ಬಿಸಿತುಪ್ಪವಾದ ಖರ್ಗೆ ಸೂಚನೆ, ಕೈ ನಾಯಕರಿಗೆ ಸಂಕಟ..!

ಹೋದ ಕಡೆ ಬಂದ ಕಡೆಯಲೆಲ್ಲಾ ಮುಂದಿನ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳನ್ನು ಪ್ರಕಟ ಮಾಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷರಿಗೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಸಲಹೆ ಪಕ್ಷದಲ್ಲಿ ಬಿಸಿ ತುಪ್ಪವಾಗಿ ಪರಿಣಮಿಸಿದೆ. ನಿನ್ನೆ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮಲ್ಲಿಕಾರ್ಜನ ಖರ್ಗೆ ಅವರು, ಕೆಪಿಸಿಸಿ ಅಧ್ಯಕ್ಷರೂ ಸೇರಿದಂತೆ ಪಕ್ಷದ ಯಾವುದೇ ನಾಯಕರೂ ಅಭ್ಯರ್ಥಿಗಳನ್ನು ಘೋಷಿಸುವ ಕೆಲಸ ಮಾಡಬಾರದು ಎಂದು ಬಹಿ ರಂಗವಾಗಿ ಹೇಳಿದರು. ಇದು ಪಕ್ಷದಲ್ಲಿ ಭಾರೀ ಚರ್ಚೆಗೆ ಗ್ರಾಹಸವಾಗಿದೆ.

ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶ ಇಲ್ಲ ಎನ್ನುತ್ತಲೇ ಬಹಳಷ್ಟು ನಾಯಕರು ಬಹಿರಂಗ ಸಭೆಗಳಲ್ಲೇ ತಮ್ಮ ಬೆಂಬಲಿಗರನ್ನು ಪಕ್ಕಕ್ಕೆ ನಿಲ್ಲಿಸಿಕೊಂಡು ಈತ ಮುಂದಿನ ಅಭ್ಯರ್ಥಿ ಎಂದು ಹೇಳುತ್ತಿದ್ದರು. ಇದು ಒಂದು ರೀತಿ ಒಳ್ಳೆಯದಾಗಿದ್ದು, ಮತ್ತೊಂದು ರೀತಿ ಕೆಟ್ಟದಾಗುತ್ತಿತ್ತು. ಸಂಭವನೀಯ ಅಭ್ಯರ್ಥಿಗಳನ್ನು ಘೋಷಿಸುವ ಮೂಲಕ ಮುಂದಿನ ಚುನಾವಣೆಗೆ ತಯಾರಿ ಮಾಡಿಕೊಳ್ಳಲು ಸೂಚಿತ ವ್ಯಕ್ತಿಗಳಿಗೆ ಸಮಾಯವಕಾಶ ಸಿಗುತ್ತಿತ್ತು. ಚುನಾವಣೆ ಸಂದರ್ಭದಲ್ಲಿ ಸೂಚಿತ ವ್ಯಕ್ತಿಗೆ ಬಿ ಫಾರಂ ಸಿಕ್ಕಿದಾದರೆ ಗೆಲ್ಲುವ ಅವಕಾಶಗಳು ಹೆಚ್ಚಿರುತ್ತಿದ್ದವು.

ಈ ಹಿಂದೆಲ್ಲಾ ನಾಮಪತ್ರ ಸಲ್ಲಿಸುವ ಕೊನೆ ಕ್ಷಣದಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡುತ್ತಿದ್ದರಿಂದ ಕಾಂಗ್ರೆಸ್‍ಗೆ ಸಾಕಷ್ಟು ಹಿನ್ನಡೆಯಾಗಿದೆ. ಅಭ್ಯರ್ಥಿ ಯಾರು ಎಂಬ ಗೊಂದಲದಲ್ಲೇ ಕಾರ್ಯಕರ್ತರು ಇರುತ್ತಿದ್ದರು. ಯಾವುದೇ ಪೂರ್ವ ತಯಾರಿ ಆಗುತ್ತಿರಲಿಲ್ಲ. ಹಿಂದಿನ ರಾತ್ರಿ ಬಿ ಫಾರಂ ಖಚಿತಗೊಳ್ಳುತ್ತಿದ್ದರಿಂದ ಅಧೋಗತಿಯಲ್ಲಿ ನಾಮಪತ್ರ ಸಲ್ಲಿಸಿ ಕೆಲವೇ ಕೆಲವು ದಿನಗಳಲ್ಲಿ ಚುನಾವಣೆಗೆ ತಯಾರಾಗಬೇಕಾಗುತ್ತಿತ್ತು.

ಈ ರೀತಿಯ ಒತ್ತಡಗಳನ್ನು ತಪ್ಪಿಸುವ ಸಲುವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಅನೇಕರು ಸಾರ್ವಜನಿಕ ಸಮಾರಂಭಗಳಲ್ಲಿ ತಮ್ಮ ಬೆಂಬಲಿಗರಗನ್ನು ಪಕ್ಕ ನಿಲ್ಲಿಸಿಕೊಂಡು ಮಾತನಾಡುತ್ತಿದ್ದರು. ಅದು ಮುಂದಿನ ಚುನಾವಣೆ ಈತ ಅಭ್ಯರ್ಥಿ ಎಂಬಂತೆ ಇರುತ್ತಿತ್ತು. ಇನ್ನು ಕೆಲವು ಕಡೆ ಈ ವ್ಯಕ್ತಿ ಮುಂದಿನ ಚುನಾವಣೆಯ ಅಭ್ಯರ್ಥಿ ಎಂದು ಕೂಡ ಘೋಷಣೆ ಮಾಡಲಾಗಿದೆ.

S S Benakanalli

Founder , Director Of KK NEWS KANNADA _ S S BENAKANAHALLI

Leave a Reply

Your email address will not be published. Required fields are marked *