಲೇವಾರಿ ಮಾಡಿ ಪಿಂಚಣಿ ಮೊತ್ತ ಖಾತೆಗೆ ಜಮಾವಾಗುವಂತೆ ಕ್ರಮ ವಹಿಸಲಾಗುತ್ತದೆ. ಉಳಿದಂತೆ ಆಧಾರ್ ತಿದ್ದುಪಡಿಗಾಗಿ ಬಂದ 27 ಅರ್ಜಿಯನ್ನು ಇಂದೆ ವಿಲೇವಾರಿಗೊಳಿಸಿದೆ. ಉಳಿದ ಅರ್ಜಿಗಳ ವಿಲೇವಾರಿಯನ್ನು ಮುಂದಿನ ಒಂದು ತಿಂಗಳ ಒಳಗಾಗಿ ಮುಗಿಸಿ ಸಮಸ್ಯೆ ಮುಕ್ತ ಗ್ರಾಮವನ್ನಾಗಿ ಮಾಡಲಾಗುವುದು ಎಂದರು.

ಇಂದಿನ ಗ್ರಾಮ ವಾಸ್ತವ್ಯ ಅಹವಾಲು ಸ್ವೀಕಾರ ಕಾರ್ಯಕ್ರಮದಲ್ಲಿ ಮನೆ-ನಿವೇಶನ, ಪಿಂಚಣಿ ಕೋರಿ ಮತ್ತು ಆರ್.ಟಿ.ಸಿ. ತಿದ್ದುಪಡಿಗೆ ಸಂಬಂಧಿಸಿದಂತೆ ಹೆಚ್ಚಿನ ಅರ್ಜಿಗಳು ಸ್ವೀಕೃತವಾಗಿವೆ. ಅರಣ್ಯ ಭೂಮಿಯನ್ನು ಉಳುಮೆ ಮಾಡಲು ಸಹ ಅರ್ಜಿಗಳು ಬಂದಿದ್ದು, ಇದು ಕಾನೂನು ನಿಯಮಗಳಲ್ಲಿ ಅವಕಾಶವಿಲ್ಲ ಇಂತಹ ಅರ್ಜಿದಾರರಿಗೆ ಪರ್ಯಾಯ ಯೋಜನೆಗಳಲ್ಲಿ ಅವಕಾಶ ಕಲ್ಪಿಸಲಾಗುವುದು. ಇನ್ನುಳಿದಂತೆ ಶಾಲೆ, ಹಾಸ್ಟೆಲ್‍ಗಳಲ್ಲಿ ಮೂಲಭೂತಸೌಕರ್ಯ ಅಭಿವೃದ್ಧಿಪಡಿಸುವ, ಆಸ್ಪತ್ರೆಯಲ್ಲಿನ ಗುಣಮಟ್ಟದ ಚಿಕಿತ್ಸೆ, ಅಂಗನವಾಡಿಯಿಂದ ಮಕ್ಕಳು ಮತ್ತು ಗರ್ಭಿಣಿ-ಬಾಣಂತಿಯರಿಗೆ ಗುಣಮಟ್ಟದ ಆಹಾರ ಪೂರೈಕೆಗೆ ಈಗಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದರು.

ಪ್ರತಿ ತಿಂಗಳ ಮೂರನೇ ಶನಿವಾರ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮುಂದುವರೆಯಲಿದೆ. ತಾವು ಜಿಲ್ಲೆಯ ಜಿಲ್ಲಾಧಿಕಾರಿಯಾಗಿರುವವರೆಗೂ ಪ್ರಮಾಣಿಕವಾಗಿ ಜನ ಸೇವೆ ಮುಂದುವರೆಸುವೆ ಎಂದರು.

ಮಕ್ಕಳ ಮಾರಾಟದಿಂದ ಅಪಖ್ಯಾತಿಗೆ ಒಳಗಾಗಿರುವ ಕುಂಚಾವರಂ ಗ್ರಾಮವನ್ನು ಅಭಿವೃದ್ಧಿ ದಿಶೆಯತ್ತ ಕೊಂಡೊಯ್ಯಬೇಕಾಗಿದೆ. ಇದು ಗ್ರಾಮಸ್ಥರಿಂದ ಮಾತ್ರ ಸಾಧ್ಯ. ಇದಕ್ಕಾಗಿ ನೀವು ಜಾಗೃತರಾಗಬೇಕು. ಮಕ್ಕಳಿಗೆ ಅಸ್ತಿ-ಅಂತಸ್ತು ಮಾಡಬೇಡಿ ಬದಲಿಗೆ ಪೌಷ್ಠಿಕ ಆಹಾರ, ಗುಣಮಟ್ಟದ ಶಿಕ್ಷಣ ನೀಡಿ ಎಂದು ಗ್ರಾಮಸ್ಥರಿಗೆ ಕರೆ ನೀಡಿದರು.

ಸಂಸದ ಡಾ.ಉಮೇಶ ಜಾಧವ ಮಾತನಾಡಿ ತೆಲಂಗಾಣಾ ರಾಜ್ಯದ ಗಡಿಗೆ ಹೊಂದಿಕೊಂಡಿರುವ ಈ ಗ್ರಾಮದ 200-300 ಎಕರೆ ಪ್ರದೇಶ ದಾಖಲೆಗಳಲ್ಲಿ ನಮ್ಮವರ ಹೆಸರಿನಲ್ಲಿದ್ದರೆ ಭೌತಿಕವಾಗಿ ಅದರ ಕಬ್ಜಾ ತೆಲಾಂಗಾಣಾ ರಾಜ್ಯದವರ ಪಾಲಾಗಿದೆ. ಎರಡು ರಾಜ್ಯದ ಅಧಿಕಾರಿಗಳಿಂದ ಗಡಿ ರೇಖೆ ಗುರುತಿಸಲು ಜಂಟಿ ಸರ್ವೆ ಕೈಗೊಂಡಿದ್ದು, ಅದು ಅರ್ಧಕ್ಕೆ ನಿಂತಿದೆ. ಗಡಿ ಸಮಸ್ಯೆ ಬಹಳ ದಿನದಿಂದ ಇತ್ಯರ್ಥಕ್ಕೆ ಬಾಕಿಯಿದ್ದು ಇದನ್ನು ಮೊದಲ ಆದ್ಯತೆ ಮೇಲೆ ಬಗೆಹರಿಸಬೇಕು. ಕುಂಚಾವರಂನಲ್ಲಿ ಅನೇಕ ಭೂಮಿ ಪ್ರಕರಣಗಳು ವ್ಯಾಜ್ಯ ಬಾಕಿಯಿದ್ದು, ಇದನ್ನು ಇತ್ಯರ್ಥಪಡಿಸಲು ಮುಂದಿನ ವಾರದಲ್ಲಿ ಮೂರು ದಿನಗಳ ಕಾಲ ಅಭಿಯಾನ ಕೈಗೊಂಡು ಪೋಡಿ ಮುಕ್ತ ಗ್ರಾಮವನ್ನಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇಲ್ಲಿನ ಐ.ಟಿ.ಯ. ಕಾಲೇಜಿನ ಸ್ವಂತ ಕಟ್ಟಡಕ್ಕೆ 25 ಲಕ್ಷ ರೂ. ಅನುದಾನ ನೀಡುವುದಾಗಿ ಉನ್ನತ ಶಿಕ್ಷಣ ಸಚಿವರಾಗಿರುವ ಡಿ.ಸಿ.ಎಂ. ಡಾ.ಅಶ್ವಥನಾರಾಯಣ ಘೋಷಿಸಿದ್ದಾರೆ. ಇಲ್ಲಿನ ಬಹುತೇಕ ನಿವಾಸಿಗಳು ಸಣ್ಣ-ಪುಟ್ಟ ವ್ಯಾಪಾರಕ್ಕೆ ಹೈದ್ರಾಬಾದ್‍ಗೆ ವಲಸೆ ಹೋಗುತ್ತಾರೆ. ಇಲ್ಲಿ ನಿರುದ್ಯೋಗಿ ಹೆಚ್ಚಿದ್ದು, ಉದ್ಯೋಗ ಮೇಳ ಆಯೋಜಿಸಿ ದುಡಿಯುವವರಿಗೆ ಕೆಲಸ ನೀಡವೇಕಿದೆ. ಯುವಕರಿಗೆ ಕೌಶಲ್ಯಾಭಿವೃದ್ದಿಯ ತರಬೇತಿ ನೀಡಲೆಂದು ಪ್ರಧಾನಮಂತ್ರಿ ಕೌಶಲ್ಯ ಯೋಜನೆಯಡಿ ತರಬೇತಿಗೆ ಹಣ ಬಿಡುಗಡೆಯಾಗಿದ್ದು, ಇದರ ಸದ್ಬಳಕೆಯಾಗಬೇಕು ಎಂದರು.
ಫಲಾನುಭವಿಗಳಿಗೆ ಪ್ರಮಾಣಪತ್ರ ವಿತರಣೆ ವಿವರ: ಸಂಧ್ಯಾ ಸುರಕ್ಷಾ ಯೋಜನೆಯಡಿ 32 ಪಿಂಚಣಿ ಆದೇಶ, ಇಂದಿರಾ ಗಾಂಧಿ ವೃದ್ಧಾಪ್ಯ ಯೋಜನೆಯಡಿ 25 ಆದೇಶ, ನಾಲ್ಕು ಜನರಿಗೆ ವಿಕಲಚೇತನ ಪಿಂಚಣಿ ಆದೇಶ ನೀಡಲಾಯಿತು. 15 ಜನರಿಗೆ ವಿಧವಾ ವೇತನ, 94ಸಿ ಪ್ರಕರಣದಲ್ಲಿ ಓರ್ವರಿಗೆ ಸಕ್ರಮಗೊಂಡ ನಿವೇಶನದ ಹಕ್ಕು ಪತ್ರ, ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ಕಲಂ 49(ಎ) ರಡಿಯಲ್ಲಿ ಓರ್ವರಿಗೆ ಫಾರಂ-10 ಆದೇಶದ ಹಕ್ಕು ಪತ್ರ, ಮನಸ್ವಿನಿ ಯೋಜನೆಯಡಿ ಓರ್ವರಿಗೆ ಹಕ್ಕು ಪತ್ರ, ಭಾಗ್ಯಲಕ್ಷ್ಮಿ ಯೋಜನೆಯಡಿ 5 ಜನರಿಗೆ ಹಾಗೂ 6 ಪಹಣಿ ತಿದ್ದುಪಡಿಯ ಆದೇಶ ಪತ್ರಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕುಂಚಾವರಂ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಜಾತಾ ರಮೇಶ, ಉಪಾಧ್ಯಕ್ಷೆ ಟಿ.ಸಪ್ನಾ, ಸದಸ್ಯ ರೇಣುಕಾ, ಸೇಡಂ ಸಹಾಯಕ ಅಯುಕ್ತ ರಮೇಶ ಕೋಲಾರ, ಭೂದಾಖಲೆಗಳ ಉಪನಿರ್ದೇಶಕ ಶಂಕರ, ಚಿಂಚೋಳಿ ತಹಶೀಲ್ದಾರ ಅರುಣಕುಮಾರ ಕುಲಕರ್ಣಿ, ಸಿ.ಪಿ.ಐ. ಮಹಾಂತೇಷ ಪಾಟೀಲ, ಪಿ.ಡಿ.ಓ. ತುಕ್ಕಪ್ಪ ಸೇರಿದಂತೆ ಇನ್ನಿತರ ಕಂದಾಯ ಇಲಾಖೆಯ ಅಧಿಕಾರಿಗಳು, ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *