ಯತ್ನಾಳ್ ಕಾಂಗ್ರೆಸ್ನ ಬಿ ಟೀಮ್; ಪಕ್ಷೇತರನಾಗಿ ನಿಂತು ಗೆದ್ದು ಬರಲಿ: ಮುರುಗೇಶ್ ನಿರಾಣಿ ಸವಾಲು
ಬೆಂಗಳೂರು(ಫೆ. 22): ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ ಮಾಡುತ್ತಿರುವ ಹೋರಾಟವನ್ನು ಕೆಲವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಸಮಾಜದ ಹಾದಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸ್ವಾಮೀಜಿಗಳು ಇಂಥವರ ಕೈಗೊಂಬೆಯಾಗಬಾರದು ಎಂದು ಪಂಚಮಸಾಲಿ ಸಮುದಾಯದ ಮುರುಗೇಶ್ ನಿರಾಣಿ, ಸಿಸಿ ಪಾಟೀಲ್ ಮೊದಲಾದವರು ಅಭಿಪ್ರಾಯಪಟ್ಟರು. ಈ ಮೂಲಕ ಪಂಚಮಸಾಲಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಬಸನಗೌಡ ಪಾಟೀಲ್ ಯತ್ನಾಳ ಮತ್ತು ವಿಜಯಾನಂದ ಪಾಶಪ್ಪ ಅವರಿಗೆ ತಿರುಗೇಟು ನೀಡಿದರು. 2ಎ ಮೀಸಲಾತಿಗೆ ಆಗ್ರಹಿಸಿ ಹೋರಾಡುತ್ತಿರುವ ಪಂಚಮಸಾಲಿ ಸಮುದಾಯದವರು ನಿನ್ನೆ ಸಮಾವೇಶ ನಡೆಸಿದ ಬಳಿಕ ಇದೀಗ ಮಾರ್ಚ್ 4ರವರೆಗೆ ಧರಣಿ ನಡೆಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಪರವಾಗಿ ಆರು ಪಂಚಮಸಾಲಿ ಶಾಸಕರು ಇಂದು ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಬಸನಗೌಡ ಪಾಟೀಲ್ ಯತ್ನಾಳ, ವಿಜಯಾನಂದ ಕಾಶಪ್ಪ ಮೊದಲಾದವರ ವಿರುದ್ಧ ಹರಿಹಾಯ್ದರು.